Advertisement
ಈ ಬಾರಿಯ ನಗರ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಬಿಸಿಎಗೆ ಮೀಸಲಾಗಿದೆ. ಹೀಗಾಗಿ ಎರಡು ಪಕ್ಷಗಳೂ ಮೇಯರ್ ಸ್ಥಾನ ಪಡೆಯಲು ತಂತ್ರ-ಪ್ರತಿತಂತ್ರ ರೂಪಿಸಿದ್ದವು, ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಉಭಯ ಪಕ್ಷಗಳು ಪಾಲಿಕೆ ಅಧಿಕಾರ ಹಿಡಿಯಲು ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿವೆ.
Related Articles
Advertisement
ಸದಸ್ಯರ ಬಲಾಬಲ: ಈ ಬಾರಿ ಪಾಲಿಕೆಯಲ್ಲಿ ಬಿಜೆಪಿ-22, ಕಾಂಗ್ರೆಸ್-19, ಜೆಡಿಎಸ್-18, ಬಿಎಸ್ಪಿ-1 ಹಾಗೂ 5 ಪಕ್ಷೇತರ ಸದಸ್ಯರಿದ್ದಾರೆ. ಇದರಲ್ಲಿ 18 ಸ್ಥಾನವನ್ನು ಪಡೆದಿರುವ ಜೆಡಿಎಸ್ ಮಿತ್ರ ಪಕ್ಷ ಬಿಸ್ಪಿ ಜತೆ ಸೇರಿ 19 ಸ್ಥಾನಗಳನ್ನು ಹೊಂದಿದೆ. ಜತೆಗೆ ಓರ್ವ ಶಾಸಕ ಹಾಗೂ ಮೂವರು ವಿಧಾನಪರಿಷತ್ ಸದಸ್ಯರ ಬೆಂಬಲದೊಂದಿಗೆ 23 ಸ್ಥಾನಗಳನ್ನು ಪಡೆದಿದೆ.
ಇನ್ನೂ 19 ಸ್ಥಾನವನ್ನು ಗಳಿಸಿರುವ ಕಾಂಗ್ರೆಸ್ ಮೂವರು ಪಕ್ಷೇತರರು ಓರ್ವ ವಿಧಾನಪರಿಷತ್ ಸದಸ್ಯ ಹಾಗೂ ಓರ್ವ ಶಾಶಕರ ನೆರವಿನಿಂದ 24 ಚುನಾಯಿತ ಸದಸ್ಯರ ಬೆಂಬಲ ಹೊಂದಿದೆ. ಆದರೆ ಪಾಲಿಕೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ 22 ಸದಸ್ಯರ ಜತೆಗೆ ಇಬ್ಬರು ಶಾಸಕರು,
ಓರ್ವ ಸಂಸದರ ಬೆಂಬಲದಿಂದ 25 ಸ್ಥಾನ ಹೊಂದಿದೆ. ನಗರ ಪಾಲಿಕೆ ಸದಸ್ಯರು ಹಾಗೂ ಚುನಾಯಿತ ಸದಸ್ಯರು ಸೇರಿ 74 ಮಂದಿ ಮತದಾನದ ಅರ್ಹತೆ ಪಡೆದಿದ್ದು, ಬಹುಮತಕ್ಕೆ 38 ಸದಸ್ಯರ ಬೆಂಬಲ ಅಗತ್ಯವಿದೆ. ಹೀಗಾಗಿ ಮೈತ್ರಿ ಪಕ್ಷಗಳಿಂದ 47 ಸದಸ್ಯರ ಬಲ ಆಗಲಿದೆ.
ಸಾ.ರಾ-ತನ್ವೀರ್ ಭೇಟಿ: ಪಾಲಿಕೆ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಸಾ.ರಾ. ಮಹೇಶ್ ಹಾಗೂ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪರಸ್ಪರ ಭೇಟಿಯಾಗಿದ್ದರು. ಶುಕ್ರವಾರ ಬೆಳಗ್ಗೆ ಸಚಿವ ಸಾ.ರಾ. ಮಹೇಶ್ ಕಚೇರಿಗೆ ಆಗಮಿಸಿದ ಶಾಸಕ ತನ್ವೀರ್ ಸೇಠ್, ಮೇಯರ್ ಸ್ಥಾನದ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು.
ಈ ವೇಳೆ ಮೊದಲ ಅವಧಿಯಲ್ಲಿ ಮೇಯರ್ ಸ್ಥಾನ ಪಡೆದವರಿಗೆ ಎರಡು ವರ್ಷ ಅಧಿಕಾರ ಹಾಗೂ 2ನೇ ಅವಧಿಗೆ ಮೇಯರ್ ಸ್ಥಾನ ಪಡೆದವರಿಗೆ ಮೂರು ವರ್ಷ ಅಧಿಕಾರ ಸಿಗಲಿದ್ದು, ಮುಡಾ ಅಧ್ಯಕ್ಷ ಸ್ಥಾನದ ಹಂಚಿಕೆಯಲ್ಲೂ ಇದೇ ನಿಯಮ ಅನುಸರಿಸುವ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು.
ರೆಸಾರ್ಟ್ ರಾಜಕಾರಣ: ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ತಮ್ಮಪಕ್ಷದ ಸದಸ್ಯರನ್ನ ರಕ್ಷಿಸಿಕೊಳ್ಳಲು ಜೆಡಿಎಸ್ ತನ್ನ ಸದಸ್ಯರನ್ನು ಈಗಲ್‌ಟನ್ ರೆಸಾರ್ಟ್‌ನಲ್ಲಿ ಇರಿಸಿದೆ. ಜೆಡಿಎಸ್‌ನ ನಗರಾಧ್ಯಕ್ಷ ಕೆ.ಟಿ. ಚೆಲುವೇಗೌಡ ನೇತೃತ್ವದಲ್ಲಿ ಜೆಡಿಎಸ್‌ನ 18 ನಗರ ಪಾಲಿಕೆ ಸದಸ್ಯರು ರೆಸಾರ್ಟ್‌ನತ್ತ ತೆರಳಿದ್ದಾರೆ.
ಕಾಂಗ್ರೆಸ್‌ಗೆ ಬೆಂಬಲ: ಪಾಲಿಕೆ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷೇತರ ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಕೆ.ವಿ.ಶ್ರೀಧರ್, ರಾಮಕೃಷ್ಣನಗರದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಕಾಣಿಸಿಕೊಂಡ ಅವರು, ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ “ಕೈ’ಗೆ ಬೆಂಬಲ ನೀಡುವುದಾಗಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಸಭೆ: ನಗರ ಪಾಲಿಕೆ ಮೇಯರ್ ಸ್ಥಾನ ಕಾಂಗ್ರೆಸ್ ಪಾಲಾಗುವುದು ಬಹುತೇಕ ಖಚಿತವಾಗಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಮತ್ತು ಸಚಿವ ಕೃಷ್ಣ ಭೈರೇಗೌಡ ಅವರು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಮಾತುಕತೆ ನಡೆಸಿದರು.
ಜತೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ರಾತ್ರಿ ಸಭೆ ನಡೆಸಿದ ಕಾಂಗ್ರೆಸ್ ವರಿಷ್ಠರು, ಪಕ್ಷದಲ್ಲಿನ ಮೇಯರ್ ಆಕಾಂಕ್ಷಿಗಳ ಆಯ್ಕೆ ಕುರಿತು ಚರ್ಚೆ ನಡೆಸಿದರು. ಕಾಂಗ್ರೆಸ್‌ನಿಂದ ಮಾಜಿ ಉಪ ಮೇಯರ್ ಶಾಂತಕುಮಾರಿ ಹಾಗೂ ಶೋಭಾ ಸುನೀಲ್ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಕಾದು ನೋಡುವ ತಂತ್ರ: ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಪಾಲಿಕೆ ಅಧಿಕಾರ ಹಿಡಿಯಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ 22 ಸದಸ್ಯ ಬಲದೊಂದಿಗೆ ದೊಡ್ಡ ಪಕ್ಷವಾಗಿರುವ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಮೇಯರ್-ಉಪ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿದ್ದು, ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.
ಇಂದು ಚುನಾವಣೆ: ಮೈಸೂರು ಮಹಾನಗರ ಪಾಲಿಕೆಯ ಮೇಯರ್-ಉಪ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಇಂದು(ನ.17) ಬೆಳಗ್ಗೆ 11.30ಕ್ಕೆ ಚುನಾವಣೆ ನಡೆಯಲಿದೆ. ನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಬೆಳಗ್ಗೆ 7 ರಿಂದ 9.30 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ನಂತರ 11.30ಕ್ಕೆ ಚುನಾವಣಾ ವಿಶೇಷ ಸಭೆ ಆರಂಭವಾಗಲಿದೆ.