Advertisement

ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ!

01:27 PM Apr 17, 2017 | |

ಹರಪನಹಳ್ಳಿ: ಮೈ ಮೇಲಿನ ನಾರುಹಣ್ಣು ಕಳೆದುಕೊಳ್ಳಲು ಎಷ್ಟೇ ಚಿಕಿತ್ಸೆ ಪಡೆದಿದ್ರೂ ಅದು ಹೋಗಿರುವುದಿಲ್ಲ. ಆದರೆ ರಥೋತ್ಸವಕ್ಕೆ ಬಂದು ರಥಕ್ಕೆ ಕೇವಲ ನಾರು ಎಸೆದರೆ ಸಾಕು ನಾರುಹುಣ್ಣು ಕಳೆದು ಹೋಗುತ್ತದೆ. ಇಂತಹ ಪವಾಡ ನಡೆಯುತ್ತಿರುವುದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದ ನಾರದಮುನಿ ದೇವರ ಮಹಿಮೆ. 

Advertisement

ಹೌದು. ಇಂತಹ ಪವಾಡ ಪುರುಷ ನಾರದಮುನಿಯ ದೇವಾಲಯ ರಾಜ್ಯದಲ್ಲಿರುವ ಏಕೈಕ ದೇವಾಲಯವಾಗಿದೆ. ಹರಪನಹಳ್ಳಿ ಪಟ್ಟಣದಿಂದ 12 ಕಿ.ಮೀ ದೂರದಲ್ಲಿರುವ ಚಿಗಟೇರಿ ಗ್ರಾಮದಲ್ಲಿ ನಾರದಮುನಿ ನೆಲೆಸಿದ್ದಾನೆ. ಎಂಟನೇ ಶತಮಾನದಲ್ಲಿ ಉತ್ತರ ಭಾರತದಿಂದ ಬಂದು ಮಧ್ಯ ಕರ್ನಾಟಕದಲ್ಲಿ ನೆಲೆನಿಂತು ತಪಗೈದ “ಭೈರೇಶ’ ತನ್ನ ತಪಶಕ್ತಿಯಿಂದ ಭಕ್ತನ ಮೈಮೇಲಿನ “ನಾರುಹುಣ್ಣು’ (ಚರ್ಮದ ಮೇಲಿನ ಗಂಟು) ನಿವಾರಣೆ ಮಾಡಿದ.

ಅಂದಿನಿಂದ ಶಿವನಾರದಮುನಿ ಎಂದು ಪ್ರಚಲಿತರಾಗಿದ್ದು, ನಾಡಗೌಡರು ಅಲ್ಲಿ ದೇವಸ್ಥಾನ ನಿರ್ಮಿಸಿದರು  ಎಂಬ ಇತಿಹಾಸವಿದೆ. ದೇವಸ್ಥಾನದಲ್ಲಿ ಬೆಳಿಗ್ಗೆ ಬಾಲಕನಾಗಿ, ಮಧ್ಯಾಹ್ನ ಯುವಕನಾಗಿ, ಸಂಜೆ ಹಣ್ಣು-ಹಣ್ಣು ಮುದುಕನಾಗಿ ಪೂಜೆಗೊಳ್ಳುವುದು ನಾರದಮುನಿ ದೇವರ ವಿಶೇಷ. ಆದರೆ ಇಲ್ಲಿ ರಥವನ್ನೇರುವುದು ವಿಷ್ಣುವಿನ ಉತ್ಸವ ಮೂರ್ತಿ. ಇಲ್ಲಿನ ರಥಕ್ಕೆ ಆರು ಗಾಲಿ ಇರುವುದು ಇನ್ನೊಂದು ವಿಶೇಷ.

ಉತ್ಸವ ಮೂರ್ತಿ ಇರಿಸದ  ಪಲ್ಲಕ್ಕಿ, ರಥಕ್ಕೆ ಭಕ್ತರು ನಾರು(ಕತ್ತಳೆ ನಾರು)ನ ಕಟ್ಟು ಎಸೆದು ಹರಕೆ ತೀರಿಸುತ್ತಾರೆ. ಎಲ್ಲೆಡೆ ಹಣ್ಣು, ಕಾಯಿ ಎಸೆದು ಭಕ್ತಿ ಸಮರ್ಪಿಸಿದರೆ ನಾರದಮುನಿಗೆ ನಾರನ್ನು ಸಮರ್ಪಿಸುವುದು ರಾಜ್ಯದಲ್ಲೇ ವಿಶೇಷವಾಗಿದೆ. ಅಕ್ಕಿ, ಬಾಳೆಹಣ್ಣು, ಬೆಲ್ಲ, ಹಾಲು, ತುಪ್ಪದಿಂದ ತಯಾರಿಸಿದ “ಅಕ್ಕಿಹುಗ್ಗಿ’ಯನ್ನು ಮಾತ್ರ ದೇವರಿಗೆ ನೈವೇದ್ಯ ಮಾಡಲಾಗುತ್ತದೆ.  ಅದು ಮಣ್ಣಿನ ಮಡಕೆಯಲ್ಲೇ ಬೇಯಿಸಬೇಕು.

ಸುಡುವ ಗಡಿಗೆಯನ್ನೇ ಮಡಿಯಲ್ಲಿ ಹೆಗಲ ಮೇಲೆ ಹೊತ್ತು ದೇವಸ್ಥಾನ ಪ್ರದಕ್ಷಿಣೆ ಮಾಡಿ ನೈವೇದ್ಯ ಸಲ್ಲಿಸಿ ಪ್ರಸಾದ ಹಂಚುವ ಆಚರಣೆ ಇದೆ. 60ಕ್ಕೂ ಹೆಚ್ಚು ಬೆಡಗಿನವರು ಪ್ರತ್ಯೇಕವಾಗಿ ಎಡೆ ಸೇವೆ ಸಲ್ಲಿಸುತ್ತಾರೆ. ಗಂಟೆ ಬಾರಿಸುತ್ತಾ, ಶಿವನಾರದ ಮುನಿ ಗೋವಿಂದಾ ಗೋವಿಂದ… ಎಂದು ದೇವನನ್ನು ಜಪಿಸಿ, ಬೆಳಿಗ್ಗೆ ಎಡೆ ಸಮರ್ಪಣೆ, ಸಂಜೆ ನಾರು ಸಮರ್ಪಣೆಯೊಂದಿಗೆ ಮೂಲಾ ನಕ್ಷತ್ರದಲ್ಲೇ ರಥೋತ್ಸವ ಜರುಗುವುದು ಈ ಕ್ಷೇತ್ರದ ವಿಶೇಷವಾಗಿದೆ. 

Advertisement

ಏ.17ರಂದು ಸಂಜೆ 5.30ರ ಮೂಲಾ ನಕ್ಷತ್ರದಲ್ಲಿ ಜರುಗುವ ನಾರದಮುನಿ ರಥೋತ್ಸವಕ್ಕೆ ರಣ ಬಿಸಿಲನ್ನೂ ಲೆಕ್ಕಿಸದೆ ಪವಾಡ ಪುರುಷನ ರಥೋತ್ಸವಕ್ಕೆ ರಾಜ್ಯದ ದಶ ದಿಕ್ಕುಗಳಿಂದಲೂ ಸಾಗರದೋಪಾದಿಯಲ್ಲಿ ಜನ ಸೇರಿ, ಅಷ್ಟೇ ಬೇಗ ಚದುರುತ್ತದೆ. ಇದನ್ನು ಕಂಡ ಭಕ್ತರು ನಾರಪ್ಪ ಪವಾಡ ಪುರುಷನೇ ಸರಿ ಎಂದು ಉದ^ರಿಸುತ್ತಾರೆ. ವಿಷ್ಣು ಹಾಗೂ ಸಾವಕ್ಕನಿಗೂ ರಥೋತ್ಸವ ಆದ ಮೂರನೇ ದಿನ ಸಂಜೆ ವಿವಾಹ ನೆರವೇರುತ್ತದೆ. 

ಹೆಣ್ಣಿನ(ಸಾವಕ್ಕ) ಕಡೆ ತಂಡಸ್ಲರ ಬೆಡಗು, ವರ(ವಿಷ್ಣು)ನ ಪರ ಉಳಿದ ಎಲ್ಲ ಬೆಡಗಿನವರು ಇದ್ದು ವಿವಾಹ ಕಾರ್ಯ ನೆರವೇರಿಸುತ್ತಾರೆ. ಏ.18ರಂದು ಸಂಜೆ ಓಕುಳಿ ಜರುಗಲಿದೆ. ನಾರಿನ ಪಾಚಿಯಿಂದ ಕಟ್ಟಿದ ಓಕುಳಿ ಕಾಯಿ ಕೀಳಲು ಯುವಕರು ಕಸರತ್ತು ನಡೆಸುವುದು ರೋಮಾಂಚನಕಾರಿ ಆಗಿರುತ್ತದೆ. ಇದಕ್ಕೂ ಮುನ್ನ ಬೆಳಿಗ್ಗೆ ಎಡೆ ಸಮರ್ಪಣೆಯೂ ನೆರವೇರಲಿದೆ. 

* ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next