ವಿಜಯಪುರ: ಸಮಾಜದಲ್ಲಿ ಕೋಮು ಭಾವನೆ ಸೃಷ್ಟಿಸುವ ಚಕ್ರವರ್ತಿ ಸೂಲಿಬೆಲೆ ಆಟ ಇನ್ನು ನಡೆಯದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಭಾನುವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರು ಸೂಲಿಬೆಲೆ ಸರ್ವಾಧಿಕಾರಿ ಸರ್ಕಾರ ಎಂದು ಟೀಕಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಇವರಿಗೇನು ಜನರು ಕೇಸರಿ ಗುತ್ತಿಗೆ ನೀಡಿಲ್ಲ. ಬಿಜೆಪಿ ಸರ್ಕಾರದಲ್ಲಿ ಹಿಜಾಬ್, ಹಲಾಲ್, ಉರಿಗೌಡ ಅಂತೆಲ್ಲ ಸಮಾಜದಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ ಬಿಜೆಪಿ, ರಾಜ್ಯದ ಅಭಿವೃದ್ಧಿ ಕಡೆಗಣಿಸಿತು. ರೋಸಿಹೋದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದೆ. ಮಾಧ್ಯಮಗಳೂ ಸೇರಿದಂತೆ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಕಾಂಗ್ರೆಸ್ ಪಕ್ಷಕ್ಕೆ ಅದ್ಭುತ ಬಹುಮತದ ಸರ್ಕಾರ ರಚನೆಗೆ ಮತದಾರ ಪ್ರಭುಗಳು ಆಶೀರ್ವಾದ ಮಾಡಿದ್ದಾರೆ. ನಮ್ಮ ಸರ್ಕಾರ ಎಲ್ಲ ಸಮುದಾಯಗಳ ರಕ್ಷಣೆ ವಿಷಯದಲ್ಲಿ ವಿಶೇಷ ಕಾಳಜಿ ತೋರಲಿದೆ ಎಂದರು.
ಗೋಹತ್ಯೆ ನಿಷೇಧ ಕಾನೂನು, ಮುಸ್ಲಿಮರಿಂದ ಕಿತ್ತುಕೊಂಡ ಶೇ.4 ಮೀಸಲಾತಿ, ಮತಾಂತರ ನಿಷೇಧ ಕಾನೂ ಹಿಂಪಡೆಯುವುದು ಸೇರಿದಂತೆ ಅಹಿಂದ ಸಂಘಟನೆಯ ಬೇಡಿಕೆ ಈಡೇರಿಸುವ ಕುರಿತು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.