ವಿಜಯಪುರ: ರಾಜಕೀಯ ಪ್ರೇರಿತವಾಗಿ ಬಿಜೆಪಿ ಸರ್ಕಾರ ಪ್ರಕಟಿಸಿರುವ ಒಕ್ಕಲಿಗರು, ಲಿಂಗಾಯತರಿಗೆ ಮೀಸಲು ಕಾನೂನಾತ್ಮಕ ಹೋರಾಟದಲ್ಲಿ ಸೋಲಾಗುವ ರೀತಿಯಲ್ಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ತಿಕೋಟ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ತೆರವಾಗಿದೆಯೇ ಹೊರತು, ತಕರಾರು ಅರ್ಜಿಯಲ್ಲ, ನಿರ್ಧಾರ ಕೈಗೊಳ್ಳಿ ಎಂದೂ ಅಲ್ಲ. ಹೀಗಾಗಿ ಸರ್ಕಾರ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯ ಸಮುದಾಯಗಳನ್ನು ವಂಚಿಸುವಂತಿದೆ ಎಂದರು.
ಅಲ್ಪಸಂಖ್ಯಾತ ಸಮುದಾಯಕ್ಕಿದ್ದ ಶೇ.4 ರಷ್ಟು ಮೀಸಲನ್ನು ಅವರನ್ನು ಸೌಜನ್ಯದ ವಿಚಾರಣೆಗೂ ಕರೆಯದೇ ಬಿಜೆಪಿ ಸರ್ಕಾರ ಒಕ್ಕಲಿಗರಿಗೆ 2ಸಿ ಹಾಗೂ ಲಿಂಗಾಯತರಿಗೆ 2ಡಿ ಮೀಸಲಾತಿ ಘೋಷಣೆ ಮಾಡಿದೆ. ಬಿಜೆಪಿ ಸರ್ಕಾರದ ಆತುರದ ನಿರ್ಧಾರಗಳು ಸಮುದಾಯಗಳಲ್ಲಿ ಧ್ವೇಷ ಸೃಷ್ಟಿಸುವ ನಿರ್ಣಯಗಳಾಗಿವೆ. ಇದು ಚುನಾವಣೆಯಲ್ಲಿ ಮತ ಸೆಳೆಯುವ ತಂತ್ರಗಾರಿಕೆಯಲ್ಲದೇ ಮತ್ತೇನೂ ಅಲ್ಲ ಎಂದು ಹರಿಹಾಯ್ದರು.
ಸಿದ್ದುಗೆ ಮಾಸ್ ಲೀಡರ್: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಿರುವ ಹೈಕಮಾಂಡ್ ನಿರ್ಧಾರ ಸೂಕ್ತವಾಗಿದೆ. ಸಿದ್ಧರಾಮಯ್ಯ ಏನು ನಿರ್ಧಾರ ಕೈಗೊಳ್ಳುತ್ತಾರೋ ಗೊತ್ತಿಲ್ಲ ಎಂದು ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದರು.
Related Articles
ಸಿದ್ಧರಾಮಯ್ಯ ಅವರು ಜನಸಮುದಾಯದ ಮಾಸ್ ಲೀಡರ್. ವರುಣಾ, ಕೋಲಾರ, ಬದಾಮಿ ಮಾತ್ರವಲ್ಲ ಮೀಸಲು ಕ್ಷೇತ್ರಗಳ ಹೊರತಾಗಿ ಹಾಗೂ ನನ್ನ ಕ್ಷೇತ್ರದಲ್ಲೇ ಸ್ಪರ್ಧಿಸಿದರೂ ಭಾರಿ ಮತಗಳ ಅಂತರದಿಂದ ಗೆಲ್ಲುವ ಶಕ್ತಿ ಇರುವ ನಾಯಕ ಎಂದರು.
ವರುಣಾ ಕ್ಷೇತ್ರದ ಜನರಿಗೆ 2018ರಲ್ಲಿ ಸಿದ್ದರಾಮಯ್ಯ ಶಕ್ತಿಯ ಮಹತ್ವ ಗೊತ್ತಾಗಲಿಲ್ಲ, ಇದೀಗ ಪರಿತಪಿಸುವವರಿಗೆ ಅವರ ಶಕ್ತಿ ಗೊತ್ತಾಗಿದೆ. ಕೇವಲ ಹುಟ್ಟುಹಬ್ಬಕ್ಕೆ ಲಕ್ಷ ಲಕ್ಷ ಜನಸ್ತೋಮ ಸೇರಿದ್ಧೇ ಸಾಕ್ಷಿ. ಸಿದ್ಧರಾಮಯ್ಯ ಸ್ಪರ್ಧಿಸುವ ಕ್ಷೇತ್ರದ ಸುತ್ತಲೂ ನೂರಾರು ಕ್ಷೇತ್ರದಲ್ಲಿ ಅವರ ಪ್ರಭಾವ ಇರುತ್ತದೆ ಎಂದರು.
ಕಾಂಗ್ರೆಸ್ ಪಕ್ಷದ ಶಕ್ತಿಯಾಗಿರುವ ಸಿದ್ಧರಾಮಯ್ಯ ಅವರಿಗೆ ಪಕ್ಷದ ವರಿಷ್ಠ ನಾಯಕರಾದ ರಾಹುಲ್ ಗಾಂಧಿ ಅವರು ಸಲಹೆ ಬಗ್ಗೆ ನನಗೇನೂ ತಿಳಿದಿಲ್ಲ. ಅವರಿಬ್ಬರ ಮಧ್ಯೆ ನಡೆದ ಮಾತುಕತೆಗಳ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಕಳೆದ ಚುನಾವಣೆಯಲ್ಲಿ ವೀರಶೈವ-ಲಿಂಗಾಯತರಿಗೆ 40 ಕಡೆಗಳಲ್ಲಿ ಟಿಕೆಟ್ ನೀಡಿದ್ದು, ಈ ಬಾರಿ 60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಟಿಕೆಟ್ ನೀಡುವಂತೆ ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದ್ಧೇವೆ. ಅಲ್ಪಸಂಖ್ಯಾತರು ಕೂಡ ಕಳೆದ ಬಾರಿ 17 ಟಿಕೆಟ್ ನೀಡಿದ್ದು, ಈ ಬಾರಿ 23 ಸ್ಥಾನಗಳಲ್ಲಿ ಸ್ಪರ್ಧೆಗೆ ಅವಕಾಶ ಕೊಡಿ ಎಂದು ಬೇಡಿಕೆ ಮಂಡಿಸಿದ್ದಾರೆ. ಒಕ್ಕಲಿಗರೂ ಹೆಚ್ಚಿನ ಸ್ಥಾನ ಕೊಡಿ ಅಂತಿದ್ದಾರೆ ಎಂದರು.
ಯಾವುದೇ ಸಮಾಜದವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮತಕ್ಷೇತ್ರದ ಅನುಗುಣವಾಗಿ ಪಕ್ಷ ಎಲ್ಲೆಲ್ಲಿ ಗೆಲ್ಲುತ್ತದೆಯೋ ಅಲ್ಲಿ ಸಾಮಾಜಿಕ ನ್ಯಾಯದೊಂದಿಗೆ ಪಕ್ಷ ಟಿಕೆಟ್ ನೀಡಲಿದೆ ಎಂದರು.
ಕಾಂಗ್ರೆಸ್ ಪಕ್ಷ ಒಂದು ಹೆಸರು ಇರುವ 124 ಕ್ಷೇತ್ರಗಳಲ್ಲಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಿದೆ. ಒಂದಕ್ಕಿಂತ ಹೆಚ್ಚು ಸ್ಪರ್ಧಾ ಆಕಾಂಕ್ಷಿಗಳಿವ ಇತರೆ ಕ್ಷೇತ್ರಗಳ ವಿಷಯದಲ್ಲಿ ಸ್ಕ್ರೀನಿಂಗ್ ಕಮಿಟಿ ಹಾಗೂ ಪಕ್ಷ ಮುಖಂಡರು ನಿರ್ಧರಿಸುತ್ತದೆ. ಕೊಂಚ ಗೊಂದಲ ಕಂಡುಬಂದಲ್ಲಿ ಕೇಂದ್ರೀಯ ಚುನಾವಣೆ ಸಮಿತಿಯಲ್ಲಿ ನಿರ್ಧಾರವಾಗಲಿದೆ ಎಂದರು.
ಇದನ್ನೂ ಓದಿ: ಮೀಸಲಾತಿ ಕುರಿತ ಬೊಮ್ಮಾಯಿ ಸರ್ಕಾರದ ತೀರ್ಮಾನಗಳು ಕೇವಲ ಚುನಾವಣಾ ಗಿಮಿಕ್ಕು: ಸಿದ್ದು ಕಿಡಿ