ಬಗೆದವರಿಗೆ ಶಿಕ್ಷೆಯಾಗಲಿ ಜಗತ್ತಿನ ಕೋಟ್ಯಂತರ ಭಕ್ತರ ಆರಾಧ್ಯ ದೇವರಾದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಿದ ಲಡ್ಡು ಪ್ರಸಾದ ತಯಾರಿ ವೇಳೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಆತಂಕಕಾರಿ ಸುದ್ದಿ ವಿಶ್ವದಾದ್ಯಂತದ ಭಕ್ತರನ್ನು ದಿಗ್ಭ್ರಮೆಗೀಡುಮಾಡಿದೆ.
ರಾಜಕೀಯ ಹಿತಾಸಕ್ತಿಗಾಗಿ ಭಕ್ತರ ನಂಬಿಕೆಯೊಂದಿಗೆ ಚೆಲ್ಲಾಟವಾಡಿದ ಆಂಧ್ರಪ್ರದೇಶದ ಈ ಹಿಂದಿನ ಸರಕಾರವನ್ನು ಮುನ್ನಡೆಸಿದ್ದ ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಷಡ್ಯಂತ್ರ ಈಗ ಬಟಾಬಯಲಾಗಿದೆ. ದೇಶ-ವಿದೇಶಗಳ ಕೋಟ್ಯಂತರ ಭಕ್ತರನ್ನು ಹೊಂದಿರುವ ತಿರುಪತಿ ತಿಮ್ಮಪ್ಪನ ದರುಶನಕ್ಕೆ ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ. ರಾಜ್ಯ ಸರಕಾರದ ಬೊಕ್ಕಸಕ್ಕೆ ವಾರ್ಷಿಕ ಲಕ್ಷಾಂತರ ಕೋಟಿ ರೂ. ಆದಾಯವನ್ನು ತಂದುಕೊಡುವ ಈ ದೇಗುಲದ ಪಾವಿತ್ರ್ಯಕ್ಕೆ ಧಕ್ಕೆ ತರುವಂತಹ ಮತ್ತು ಭಕ್ತರ ನಂಬಿಕೆಗೆ ದ್ರೋಹ ಬಗೆದ ಹಿಂದಿನ ಸರಕಾರದ ಈ ದುಷ್ಟನಡೆ ಅಕ್ಷಮ್ಯ.
ತಿರುಮಲ ಬೆಟ್ಟವೇರಿ ತಿರುಪತಿ ದರುಶನ ಪಡೆದರೆ ತಮ್ಮ ಸಕಲ ವಿಘ್ನ, ಕಂಟಕ, ಪಾಪಗಳು ನಿವಾರಣೆಯಾಗಿ ಮನೋಭಿಲಾಷೆಗಳು ಈಡೇರುತ್ತವೆ ಎಂಬ ದೃಢವಾದ ನಂಬಿಕೆ ಭಕ್ತ ಜನರದ್ದು. ಇಂತಹ ಪ್ರಸಿದ್ಧ ಯಾತ್ರಾ ಕ್ಷೇತ್ರದಲ್ಲಿ ಈ ತೆರನಾದ ಘನಘೋರ ಕೃತ್ಯವನ್ನು ಎಸಗಲಾಗಿದೆ ಎಂಬ ವರದಿಯನ್ನು ಕೇಳಿಯೇ ಭಕ್ತರು ಸ್ತಂಭೀಭೂತರಾಗಿದ್ದಾರೆ. ತಿರುಪತಿ ತಿಮ್ಮಪ್ಪನ ಪ್ರಸಾದದಲ್ಲಿ ದನ, ಹಂದಿಯ ಕೊಬ್ಬು, ಮೀನಿನ ಎಣ್ಣೆ ಬೆರೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಾಗಲೇ ಭಕ್ತರು ಹೌಹಾರಿದ್ದರು. ಈಗ ಗುಜರಾತ್‌ನ ಕಾಫ್ ಪ್ರಯೋಗಾಲಯ ಲಡ್ಡು ಪ್ರಸಾದವನ್ನು ಪರೀಕ್ಷಿಸಿ ಆರೋಪವನ್ನು ದೃಢೀಕರಿಸಿ ರಾಜ್ಯ ಸರಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ತಿರುಪತಿಯ ಲಡ್ಡುಪ್ರಸಾದವನ್ನು ಸ್ವೀಕರಿಸಿದರೆ ತಿರುಪತಿ ತಿಮ್ಮಪ್ಪನ ದರುಶನವಾದಂತೆ ಎಂದು ನಂಬಿಕೊಂಡು ಬಂದಿರುವ ಭಕ್ತರು ಪ್ರಯೋಗಾಲಯದ ಈ ಸ್ಫೋಟಕ ವರದಿ ಬಹಿರಂಗಗೊಳ್ಳುತ್ತಿದ್ದಂತೆಯೇ ಬೆಚ್ಚಿ ಬಿದ್ದಿದ್ದಾರೆ.ದಶಕಗಳಿಂದಲೂ ತಿರುಮಲ ಪ್ರದೇಶ ಒಂದಲ್ಲ ಒಂದು ಕಾರಣಕ್ಕಾಗಿ ವಿವಾದದ ಕೇಂದ್ರಬಿಂದುವಾಗುತ್ತಲೇ ಬಂದಿದೆ.
ವೈ.ಎಸ್.ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಿರುಪತಿ ಪರಿಸರದಲ್ಲಿ ಮತಾಂತರ ಹೆಚ್ಚುತ್ತಿದ್ದು, ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲೂ ಅನ್ಯಮತೀಯರ ಹಸ್ತಕ್ಷೇಪ ಅತಿಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅಷ್ಟು ಮಾತ್ರವಲ್ಲದೆ ದೇಗುಲದ ಆಡಳಿತ ಮಂಡಳಿಗೆ ಅನ್ಯಮತೀಯರನ್ನು ಸೇರ್ಪಡೆಗೊಳಿಸುವ ಮೂಲಕ ದೇಗುಲದ ಪಾವಿತ್ರ್ಯವನ್ನು ಹಾಳುಗೆಡಹುವ ಪ್ರಯತ್ನ ನಡೆಯುತ್ತಿದೆ ಎಂಬ ದೂರುಗಳೂ ಇದ್ದವು. ಆದರೆ ಇವೆಲ್ಲವೂ ಕೇವಲ ರಾಜಕೀಯ ಕೆಸರೆರಚಾಟಕ್ಕೆ ಸೀಮಿತವಾದವೇ ಹೊರತು ವಾಸ್ತವಕ್ಕೆ ಬೆಳಕು ಚೆಲ್ಲುವ ಪ್ರಯತ್ನವನ್ನು ಆಡಳಿತಾರೂಢ ಸರಕಾರಗಳು ಮಾಡಲಿಲ್ಲ. ಈಗ ಲಡ್ಡು ಪ್ರಸಾದದ ಕುರಿತಾಗಿನ ಆರೋಪವೂ ಇದೇ ಹಾದಿ ಹಿಡಿಯುವಂತಾಗಬಾರದು. ರಾಜಕೀಯವನ್ನು ಬದಿಗಿರಿಸಿ, ಈ ವಿಷಯವನ್ನು ಆಂಧ್ರ ಪ್ರದೇಶ ಮತ್ತು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ, ಕೂಲಂಕಷ ತನಿಖೆ ನಡೆಸಿ, ವಾಸ್ತವಾಂಶವನ್ನು ಬಯಲಿಗೆಳೆಯಬೇಕು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು. ಈ ಬಗ್ಗೆ ಕ್ಷಿಪ್ರಗತಿಯಲ್ಲಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಮತ್ತು ಶಾಮೀಲಾದವರೆಲ್ಲರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸುವ ಕಾರ್ಯವಾಗಬೇಕು.
ಇದೇ ವೇಳೆ ಕರ್ನಾಟಕ ಸಹಿತ ದೇಶದೆಲ್ಲೆಡೆ ದೇಗುಲಗಳಲ್ಲಿ ಅದರಲ್ಲೂ ಮುಖ್ಯವಾಗಿ ಸರಕಾರದ ಸುಪರ್ದಿಯಲ್ಲಿರುವ ದೇಗುಲಗಳಲ್ಲಿ ಭಕ್ತರಿಗೆ ನೀಡಲಾಗುತ್ತಿರುವ ಪ್ರಸಾದವನ್ನು ಪರೀಕ್ಷೆಗೊಳಪಡಿಸಿ, ಅದರ ಸಾಚಾತನ, ಗುಣಮಟ್ಟವನ್ನು ಖಾತರಿಪಡಿಸಿ, ಭಕ್ತರ ನಂಬಿಕೆಯನ್ನು ಎತ್ತಿ ಹಿಡಿಯುವ ಕಾರ್ಯಕ್ಕೆ ಸರಕಾರಗಳು ಮುಂದಾಗಬೇಕು.