ಬೆಂಗಳೂರು: 2013ರ ವಿಧಾನಸಭಾ ಚುನಾವಣೆ ವೇಳೆ ಕಲಬುರಗಿಯಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿದ್ದಾಗ ನಗದು ಪತ್ತೆ ಯಾಗಿದ್ದ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹಾಗೂ ಪಕ್ಷದ ಮುಖಂಡ ಸತೀಶ್‌ಚಂದ್ರ ಮಿಶ್ರಾ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಮಾಯಾವತಿ ಮತ್ತು ಸತೀಶ್ ಚಂದ್ರ ಮಿಶ್ರಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶವನ್ನು ಮಾಡಿದೆ.
ನಗದು ಪತ್ತೆ ವಿಚಾರ ಸಂಬಂಧ ಅರ್ಜಿದಾರರು ನೀಡಿದ ವಿವರಣೆಯನ್ನು ಕೇಂದ್ರ ಚುನಾವಣಾ ಆಯೋಗ ಒಪ್ಪಿದೆ. ಹಾಗಾಗಿ ನ್ಯಾಯದ ದೃಷ್ಟಿಯಿಂದ ಪ್ರಕರಣ ಮುಂದುವರಿಸುವುದು ಸರಿಯಲ್ಲ ಎಂದು ಹೇಳಿರುವ ಹೈಕೋರ್ಟ್ ಅರ್ಜಿಯನ್ನು ಮಾನ್ಯ ಮಾಡಿ ಬೆಂಗಳೂರಿನ 42ನೇ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ಮತ್ತು ಪ್ರಕರಣವನ್ನು ರದ್ದುಗೊಳಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ಪ್ರಮೀಳಾ ನೇಸರ್ಗಿ ಮತ್ತು ವಕೀಲ ಸಿ. ಜಗದೀಶ್ ಅವರು, ಆರೋಪದ ಬಗ್ಗೆ ಸಿಆರ್‌ಪಿಸಿ ಸೆಕ್ಷನ್ 195 (1)(ಎ)(1) ಲಿಖೀತ ದೂರು ನೀಡಿಲ್ಲ. ಜೊತೆಗೆ ಚುನಾವಣಾ ಆಯೋಗ ಅರ್ಜಿದಾರರ ಹೇಳಿಕೆಯನ್ನು ಒಪ್ಪಿದೆ ಮತ್ತು ಯಾವುದೇ ನಗದು ಪತ್ತೆಯಾಗಿಲ್ಲ ಎಂದು ಹೇಳಿದೆ. ಆದರೂ ಸಹ ಕ್ರಿಮಿನಲ್ ಪ್ರಕರಣ ಮುಂದುವರಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
2013ರ ಏ.30ರಂದು ಮಾಯಾವತಿ ಕಲಬುರಗಿಯ ಜೇವರ್ಗಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಆಗ ಚುನಾವಣಾ ವೀಕ್ಷಕರ ತಂಡ ಪರಿಶೀಲನೆ ನಡೆಸಿದಾಗ ಅವರ ಬಳಿ 1.50 ಲಕ್ಷ ರೂ. ರೂ. ನಗದು ಪತ್ತೆಯಾಗಿತ್ತು. ಆಗ ಮಾಯಾವತಿ ತಮ್ಮ ಹಣ 50 ಸಾವಿರ ರೂ. ಉಳಿದ 1 ಲಕ್ಷ ರೂ. ಪಕ್ಷದ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರ ಅವರಿಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದರು. ಅದನ್ನು ಆಯೋಗ ಒಪ್ಪಿತ್ತು. ಆದರೂ ಅವರ ವಿರುದ್ಧ ಜೇವರ್ಗಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಮುಂದುವರಿಸಲಾಗಿತ್ತು. ಅದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.