ಹೌದು. ಈಗ ಎಲ್ಲಿ ನೋಡಿದರೂ ಆನ್‌ಲೈನ್ ಶಾಪಿಂಗ್‌ನದ್ದೇ ಹವಾ. ಅದು ಏಕಕಾಲಕ್ಕೆ ಸಂಪ್ರದಾಯವೂ, ಫ್ಯಾಶನ್ನೂ ಆಗಿಹೋಗಿದೆ. ಅಂಗಡಿಗೆ ಹೋಗಿ ನೂರಾರು ವಸ್ತುಗಳನ್ನು ನೋಡಿ ಮುಟ್ಟಿ ಅದರ ಮೇಲ್ಮೆ„ಯನ್ನು ಸವರಿ, ಅಂಗಡಿಯವರಿಗೆ ಹತ್ತು ಪ್ರಶ್ನೆ ಕೇಳಿ ಕೊಂಡುಕೊಳ್ಳುವ ಕಾಲ ಮುಗಿದಿದೆ. ಈಗೇನಿದ್ರೂ ನೆಟ್‌ನಲ್ಲಿ ನಮಗೆ ಬೇಕಾದ ವಸ್ತು ನೋಡುವುದು ಆರ್ಡರ್ ಮಾಡುವುದು ಅಷ್ಟೆ. ಹಣವನ್ನೂ ಆನ್‌ಲೈನ್ ಮುಖಾಂತರವೇ ಕೊಡಬಹುದು, ಇಲ್ಲವೇ ಐಟಂ ಡೆಲಿವರಿ ತಗೊಳ್ಳುವಾಗ ಕೊಡಬಹುದು. ಇಲ್ಲಿ ಕೊಟ್ಟು ತೊಗೊಳ್ಳುವವನ ನಡುವೆ ಯಾವ ಅನುಬಂಧವೂ ಇರುವುದಿಲ್ಲ.
ಮೊನ್ನೆ ಬಂಧುಗಳ ಮನೆಯ ಸಮಾರಂಭವೊಂದಕ್ಕೆ ಹೋಗಿದ್ದೆ. ನಾನುಟ್ಟ ಸೀರೆ ನೋಡಿದ ಚಿಕ್ಕಮ್ಮ “ಎಲ್ಲಿ ತಗೊಂಡೆ ಸೀರೇ? ತುಂಬಾ ಚೆನ್ನಾಗಿದೆ’ ಎಂದಿದ್ದರು. “ಆನ್‌ಲೈನ್‌ನಲ್ಲಿ ಚಿಕ್ಕಮ್ಮಾ, ಆನ್‌ಲೈನ್‌ನಲ್ಲಿ ನೋಡೋದು. ಬಣ್ಣ ಡಿಸೈನು ಇಷ್ಟ ಆದರೆ ತೊಗೊಳ್ಳೋದು ಅಷ್ಟೇ’ ಎಂದದ್ದೆ. ಚಿಕ್ಕಮ್ಮ ಅಚ್ಚರಿಯಿಂದ “ಅಲ್ವೇ, ಫೋಟೋ ನೋಡಿ ಸೀರೆ ತಗೋತಾರಾ? ಅದನ್ನು ಮುಟ್ಟಿ ನೋಡೋದು ಬೇಡವಾ? ಅದನ್ನು ಸವರಿ ಅದರ ನುಣುಪನ್ನು ಅನುಭವಿಸಿ ಆ ಹೊಸ ವಾಸನೆ ಆಸ್ವಾದಿಸಿ ತಗೊಂಡ್ರೆ ಅಲ್ವೇನೇ ಖುಷಿ? ಅದು ಹೇಗೆ ನೋಡದೆ ಮುಟ್ಟದೆ ತಗೋತೀರಾ? ಅದು ಚೆನ್ನಾಗಿದೆ ಎಂದು ನಂಬಿಕೆ ಹೇಗೆ ಬರುತ್ತೆ’ ಎಂದಿದ್ದರು. ನಂಗೆ ನಗೆ ಬಂತು. “ಅದು ಹಾಗೇ ಚಿಕ್ಕಮ್ಮಾ… ನಂಬಿಕೆ ಬರಿಸಿಕೋ ಬೇಕು ಅಷ್ಟೆ. ಯಾರೋ ಗೊತ್ತಿಲ್ಲದ ವ್ಯಕ್ತಿಯನ್ನು ನಂಬಿಕೆಯಿಂದ ಮದುವೆಯಾಗಿ ಸಂಸಾರ ಮಾಡಲ್ವಾ?’ ಎಂದಿದ್ದೆ ಚೇಷ್ಟೆಯಿಂದ, “ಏನು ಹೋಲಿಕೆನೇ ಇದು?!’ ಎನ್ನುತ್ತಾ ಚಿಕ್ಕಮ್ಮ ತಲೆಯ ಮೇಲೆ ಮೊಟಕಿದ್ದಳು. “ನೀನು ಎಷ್ಟೇ ಚೆನ್ನಾಗಿದೆ ಅಂತ ತಗೊಂಡ್ರೂ ಅಂಗಡಿಗೆ ಹೋಗಿ ತಂದಷ್ಟು ಸಂಭ್ರಮ ಇರತ್ತೇನೇ? ನೀನು ಏನೇ ಹೇಳು, ಅಂಗಡಿಗೆ ಹೋಗಿ ತರುವ ಸಂಭ್ರಮದ ಸುಖವೇ ಬೇರೆ. ಇದರಲ್ಲಿ ಏನಿದೆ ಮಣ್ಣು!?’ ಎಂದೂ ಸೇರಿಸಿದ್ದರು.
ಸಮಾರಂಭ ಮುಗಿಸಿ ಮನೆಗ ಬಂದ ನಂತರವೂ ಚಿಕ್ಕಮ್ಮ ಹೇಳಿದ್ದನ್ನೇ ಯೋಚಿಸುತ್ತಿದ್ದೆ. ಹೌದಲ್ಲವಾ? ಏನೇ ತಂದರೂ ಅಂಗಡಿಗೆ ಹೋಗಿ ತರುವುದರಲ್ಲಿ ಎಷ್ಟು ಸಂಭ್ರಮವಿದೆ? ಈಗ ಎಲ್ಲರನ್ನೂ ಆನ್‌ಲೈನ್ ಒಬ್ಬ ಪರಮಾಪ್ತ ಗೆಳೆಯನಂತೆ ಕೈ ಹಿಡಿದು ಬಿಟ್ಟಿದೆ. ಏನೇ ತರಬೇಕಾದರೂ ಆನ್‌ಲೈನ್ ಶಾಪಿಂಗ್. ನಾವು ಚಿಕ್ಕವರಿದ್ದಾಗ ತಿಂಗಳಿಗೊಮ್ಮೆ ದಿನಸಿ ಸಾಮಾನು ತರಲು ಶೆಟ್ಟರ ಅಂಗಡಿಗೆ ಹೋಗುವುದೇ ಒಂದು ಸಂಭ್ರಮ. ತಾತನ ಕೈಡಿದು ಶೆಟ್ಟರ ಅಂಗಡಿಗೆ ಹೋಗಿ ಅಲ್ಲಿ ತಾತ ಗಿರಾಕಿಗಳಿಗೆಂದೇ ಹಾಕಿರುತ್ತಿದ್ದ ಒಂದು ಸ್ಟೂಲಿನ ಮೇಲೆ ಕುಳಿತು ಗಲ್ಲಾದಲ್ಲಿ ವಿರಾಜಮಾನರಾಗಿರುತ್ತಿದ್ದ ಶೆಟ್ಟರಿಗೆ ಮನೆಯಲ್ಲಿ ಹೆಂಗಸರು ಬರೆದು ಕೊಟ್ಟ ದಿನಸಿ ಚೀಟಿಯನ್ನು ಕೊಡುತ್ತಿದ್ದರು. ಅಂಗಡಿಯ ಹುಡುಗನಿಗೆ ಆ ಸಾಮಾನುಗಳನ್ನು ಹೊರಿಸಿ ಶೆಟ್ಟರು ಮನೆಗೆ ಕಳಿಸಿಕೊಡುತ್ತಿದ್ದರು. ಶೆಟ್ಟರ ಅಂಗಡಿ ಹುಡುಗರು, ಅಮ್ಮ ಕೊಡುವ ಕಾಫಿ ಕುಡಿದು ಖುಷಿಯಾಗಿ ಹೋಗುತ್ತಿದ್ದರು. ಈ ವ್ಯವಹಾರದಲ್ಲಿ ಒಂದು ಪ್ರೀತಿಯಿರುತ್ತಿತ್ತು. ನಮ್ಮೊàರು ತಮ್ಮೊàರು ಎಂಬ ಅನುಬಂಧವಿರುತ್ತಿತ್ತು. ಹೊಲಗಳಲ್ಲಿ ಸಾಸಿವೆ, ಮೆಂತ್ಯ, ಅವರೆಕಾಳು, ರಾಗಿ, ಮುಂತಾದವನ್ನು ಚಿಕ್ಕ ಪ್ರಮಾಣದಲ್ಲಿ ಬೆಳೆಯುತ್ತಿದ್ದ ರೈತರ ಮನೆಯ ಹೆಂಗಸರು ಒಂದಷ್ಟು ಧಾನ್ಯವನ್ನು ಸೇರುಗಳ ಲೆಕ್ಕದಲ್ಲಿ ತಂದು ಮನೆಗೆ ಕೊಟ್ಟು ಅಮ್ಮನ ಹಳೆಯ ಸೀರೆಯನ್ನು ಅದಕ್ಕೆ ಬದಲಾಗಿ ತೆಗೆದುಕೊಂಡು ಹೋಗುತ್ತಿದ್ದರು. ಇಂಥದ್ದು ಎಲ್ಲ ಕಡೆಯೂ ನಡೆಯುತ್ತಿತ್ತು. ಇದು ಯಾರಿಗೂ ತಪ್ಪು ಎಂದೇನೂ ಅನಿಸುತ್ತಿರಲಿಲ್ಲ. ಅಮ್ಮ ಯಾವುದಾದರೂ ಸೀರೆ ಹಿಂದಕ್ಕೆ ಹಾಕುವಾಗಲೇ ಹೇಳುತ್ತಿದ್ದರು “ಇದನ್ನು ಪಾಪಮ್ಮನಿಗೆ ಕೊಡಬೇಕು. ಹತ್ತು ಕಸಬರಿಕೆ ತಂದು ಕೊಡ್ತೀನಿ ಅಂತ ಹೇಳಿದಾಳೆ’ ಅಂತ. ಇದೊಂಥರಾ ಫಿಕ್ಸ್ ಆಗಿರುತ್ತಿತ್ತು. ಅವಳು ರಾಗಿ ಕೊಡ್ತಾಳೆ ಕಣೆ, ಈ ಸೀರೆ ಅವಳಿಗೆ ಕೊಡಬೇಕು ಅನ್ನುತ್ತಿದ್ದಳು. ಹೀಗೆ ಒಂಥರಾ ಬಾರ್ಟರ್ ಸಿಸ್ಟಂ ನಡೆಯುತ್ತಿದ್ದಿತು. ಅವರುಗಳು ಪ್ರೀತಿಯಿಂದಲೇ ತಾವು ಬೆಳೆದದ್ದನ್ನು ತಂದು ಕೊಡುತ್ತಿದ್ದರು. ಅಮ್ಮ ಕೊಟ್ಟದ್ದನ್ನು ಸಂಭ್ರಮದಿಂದ ತೆಗೆದುಕೊಳ್ಳುತ್ತಿದ್ದರು. ಇದರಲ್ಲಿ ಒಂಥರಾ ಅನುಬಂಧವಿರುತ್ತಿತ್ತು. ಅಭಿಮಾನವಿರುತ್ತಿತ್ತು.
ಇನ್ನು ಹಬ್ಬಕ್ಕೆ ಅಥವಾ ಮದುವೆ ಸಮಾರಂಭಕ್ಕೆ ಜವಳಿ ತರುವುದು ಒಂದು ಸಂಭ್ರಮ. ಮನೆಗೆಲಸವೆಲ್ಲಾ ಸರಸರ ಮುಗಿಸಿ ಹೆಂಗಸರು ರೆಡಿಯಾಗಿ ಸಂಭ್ರಮದಿಂದ ಹೊರಟು ನಿಲ್ಲುತ್ತಿದ್ದರು. ಅಂಗಡಿಗಳಲ್ಲಿ ದೊಡ್ಡವರಿಗೆ ಸೀರೆ, ಸಣ್ಣವರಿಗೆ ಲಂಗ ಜಂಪರ್, ಹುಡುಗರಿಗೆ ಅಂಗಿ ಚೆಡ್ಡಿ, ಎಲ್ಲವನ್ನೂ ರಾಶಿ ತೆಗೆಸಿ ಮುಟ್ಟಿ ನೋಡಿ ಅಂಚು ಸೆರಗು ಪರೀಕ್ಷಿಸಿ ಅಂಗಡಿಯವನಿಗೆ ಅದರ ಗುಣಮಟ್ಟದ ಬಗ್ಗೆ ಸಾವಿರ ಪ್ರಶ್ನೆ ಕೇಳಿ, ಅವನ ತಲೆ ತಿಂದು ಖರೀದಿ ಮಾಡುವ ಹೊತ್ತಿಗೆ ಸೂರ್ಯ ಪಶ್ಚಿಮ ದಿಕ್ಕಿನಿಂದ ಮನೆಗೆ ಹೋಗಿರುತ್ತಿದ್ದ. ಬಟ್ಟೆಯ ಗಂಟು ಹಿಡಿದು ಮನೆ ತಲುಪಿ ಅರ್ಧರಾತ್ರಿಯವರೆಗೂ ಅವುಗಳನ್ನು ಮತ್ತೆ ತೆಗೆದು ನೋಡಿ ಸಂಭ್ರಮಿಸಿ ಅದರ ಗುಣಗಾನ ಮಾಡಿ ಪೆಟ್ಟಿಗೆಯಲ್ಲಿಡುತ್ತಿದ್ದರು.
ಆ ಸಂಭ್ರಮವೇ ಬೇರೆ. ಹಳೆಯ ನೆನಪುಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ಬಾಯಿ ಚಪ್ಪರಿಸಿದೆ. ಆಮೇಲಾಮೇಲೆ ಒಂದು ಟೀಪಾಯಿಯೋ, ಟೇಪ್ ರೆಕಾರ್ಡರೋ ಏನೇ ಖರೀದಿಸಬೇಕಾದರೂ ಅಂಗಡಿಗೆ ಹೋಗಿ ಹಲವಾರು ಕಂಪನಿಗಳ ವಸ್ತುಗಳನ್ನು ಕೂಲಂಕಷವಾಗಿ ವಿಚಾರಿಸಿ ತಮಗೆ ಯಾವುದು ಹೊಂದುವುದೋ ಅದನ್ನು ಖರೀದಿ ಮಾಡುತ್ತಿದ್ದರು. ಏನೇ ಖರೀದಿಸಲಿ ಅದಕ್ಕೊಂದು ಸಂಭ್ರಮವಿರುತ್ತಿತ್ತು. ಅಂಗಡಿಯ ಮಾಲೀಕರು ಹಾಗೂ ಗ್ರಾಹಕರ ನಡುವೆ ಒಂದು ಬಾಂಧವ್ಯ ಏರ್ಪಡುತ್ತಿತ್ತು. ಈಗ ಯಾವುದೂ ಇಲ್ಲ. ಯಾರಿಗೆ ಯಾರೂ ಗೊತ್ತಿರುವುದಿಲ್ಲ. ಯಾವ ನಂಬಿಕೆ ನೆಚ್ಚಿಕೆಯೂ ಇಲ್ಲ.
ಹಿಂದೆಲ್ಲಾ ತರಕಾರಿ ತರಬೇಕಾದರೂ ಜನ ಬುಟ್ಟಿ ಹಿಡಿದು ಮಾರ್ಕೆಟ್‌ಗೆ ನಡೆದುಕೊಂಡು ಹೋಗುತ್ತಿದ್ದರು. “ಇಲ್ಲಿ ಬಾ ಅಮ್ಮಯ್ಯ, ನನ್ನ ಹತ್ರ ತಾಜಾ ಆಗಿದೆ ತರಕಾರಿ’ ಎಂದು ವ್ಯಾಪಾರಿಗಳು ಮುಗಿ ಬಿದ್ದು ಬರುತ್ತಿದ್ದರು. ಮೊನ್ನೆ ಅತ್ತೆಯ ಮನೆಗೆ ಹೋಗಿದ್ದಾಗ ಅತ್ತೆ ಏನೋ ಗೊಣಗುತ್ತಿದ್ದರು. “ಯಾಕೆ ಅತ್ತೆ?’ ಎಂದು ಕೇಳಿದರೆ “ನೋಡೇ, ಆ ಸುಮಂತನಿಗೆ ತರಕಾರಿ ತಾರೋ ಅಂದಿದ್ದಕ್ಕೆ ಅಯ್ಯೋ ಯಾರು ಹೋಗ್ತಾರಮ್ಮಾ ಆ ಗಲೀಜು ಮಾರ್ಕೆಟ್ಟಿಗೆ? ಆನ್‌ಲೈನ್‌ನಲ್ಲಿ ಬುಕ್ ಮಾಡ್ತೀನಿ ಅಂತ ಇದೆಂಥಧ್ದೋ ತರಕಾರಿ ತರಿಸಿದ್ದಾನೆ. ಅದು ನಾಟಿನಾ? ಇಲ್ಲಾ ಫಾರಂದಾ ಅಂತ ಹೇಗೆ ಗೊತ್ತಾಗತ್ತೆ? ಈ ಕೊತ್ತಂಬರಿ ನೋಡು, ಇದೂ ಆನ್‌ಲೈನ್‌ನಲ್ಲಿ ಸಿಗುತ್ತಂತೆ. ಹೀಗಾದ್ರೆ ಗಾಡಿಗಳಲ್ಲಿ ಸೈಕಲ್‌ಗಳಲ್ಲಿ ತರಕಾರಿ ಮಾರೋರು ಎಲ್ಲಿ ಹೋಗಬೇಕು? ಅವರ ಬದುಕು ಹಾಳಾದ ಹಾಗೆ ಅಲ್ವಾ?’ ಎಂದಿದ್ದರು. ನಾನು ನಿರುತ್ತರಳಾಗಿದ್ದೆ. ಅತ್ತೆ ಹೇಳಿದ್ದು ಸತ್ಯವಾಗಿದ್ದರೂ ನನ್ನಲ್ಲಿ ಉತ್ತರವಿರಲಿಲ್ಲ.
ಮತ್ತೂಮ್ಮೆ ಹೀಗೆ ಪರಿಚಿತರೊಬ್ಬರ ಮಗನ ಮದುವೆಗೆ ಹೋಗಿದ್ದೆ. ಹುಡುಗ ಅಮೆರಿಕೆಯಲ್ಲಿದ್ದಾನೆ. “ನನಗೆ ಹುಡುಗಿಯನ್ನು ನೋಡಕ್ಕೆ ಬರಲಿಕ್ಕೆಲ್ಲ ಬಿಡುವಿರಲ್ಲ ಅಮ್ಮ. ಹುಡುಗಿಯ ಫೋಟೋನ ಮೇಲ್ ಮಾಡಿ, ಓಕೆ ಆದರೆ ಸ್ಕೈಪ್‌ನಲ್ಲಿ ಮಾತಾಡ್ತೀನಿ. ಇಷ್ಟ ಆದರೆ ಒಪ್ಪಿಕೊಳ್ತೀನಿ’ ಅಂದನಂತೆ. ನಾನು “ವಾರೆವ್ಹಾ! ಏನ್ರೀ ಆನ್‌ಲೈನ್ ಶಾಪಿಂಗ್ ತರಾ ಇದೂನೂ ಆನ್‌ಲೈನ್ ಸೆಲೆಕ್ಷನ್ನಾ ಹುಡುಗಿ ಕೂಡಾ?’ ಎಂದಿದ್ದೆ. ಹುಡುಗನ ತಂದೆ “ನಮಗೊಂದು ನಾಲ್ಕು ಮನೆಯ ಚೌಚೌ ಬಾತ್ ತಿನ್ನಲು ಬಿಡಲಿಲ್ಲ ಮಗ, ಎಲ್ಲಾ ಆನ್‌ಲೈನ್ ಮಹಿಮೆ’ ಎಂದು ದೇಶಾವರಿ ನಗೆ ಬೀರಿದ್ದರು.
ಹೌದು. ಈಗ ಎಲ್ಲಿ ನೋಡಿದರೂ ಆನ್‌ಲೈನ್ ಶಾಪಿಂಗ್‌ನದ್ದೇ ಹವಾ. ಅದು ಏಕಕಾಲಕ್ಕೆ ಸಂಪ್ರದಾಯವೂ, ಫ್ಯಾಶನ್ನೂ ಆಗಿಹೋಗಿದೆ. ಅಂಗಡಿಗೆ ಹೋಗಿ ನೂರಾರು ವಸ್ತುಗಳನ್ನು ನೋಡಿ ಮುಟ್ಟಿ ಅದರ ಮೇಲ್ಮೆ„ಯನ್ನು ಸವರಿ, ಅಂಗಡಿಯವರಿಗೆ ಹತ್ತು ಪ್ರಶ್ನೆ ಕೇಳಿ ಕೊಂಡುಕೊಳ್ಳುವ ಕಾಲ ಮುಗಿದಿದೆ. ಈಗೇನಿದ್ರೂ ನೆಟ್‌ನಲ್ಲಿ ನಮಗೆ ಬೇಕಾದ ವಸ್ತು ನೋಡುವುದು ಆರ್ಡರ್ ಮಾಡುವುದು ಅಷ್ಟೆ. ಹಣವನ್ನೂ ಆನ್‌ಲೈನ್ ಮುಖಾಂತರವೇ ಕೊಡಬಹುದು, ಇಲ್ಲವೇ ಐಟಂ ಡೆಲಿವರಿ ತಗೊಳ್ಳುವಾಗ ಕೊಡಬಹುದು. ಇಲ್ಲಿ ಕೊಟ್ಟು ತೊಗೊಳ್ಳುವವನ ನಡುವೆ ಯಾವ ಅನುಬಂಧವೂ ಇರುವುದಿಲ್ಲ.
ಬದಲಾದ ಈ ಕಾಲಮಾನದಲ್ಲಿ ನಾವು ಏನೇನೆಲ್ಲಾ ಕಳೆದುಕೊಂಡೆವಲ್ಲ ಎಂಬುದು ಅರ್ಥವಾದಾಗ ನನಗೆ ಪಿಚ್ಚೆನಿಸಿತ್ತು. ದಿನೇ ದಿನೇ ಓಝೊàನ್ ಪದರ ತೆಳುವಾಗುತ್ತಿದೆ ಇದು ಅಪಾಯಕಾರಿ ಎಂದು ಪರಿಸರವಾದಿಗಳು ಬೊಬ್ಬೆ ಹೊಡೆಯುತ್ತಾರೆ, ಹಾಗೆಯೇ ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಸಹಾ ತೆಳುವಾಗುತ್ತಿವೆ ಇದು ಅಪಾಯಕಾರಿಯಲ್ಲವೇ? ಮನುಷ್ಯರ ನಡುವಿನ ಸಂಬಂಧವೂ ಯಾಂತ್ರಿಕವಾಗುತ್ತಿದೆ. ಸಧ್ಯ, ಮಕ್ಕಳಿಗೆ ತಂದೆತಾಯಿ ಮತ್ತು ತಂದೆತಾಯಿಗಳಿಗೆ ಮಕ್ಕಳು ಆನ್‌ಲೈನಲ್ಲಿ ಖರೀದಿಸಲು ಸಿಗಲ್ಲ. ಅದೊಂದಾದರೂ ಇನ್ನು ಸಹಜತೆಯನ್ನು ಉಳಿದುಕೊಂಡಿದೆ ಎನಿಸಿ ಸಮಾಧಾನದ ನಿಟ್ಟುಸಿರಿಟ್ಟೆ.
ವೀಣಾ ರಾವ್