Advertisement

ಕಾಂಗ್ರೆಸ್‌ಗೆ ಒಂದೇ ದಿನ ಸರಣಿ ಆಘಾತ

12:30 AM Mar 13, 2019 | |

ಹೊಸದಿಲ್ಲಿ: ಅತ್ತ ಗುಜರಾತ್‌ನಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದರೆ, ಅದೇ ದಿನ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಸರಣಿ ಆಘಾತಗಳು ಎದುರಾಗಿವೆ. ಬಿಜೆಪಿ ವಿರುದ್ಧ ಮಹಾಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಬೇಕೆಂಬ ಕಾಂಗ್ರೆಸ್‌ ಕನಸು ಭಗ್ನವಾಗಿದೆ.
ಒಂದು ಕಡೆ, ಬಿಎಸ್‌ಪಿ ನಾಯಕಿ ಮಾಯಾವತಿ ಅವರು, ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್‌ ಜತೆ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಂಗಳವಾರ ಘೋಷಿಸಿದರೆ, ಇನ್ನೊಂದೆಡೆ, ಮಹಾರಾಷ್ಟ್ರದ ದಲಿತ ನಾಯಕ ಪ್ರಕಾಶ್‌ ಅಂಬೇಡ್ಕರ್‌ ಅವರು ಕಾಂಗ್ರೆಸ್‌ನಿಂದ ದೂರ ಸರಿದಿದ್ದು, ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿ ಜತೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರಾಜ್ಯದ ಎಲ್ಲ 48 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದ್ದಾರೆ. ಇದರ ನಡುವೆಯೇ, ಮಹಾರಾಷ್ಟ್ರದ ವಿಪಕ್ಷ ನಾಯಕ, ಕಾಂಗ್ರೆಸ್‌ನ ಹಿರಿಯ ಮುತ್ಸದ್ದಿ ರಾಧಾಕೃಷ್ಣ ವಿಖೆ ಪಾಟೀಲ್‌ ಅವರ ಪುತ್ರ ಸುಜಯ್‌ ವಿಖೆ ಪಾಟೀಲ್‌ ಮಂಗಳವಾರ ಬಿಜೆಪಿ ಸೇರ್ಪಡೆ ಯಾಗುವ ಮೂಲಕ, ಕಾಂಗ್ರೆಸ್‌ಗೆ ದೊಡ್ಡ ಶಾಕ್‌ ನೀಡಿದ್ದಾರೆ. ಅವರಿಗೆ ಅಹಮದ್‌ನಗರ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡುವಂತೆ ಶಿಫಾ ರಸು ಮಾಡುವುದಾಗಿ ಸಿಎಂ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ.

Advertisement

ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರಿಗೆ ಉತ್ತರಪ್ರದೇಶದ ಉಸ್ತುವಾರಿ ನೀಡಿದ ಬಳಿಕದ ಬೆಳವಣಿಗೆಗಳನ್ನು ನೋಡಿ ಎಸ್‌ಪಿ ಮತ್ತು ಬಿಎಸ್‌ಪಿ ನಾಯಕರು, ಕಾಂಗ್ರೆಸ್‌ ಅನ್ನು ಸಂಪರ್ಕಿಸಬಹುದು ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿ ದ್ದರು. ಆದರೆ, ಅದನ್ನು ಸುಳ್ಳಾಗಿಸಿರುವ ಮಾಯಾವತಿ, “ಪರಸ್ಪರ ಗೌರವ ಮತ್ತು ಪ್ರಾಮಾಣಿಕ ಉದ್ದೇಶದಿಂದ ಎಸ್‌ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿದೆ. ಉ.ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸುವ ತಾಕತ್ತು ನಮಗಿದೆ. ಇನ್ನು ಉಳಿದ ರಾಜ್ಯಗಳನ್ನೂ ನಾವು ಕಾಂಗ್ರೆಸ್‌ ಜತೆ ಕೈಜೋಡಿಸುವ ಪ್ರಶ್ನೆಯಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್‌ಜೆಡಿ ಜತೆಗೂ ಹಳಸಲಿದೆಯೇ ಸಂಬಂಧ?: ಇನ್ನು ಬಿಹಾರ ದಲ್ಲೂ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಸಂಬಂಧ ಹಳಸುತ್ತಿರುವ ಲಕ್ಷಣ ಗೋಚರಿಸಿದೆ. ಎರಡೂ ಪಕ್ಷಗಳ ಹಿರಿಯ ನಾಯಕರು ಆಡಿರುವ ಮಾತುಗಳು ಈ ಸುಳಿವನ್ನು ನೀಡಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸದಾನಂದ ಸಿಂಗ್‌ ಮಾತನಾಡಿ, ನಾವು ರಾಜ್ಯದಲ್ಲಿ ಮಿತ್ರ ಪಕ್ಷವನ್ನು ಅವಲಂಬಿಸಿಲ್ಲ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪಕ್ಷ ಬಲಿಷ್ಠವಾಗಿದೆ. ಸೀಟು ಹಂಚಿಕೆ ಸರಿಯಾಗದಿದ್ದರೆ ನಮಗೆ ಯಾರ ಅವಲಂ ಬನೆಯೂ ಬೇಕಿಲ್ಲ ಎಂದು ಹೇಳಿದ್ದಾರೆ. ಇದರಿಂದ ಸಿಡಿಮಿಡಿ ಗೊಂಡಿರುವ ಆರ್‌ಜೆಡಿ ನಾಯಕ ಶಿವಾನಂದ ತಿವಾರಿ, “ತಾವು ಯಾರ ವಿರುದ್ಧ ಹೋರಾಡಲು ಹೊರಟಿದ್ದೇವೆ ಎಂಬುದನ್ನು ಕಾಂಗ್ರೆಸ್‌ ಮೊದಲು ಸ್ಪಷ್ಟಪಡಿಸಬೇಕು. ಪಕ್ಷವು ಬಿಜೆಪಿಯನ್ನು ಸೋಲಿ ಸಲು ಹೊರಟಿದೆಯೋ ಅಥವಾ ಮಿತ್ರಪಕ್ಷದೊಳಗೇ ಜಗಳವಾಡಿಕೊಳ್ಳಲು ಬಯಸಿದೆಯೇ ಎಂಬುದು ಗೊತ್ತಾಗಬೇಕು’ ಎಂದಿದ್ದಾರೆ.

ಬಲಿಪಶು ಮೋದಿಯಲ್ಲ, ದೇಶದ ಜನ: ಸೋನಿಯಾ
ಪ್ರಧಾನಿ ಮೋದಿ ಅವರು ಹೋದಲ್ಲೆಲ್ಲ ತಾನು “ಬಲಿಪಶು’ ಎಂದು ಹೇಳಿಕೊಳ್ಳುತ್ತಾರೆ. ಆದರೆ, ನಿಜವಾದ ಬಲಿಪಶು ಅವರಲ್ಲ, ಅವರ ತಪ್ಪು ನೀತಿಗಳಿಂದಾಗಿ ತೊಂದರೆಗೀಡಾದ ದೇಶದ ಜನರೇ ನೈಜ ಬಲಿಪಶುಗಳು ಎಂದು ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಆರೋಪಿಸಿದ್ದಾರೆ. ಗುಜರಾತ್‌ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಇದೇ ವೇಳೆ, ರಾಷ್ಟ್ರೀಯ ಹಿತಾಸಕ್ತಿಯ ವಿಚಾರವನ್ನೂ ಮೋದಿ ಅವರು ರಾಜಕೀಯಕ್ಕೆ ಬಳಸಿಕೊಂಡಿದ್ದರ ಬಗ್ಗೆ ಕಿಡಿಕಾರಿದರು. ಅನಂತರ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಮೋದಿ ಆಡಳಿತದಲ್ಲಿ ದೇಶದಲ್ಲಿ ಉಂಟಾಗಿರುವ ಕೃಷಿ ಸಮಸ್ಯೆ, ಕೈಗಾರಿಕಾ ಬೆಳವಣಿಗೆಯಲ್ಲಿ ಕುಂಠಿತ, ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರಸ್ತಾವಿಸಿದರು.

ಮಸೂದ್‌ ಅಜರ್‌, ಪುಲ್ವಾಮಾ ದಾಳಿ ಪ್ರಸ್ತಾವಿಸಿದ ರಾಹುಲ್‌
ಗಾಂಧಿನಗರದ ರ್ಯಾಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ಪುಲ್ವಾಮಾ ದಾಳಿ, ಉಗ್ರ ಮಸೂದ್‌ ಅಜರ್‌, ಜಿಎಸ್‌ಟಿ, ರಫೇಲ್‌ ಡೀಲ್‌ ಮತ್ತಿತರ ವಿಚಾರಗಳನ್ನೆತ್ತಿಕೊಂಡು ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಪೇಪರ್‌ ವಿಮಾನವನ್ನೂ ಮಾಡಲು ಬಾರದ ಅನಿಲ್‌ ಅಂಬಾನಿಗೆ ರಫೇಲ್‌ ಡೀಲ್‌ ಅನ್ನು ವಹಿಸಲಾಗಿದೆ ಎಂದು ಆರೋಪಿಸಿ ದರು. ಪುಲ್ವಾಮಾ ದಾಳಿಯ ಮಾಸ್ಟರ್‌ವೆುçಂಡ್‌, ಜೈಶ್‌ ಉಗ್ರ ಮಸೂದ್‌ ಅಜರ್‌ನನ್ನು ಅಂದು ರಾಷ್ಟ್ರೀಯ ಭದ್ರತಾ ಸಲಹೆ ಗಾರ ಅಜಿತ್‌ ದೋವಲ್‌ ಅವರೇ ವಿಶೇಷ ವಿಮಾನದಲ್ಲಿ ಕರೆದೊಯ್ದು ಪಾಕಿಸ್ಥಾನದಲ್ಲಿ ಬಿಟ್ಟು ಬಂದಿಲ್ಲವೇ ಎಂದು ಪ್ರಶ್ನಿಸಿದರು. ಈ ಬಾರಿಯ ಚುನಾವಣೆಯಲ್ಲಿ ಸತ್ಯ ಗೆಲ್ಲುತ್ತದೆ, ದ್ವೇಷ ಸೋಲುತ್ತದೆ ಎಂದೂ ಹೇಳಿದರು. ಇದಕ್ಕೂ ಮುನ್ನ ಪುಲ್ವಾಮಾ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್‌  ಸೇರ್ಪಡೆ 
ಗುಜರಾತ್‌ನ ಪಟೇಲರ ಮೀಸಲಾತಿ ಹೋರಾಟಗಾರ ಹಾರ್ದಿಕ್‌ ಪಟೇಲ್‌ ಮಂಗಳವಾರ ಕಾಂಗ್ರೆಸ್‌ಗೆ ಸೇರ್ಪಡೆ ಯಾಗಿ ದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಸಿಡಬ್ಲ್ಯುಸಿ ಸಭೆ ವೇಳೆ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಅವರು ಪಕ್ಷ ಸೇರಿದ್ದಾರೆ. ಬಳಿಕ ಮಾತನಾಡುತ್ತಾ, ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಫೆ. 28ರಂದೇ ಈ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ರ್ಯಾಲಿಯನ್ನು ಮುಂದೂಡಿತು. ಆದರೆ, ಮೋದಿ ಯವರು ದೇಶದುದ್ದಕ್ಕೂ ರ್ಯಾಲಿಗಳಲ್ಲಿ ಬ್ಯುಸಿಯಾಗಿಬಿಟ್ಟರು. ರಾಹುಲ್‌ ಅವರು ಪ್ರಾಮಾಣಿಕ ವ್ಯಕ್ತಿ. ಅವರು ಸರ್ವಾಧಿಕಾರಿಯಂತೆ ವರ್ತಿಸುವುದಿಲ್ಲ. ಅದಕ್ಕಾಗಿಯೇ ನಾನು ಕಾಂಗ್ರೆಸ್‌ಗೆ ಸೇರಿದೆ ಎಂದಿದ್ದಾರೆ ಹಾರ್ದಿಕ್‌.

ವಾರಾಣಸಿಯಿಂದಲೇ ಮೋದಿ ಸ್ಪರ್ಧೆ?
ಪ್ರಧಾನಿ ನರೇಂದ್ರ ಮೋದಿ ಅವರು ಈ ಚುನಾವಣೆಯಲ್ಲೂ ವಾರಾಣಸಿಯಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಆದರೂ, ಮೋದಿ ಅವರನ್ನು ವಾರಾಣಸಿ ಯಿಂದಲೇ ಕಣಕ್ಕಿಳಿಸುವ ಬಗ್ಗೆ ಇತ್ತೀಚೆಗೆ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಲಾಗಿದೆ. ಇದೇ ವೇಳೆ, ಅನಾರೋಗ್ಯ ಹಿನ್ನೆಲೆಯಲ್ಲಿ ಚುನಾವಣಾ ರಾಜಕೀಯಕ್ಕೆ ಕಳೆದ ಡಿಸೆಂಬರ್‌ನಲ್ಲಷ್ಟೇ ನಿವೃತ್ತಿ ಘೋಷಿಸಿದ್ದ ಸಚಿವೆ ಉಮಾಭಾರತಿ ಅವರೂ ಈ ಬಾರಿ ಸ್ಪರ್ಧಿಸುವ ಸಾಧ್ಯತೆಯಿದೆ. ಝಾನ್ಸಿಯಲ್ಲೇ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಚಿಂತನೆ ನಡೆದಿದೆ.

ರಾಹುಲ್‌ ಗಾಂಧಿಯಿಂದ 180 ರ್ಯಾಲಿ
ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ದೇಶಾದ್ಯಂತ ಸುಮಾರು 180 ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಪಕ್ಷದ ರಾಜ್ಯ ಘಟಕಗಳು ಹಾಗೂ ಸಂಬಂಧಪಟ್ಟ ಪ್ರಧಾನ ಕಾರ್ಯದರ್ಶಿಗಳೇ ಈ ರ್ಯಾಲಿಗಳನ್ನು ಆಯೋಜಿಸಿದ್ದಾರೆ. ಗೆಲ್ಲುವ ಸಾಧ್ಯತೆ ಅಧಿಕವಿರುವಂಥ ಕ್ಷೇತ್ರಗಳನ್ನು ಈಗಾಗಲೇ ಪಟ್ಟಿ ಮಾಡಿಕೊಳ್ಳಲಾಗಿದೆ. ಅದರ ಆಧಾರದಲ್ಲಿ, ಅಂಥ ಕ್ಷೇತ್ರಗಳಲ್ಲಿ “ವಾರ್‌ ರೂಂ’ಗಳನ್ನು ಹಾಗೂ ಹೆಚ್ಚುವರಿ ತಂಡಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

10 ಹಾಲಿ ಟಿಎಂಸಿ ಸಂಸದರಿಗೆ ಟಿಕೆಟ್‌ ಇಲ್ಲ
ಪಶ್ಚಿಮ ಬಂಗಾಳದ ಎಲ್ಲ 42 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಸಿಎಂ ಮಮತಾ ಬ್ಯಾನರ್ಜಿ ಬಿಡುಗಡೆ ಮಾಡಿದ್ದಾರೆ. ಶೇ. 41ರಷ್ಟು ಅಭ್ಯರ್ಥಿ ಗಳು ಮಹಿಳೆಯರೇ ಆಗಿರುವುದು ವಿಶೇಷ. ಅಂದಹಾಗೆ, ಹಾಲಿ 10 ಸಂಸದರಿಗೆ ಈ ಬಾರಿ ಟಿಕೆಟ್‌ ನೀಡದೆ, ಅವರನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳು ವುದಾಗಿ ಮಮತಾ ತಿಳಿಸಿದ್ದಾರೆ. ಟಿಎಂಸಿ ಉಚ್ಚಾಟಿತ ಸಂಸದ ಅನುಪಮ್‌ ಹಜ್ರಾ ಹಾಗೂ ಇಬ್ಬರು ಹಾಲಿ ಶಾಸಕರು ಮಂಗಳವಾರ ಬಿಜೆಪಿ ಸೇರಿದ್ದಾರೆ. ಇದೇ ವೇಳೆ, ಚುನಾವಣೆ ಸಂದರ್ಭದಲ್ಲಿ ಪ.ಬಂಗಾಳದಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಅಧಿಕವಾಗಿದೆ ಎಂದು ಪ್ರಧಾನಿ ಮೋದಿ ಹಾಗೂ ಗೃಹ ಇಲಾಖೆಗೆ ಅಲ್ಲಿನ ರಾಜ್ಯಪಾಲರು ಪತ್ರ ಬರೆದಿದ್ದರು. ಇದೇ ಕಾರಣಕ್ಕಾಗಿ, ಆಯೋಗವು ಬಂಗಾಳದಲ್ಲಿ 7 ಹಂತಗಳಲ್ಲಿ ಮತದಾನ ನಡೆಸಲು ನಿರ್ಧರಿಸಿತು ಎನ್ನಲಾಗಿದೆ.

ಮೋದಿ ಆಡಳಿತದಲ್ಲಿ ದೇಶವು ಸುರಕ್ಷಿತವಾಗಿದೆ. ಮೊದಲು ಪುಲ್ವಾಮಾ ದಾಳಿಯನ್ನು ಕಾಂಗ್ರೆಸ್‌ ಖಂಡಿಸುತ್ತದೆ. ಅನಂತರ, ಬಾಲಕೋಟ್‌ನಲ್ಲಿ ಪ್ರತೀಕಾರ ತೀರಿಸಿದರೆ ಆಗಲೂ ಕಾಂಗ್ರೆಸ್‌ ವಿಚಲಿತವಾಗುತ್ತದೆ. ಇಂಥವರನ್ನು ದೇಶದ ಜನ ನಂಬುತ್ತಾರಾ?
ಅರುಣ್‌ ಜೇಟ್ಲಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next