Advertisement
ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಿಂದ ಕೆಲವೇ ದೂರದಲ್ಲಿರುವ ಕೋಟೆಕಣಿಯಲ್ಲಿ ಅಳಿದು ಳಿದ ಕೋಟೆ ಕಾಲದ ಕರಾಳತೆಗೆ ನಲುಗಿ ಕಣ್ಣೀರಿಡುತ್ತಿದೆ. ಮಾಯಿಲರಸನ ಕಾಲದ ಈ ಐತಿಹಾಸಿಕ ಅವಶೇಷ ನೆಲಸಮವಾಗುವ ದಿನಗಳು ದೂರವಿಲ್ಲ. ಎತ್ತರದ ಬತ್ತೇರಿಯ ಮೇಲೆ ನಿಂತರೆ ನಾಲೆªಸೆಗೂ ದೃಷ್ಟಿ ನಿಲುಕುತ್ತದೆ. ಪ್ರಕೃತಿ ರಮಣೀಯ ದೃಶ್ಯ ಗೋಚರಿಸುತ್ತದೆ. ಮಾಯಿಲರಸ ನಿರ್ಮಿಸಿದ ಕೋಟೆಕಣಿಯ ಕೋಟೆ ನಾಮಾವಶೇಷದ ಅಂಚಿನಲ್ಲಿದ್ದು, ಒಂದು ಇತಿಹಾಸವೇ ಕಣ್ಮರೆಯಾಗುವ ಹಂತದಲ್ಲಿದೆ. ಕೋಟೆಯ ಭೂಭಾಗ ಅನ್ಯರ ಪಾಲಾಗಿದೆ. ಅಲ್ಪಸ್ವಲ್ಪ ಉಳಿದುಕೊಂಡ ಕೋಟೆಯ ಭಾಗದಲ್ಲಿ ಬತ್ತೇರಿ, ಬುರುಜುಗಳ ಕುರುಹು ಗಳು ಮಾತ್ರವೇ ಉಳಿದುಕೊಂಡಿವೆ. ಸುತ್ತ ಕಾಡು ಬೆಳೆದು ಒಳಕ್ಕೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಕೆಂಗಲ್ಲು ಮತ್ತು ಮಣ್ಣಿನಲ್ಲಿ ನಿರ್ಮಿಸಿದ ಕೋಟೆಯ ಸುತ್ತು ಗೋಡೆ ಅಲ್ಲಲ್ಲಿ ಉಳಿದುಕೊಂಡಿದೆ.
Related Articles
Advertisement
ಕೊಟ್ಟಾರಿಗುಡ್ಡೆಯಲ್ಲಿ ಅರಮನೆ ಮಾಯಿಲರಸ ಮಧೂರು ಶ್ರೀ ಮದನಂತೇಶ್ವರದ ಅನನ್ಯ ಭಕ್ತ. ಮಧೂರು ದೇವಾಲಯದ ಮುಂಭಾಗದ ಕೊಟ್ಟಾರಿಗುಡ್ಡೆಯಲ್ಲಿ ಅವನ ಅರಮನೆ ಇತ್ತು. ಪಟ್ಲದಲ್ಲಿ ಕಳಿಯಾಟದ ಸಂದರ್ಭದಲ್ಲಿ ನಡೆಯುವ ದೈವಗಳ ನುಡಿಗಟ್ಟಿನಲ್ಲಿ ಮಾಯಿಲರಸನ ಪ್ರಸ್ತಾವ ಬರುತ್ತದೆ. ಕೊಟ್ಟಾರಿಗುಡ್ಡೆ ಮತ್ತು ಜೇನಕ್ಕೋಡಿನಲ್ಲಿ ಅವನತಿಯ ಅಂಚಿನಲ್ಲಿರುವ ಬುರುಜುಗಳನ್ನು ಕಾಣಬಹುದು. ಉಳಿಯತ್ತಡ್ಕದಲ್ಲಿದ್ದ ಬತ್ತೇರಿಯೊಂದು ವರ್ಷಗಳ ಹಿಂದೆಯೇ ನೆಲಸಮವಾಗಿದೆ. ದಕ್ಷಿಣದ ಅರಸನೊಬ್ಬ ದಂಡೆತ್ತಿ ಬಂದಾಗ ಆತನನ್ನು ಮಾಯಿಲರಸ ಉಳಿಯತ್ತಡ್ಕ ಮೈದಾನದಲ್ಲಿ ನಡೆದ ಯುದ್ಧದಲ್ಲಿ ಪರಾಭವಗೊಳಿಸಿ ಓಡಿಸಿದ್ದನೆಂಬ ವೃತ್ತಾಂತ ಜನಪದದಲ್ಲಿದೆ. ಮಾಯಿಲರಸನು ಪೂಜೆಯನ್ನು ನೋಡಲು ನಿತ್ಯವೂ ಮಧೂರು ದೇವಾಲಯಕ್ಕೆ ಬರುತ್ತಿದ್ದನಂತೆ. ನದಿಯಲ್ಲಿ ಮಿಂದು ಮಡಿಯಾಗಿ ದೇವಸ್ಥಾನದ ಪೂಜೆ ವೀಕ್ಷಿಸುವುದು ಆತನ ಕ್ರಮವಾಗಿತ್ತು. ಕಾಟುಕುಕ್ಕೆ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಮಂಗಳೂರು ಮೊದಲಾದೆಡೆ ಮಾಯಿಲರಸನ ಕೋಟೆಗಳಿರುವುದಾಗಿ ಇತಿಹಾಸ ತಜ್ಞರು ಹೇಳುತ್ತಾರೆ. ಆದರೆ ಅವುಗಳು ಅಸ್ತಿತ್ವ ಪಡೆದ ಬಗ್ಗೆ ಜಿಜ್ಞಾಸೆಯಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯ ಬೇಕಾಗಿದೆ. ಮಧೂರು ದೇವಾಲಯದ ಸ್ಥಾಪನೆಯ ಕಾಲ ಮತ್ತು ಮಾಯಿಲರಸನ ಆಡಳಿತ ಕಾಲವನ್ನು ಇತಿಹಾಸಕಾರರು ಸಮೀಕರಿಸಿದ್ದಾರೆ. ಅಡೂರು, ಮಧೂರು, ಕಾವು, ಕಣಿಪುರ ದೇವಾಲಯಗಳು ಮೂಲ ನಿವಾಸಿ ಗಳ ಬದುಕಿನಲ್ಲಿ ಪ್ರಬಲವಾದ ಸಂಬಂಧವನ್ನು ಪಡೆದಿದೆ. ಇದನ್ನು ಸಮರ್ಥಿ ಸಲು ಸಾಕಷ್ಟು ಐತಿಹ್ಯಗಳನ್ನು ಇಲ್ಲಿನ ಜನಪದರು ಒದಗಿಸುತ್ತಾರೆ.
– ರಾಧಾಕೃಷ್ಣ ಕೆ. ಉಳಿಯತ್ತಡ್ಕ,
ಕವಿ, ಲೇಖಕ, ಜಾನಪದ ತಜ್ಞ – ಪ್ರದೀಪ್ ಬೇಕಲ್