Advertisement

ವಿರಾಟಪುರ ವಿರಾಗಿ ಜನ-ಮನ ತಲುಪಲಿ; ಬಿ.ವೈ. ವಿಜಯೇಂದ್ರ ಸದಾಶಯ

06:17 PM Jan 02, 2023 | Team Udayavani |

ಗದಗ: ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ “ವಿರಾಟಪುರ ವಿರಾಗಿ’ ಚಲನಚಿತ್ರದ ಟ್ರೈಲರ್‌ ಅನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರವಿವಾರ ನಗರದಲ್ಲಿ ಬಿಡುಗಡೆಗೊಳಿಸಿದರು.

Advertisement

ನಂತರ ಮಾತನಾಡಿದ ವಿಜಯೇಂದ್ರ ಅವರು, ನಮ್ಮ ನಾಡಿನ ಯುಗಪುರು, ಸ್ವಾಮೀಜಿಗಳು ತ್ರಿವಿಧ ದಾಸೋಹದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳ ಜೀವನ ಚರಿತ್ರೆಯನ್ನು ಚಲನಚಿತ್ರವನ್ನಾಗಿ ಮಾಡಿರುವುದು ಸಂತಸದ ವಿಷಯವಾಗಿದೆ. ಕುಮಾರ ಶಿವಯೋಗಿಗಳು ನಡೆದು ಬಂದ ಹಾದಿ, ಸಮಾಜಕ್ಕೆ ನೀಡಿದ ಉತ್ತಮ ಸಂದೇಶ ಹಾಗೂ ನೀತಿ ಪಾಠಗಳನ್ನು ಯುವಕರಿಗೆ ತಲುಪಿಸುವ ಉದ್ದೇಶದಿಂದ
ನಿರ್ಮಾಣ ಮಾಡಿರುವ “ವಿರಾಟಪುರ ವಿರಾಗಿ’ ಚಲನಚಿತ್ರ ರಾಜ್ಯ, ದೇಶದ ಜನರ ಮನೆ, ಮನ ತಲುಪಲಿ ಎಂದು ಹಾರೈಸಿದರು.

ವಿರಾಟಪುರ ವಿರಾಗಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರು, ಹೊಸ ವರ್ಷದ ದಿನದಂದು ಟ್ರೈಲರ್‌ ಹಾಗೂ ಮಕರ ಸಂಕ್ರಾಂತಿಯಂದು ಸಿನಿಮಾ ಬಿಡುಗಡೆಗೊಳಿಸುವ ಮೂಲಕ ಹಬ್ಬಗಳನ್ನು ಧಾರ್ಮಿಕವಾಗಿ ಆಚರಿಸುವಂತೆ ಅವಕಾಶ ಒದಗಿಸಿಕೊಟ್ಟಿರುವ ಜಡೆಯ ಶಾಂತಲಿಂಗ ಸ್ವಾಮೀಜಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜೊತೆಗೆ ಶ್ರೀಗಳ ಹಾಗೂ ನಿರ್ಮಾಪಕರ ಅಪ್ಪಣೆ ಮೇರೆಗೆ ಜ.13ರಂದು  ದೇಶಾದ್ಯಂತ ಬಿಡುಗಡೆಗೊಳ್ಳಲಿರುವ “ವಿರಾಟಪುರ ವಿರಾಗಿ’ ಚಿತ್ರವನ್ನು ಗದಗ ನಗರದಲ್ಲಿ ಚಲನಚಿತ್ರ ಬಿಡುಗಡೆಯಾದ ದಿನದಿಂದ ಒಂದು ವಾರಗಳ ಕಾಲ ಉಚಿತ ಪ್ರದರ್ಶನ ಏರ್ಪಡಿಸಲಾಗುವುದು. ಯುವಕರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ, ವಿರಾಟಪುರ ವಿರಾಗಿ ಚಿತ್ರ ಚಲನಚಿತ್ರವಾಗಿರದೇ ಒಂದು ಗ್ರಂಥವಾಗಿ ರೂಪುಗೊಂಡಿದೆ. ರಾಜ್ಯ ಸರಕಾರ ಚಿತ್ರಕ್ಕೆ ಸಬ್ಸಿಡಿ ಜೊತೆಗೆ ಚಿತ್ರ ಪ್ರದರ್ಶನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಿರ್ದೇಶಕ ಬಿ.ಎಸ್‌. ಲಿಂಗದೇವರು ಮಾತ ನಾಡಿ, ಇಂದಿನ ದಿನಗಳಲ್ಲಿ ಧಾರ್ಮಿಕ, ಭಕ್ತಿ, ಸಂಗೀತ ಹಿನ್ನೆಲೆ ಚಿತ್ರವನ್ನು ಜನರಿಗೆ ಮುಟ್ಟಿಸುವುದು ಸವಾಲಿನ ಕೆಲಸವಾಗಿದೆ. “ವಿರಾಟಪುರ ವಿರಾಗಿ’ ಚಿತ್ರ ನಿರ್ಮಾಣಕ್ಕೆ ಅನೇಕ ಗುರುಗಳು, ಪಂಡಿತರು ಮಾರ್ಗದರ್ಶನ ಮಾಡಿದ್ದಾರೆ. ಅವರ ನೀಡಿದ ಸಲಹೆ ಪಡೆದು ಉತ್ತಮವಾಗಿ ಚಿತ್ರ ನಿರ್ಮಿಸಲಾಗಿದೆ ಎಂದರು. ಹಾಡುಗಳು ಕೂಡ ಉತ್ತಮವಾಗಿ ಮೂಡಿಬಂದಿವೆ ಎಂದು ಹೇಳಿದರು.

Advertisement

ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳು ಸಂಘಟನೆ ಮಾತ್ರವಲ್ಲದೇ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇರಿ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಕೊಡುಗೆ ನೀಡಿದ್ದಾರೆ. ಆದ್ದರಿಂದ ಅವರನ್ನು ಕಾರಣಿಕ ಯುಗ ಪುರುಷ ಎಂದು ಕರೆಯಲಾಗುತ್ತದೆ ಎಂದರು.

ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧೇಶ್ವರ ರಾಜಯೋಗಿಂದ್ರ ಮಹಾ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ ಮಾತನಾಡಿದರು. ಜಡೆಯ ಶ್ರೀ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು.

ಶಾಸಕ ಎಚ್‌.ಕೆ. ಪಾಟೀಲ, ಮಾಜಿ ಶಾಸಕ ಜಿ.ಎಸ್‌. ಪಾಟೀಲ, ಐ.ಎಸ್‌. ಪಾಟೀಲ, ನಟ ಸುಚೇಂದ್ರಪ್ರಸಾದ, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ಸಂಯುಕ್ತ ಬಂಡಿ, ತೋಂಟೇಶ ಮಾನ್ವಿ, ಅಶೋಕ ರಾಮಣ್ಣವರ, ಸರೋಜ ಮಾನ್ವಿ ಮತ್ತಿತರರು ಇದ್ದರು. ಇದಕ್ಕೂ ಮುನ್ನ ಬೆಳಗಾವಿ, ಮಹಾರಾಷ್ಟ್ರದ ಸೊಲ್ಲಾಪೂರ, ಮೈಸೂರು ಸೇರಿ
ರಾಜ್ಯದ ಆರು ಸ್ಥಳಗಳಿಂದ ಆರಂಭವಾಗಿದ್ದ “ವಿರಾಗಿ ಶ್ರೀ ಕುಮಾರೇಶ್ವರ ರಥ’ಗಳು ನಗರದ ವೀರೇಶ್ವರ ಪುಣ್ಯಾಶ್ರಮದಿಂದ ಸಮಾರೋಪ ಸಮಾರಂಭದ ಸ್ಥಳದವರೆಗೆ ಮೆರವಣಿಗೆ ಮೂಲಕ ಆಗಮಿಸಿದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next