ದೊಡ್ಡಬಳ್ಳಾಪುರ: ಈ ಬಾರಿ ಮಾಯಾವತಿ ಪ್ರಧಾನಿ ಆಗುವು ದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇಲ್ಲಿನ ನೀರು, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಧ್ವನಿಯಾಗಲು ಬಿಎಸ್‌ಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಡಾ.ಸಿ.ಎಸ್.ದ್ವಾರಕನಾಥ್ ಅವರು ಮತದಾರರಲ್ಲಿ ಮನವಿ ಮಾಡಿದರು. ಬಿಎಸ್‌ಪಿ ಚುನಾವಣಾ ಪ್ರಚಾರದ ಬೈಕ್ ರ್ಯಾಲಿಯನ್ನು ಉದ್ಘಾಟಿಸಿದ ನಂತರ ರೋಡ್ ಶೋನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ 10 ವರ್ಷದಿಂದ ನೀರು ನೀಡುತ್ತೇನೆಂದು ಸುಳ್ಳು ಹೇಳುತ್ತಿರುವ ವೀರಪ್ಪ ಮೊಯ್ಲಿ ಲೋಕಸಭೆ ಯಲ್ಲಿ ನೀರಿನ ಕುರಿತು ಇದುವರೆಗೂ ಮಾತನಾಡಿಲ್ಲ. ಇಲ್ಲಿನ ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ ತಮ್ಮ ಅಭಿವೃದ್ಧಿ ಕುರಿತು ಮಾತನಾಡದೇ ಒಬ್ಬರ ಮೇಲೊಬ್ಬರು ವಾಗ್ಧಾಳಿ ನಡೆಸುತ್ತಾ ಜನರನ್ನು ಮತ ಕೇಳುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು ಇದೀಗ ಜನರಲ್ಲಿ ಅರಿವು ಮೂಡುತ್ತಿದೆ. ಇವರ ನಾಟಕಗಳನ್ನು ನೋಡುತ್ತಿರುವ ಜನ ಈ ಬಾರಿ ತಕ್ಕ ಪಾಠ ಕಲಿಸುತ್ತಾರೆಂದು ಹೇಳಿದರು.
ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಪುರುಷೋತ್ತಮ ಮಾತನಾಡಿ, ಕಳೆದ 70 ವರ್ಷಗಳಿಂದ ದೇಶವನ್ನು ಆಳಿದ ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಬಡತನ ಹೋಗಲಾಡಿಸಲು ಶ್ರಮಿಸಲಿಲ್ಲ. ಮತಗಳ ಖರೀದಿ ಮಾಡುತ್ತಾ, ಜನರನ್ನು ಯಾಮಾರಿಸುತ್ತಾ ಅಧಿಕಾರ ನಡೆಸುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
ಆಶ್ವಾಸನೆಗಳನ್ನು ನೀಡಿ ನೊಂದವರು, ಬಡವರು, ಶೋಷಿತರ ಮತಗಳನ್ನು ಕೊಳ್ಳೆ ಹೊಡೆಯುತ್ತಿರುವ ಇವರೇ ದೇಶದ ಬಡತನಕ್ಕೇ ನೇರ ಹೊಣೆಗಾರರಾಗಿದ್ದಾರೆ. ಹೀಗಾಗಿ, ಜನರು ತಮ್ಮ ಮತಗಳನ್ನು ಮಾರಿಕೊಳ್ಳದೇ ಪ್ರಾಮಾಣಿಕವಾಗಿ ಮತ ಚಲಾವಣೆ ಮಾಡಬೇಕು. ಬಡವರ ಧ್ವನಿಯಾದ ಬಿಎಸ್‌ಪಿ ಪಕ್ಷವನ್ನು ಬೆಂಬಲಿಸಬೇಕು. ನಿಮ್ಮ ಭವಿಷ್ಯವನ್ನು ನಿಮ್ಮ ಒಂದು ಮತದಿಂದ ರೂಪಿಸಿಕೊಳ್ಳಬಹುದು ಎಂಬ ಅರಿವಿನಿಂದ ಮತ ಚಲಾಯಿಸಬೇಕೆಂದು ಮತ ದಾರರಲ್ಲಿ ಮನವಿ ಮಾಡಿದರು.
ಬೈಕ್ ರ್ಯಾಲಿ: ನಗರ ಸೇರಿದಂತೆ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ಬಿಎಸ್‌ಪಿ ಮುಖಂಡರು ಹಾಗೂ ಕಾರ್ಯಕರ್ತರು ಬೆಂಬಲಿಗರು ಸೇರಿ ಬೈಕ್ ರ್ಯಾಲಿ ನಡೆಸುವ ಮೂಲಕ ಪಕ್ಷದ ಅಭ್ಯರ್ಥಿ ಡಾ.ಸಿ.ಎಸ್. ದ್ವಾರಕನಾಥ್ ಪರ ಭರ್ಜರಿ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಬಿಎಸ್‌ಪಿ ತಾಲೂಕು, ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಮುಂತಾದವರು ಪಾಲ್ಗೊಂಡಿದ್ದರು.