Advertisement
ಸಂಸತ್ತಿನ ಅಧಿವೇಶನದಲ್ಲಿ ಫಲಪ್ರದವಾದ ಚರ್ಚೆಗಳು ನಡೆದು, ಸರಕಾರ ಮಂಡಿಸುವ ಮಸೂದೆಗಳು ಸರಕಾರ-ವಿಪಕ್ಷಗಳ ಕ್ರಿಯಾಶೀಲ ಸಂವಾದದಿಂದ ಪರಿಷ್ಕೃತ ರೂಪ ಪಡೆದು ಅಂಗೀಕಾರಗೊಂಡು ದೇಶದ ಪ್ರಗತಿ, ಅಭಿವೃದ್ಧಿಗೆ ಚೈತನ್ಯವಾಗಬೇಕು ಎಂಬುದು ಸದಾಶಯ. ಸರಕಾರ-ವಿಪಕ್ಷಗಳ ನಡುವೆ ರಾಜಕೀಯ ಮೇಲಾಟ, ಭಿನ್ನಾಭಿಪ್ರಾಯಗಳು ಸಹಜ, ಇರಬೇಕಾದದ್ದೇ. ಆದರೆ ರಾಷ್ಟ್ರಹಿತದ ದೃಷ್ಟಿಯನ್ನು ಇರಿಸಿಕೊಂಡು ಈ ಬಾರಿಯ ಚಳಿಗಾಲದ ಅಧಿವೇಶನ ಸಾಂಗವಾಗಿ ಮತ್ತು ಫಲಪ್ರದವಾಗಿ ನಡೆಯುವಂತೆ ಆಡಳಿತ ಮತ್ತು ವಿಪಕ್ಷಗಳು ಪ್ರಯತ್ನಿಸಬೇಕು.
Related Articles
Advertisement
ಯಾವುದೇ ಅಧಿವೇಶನ ಆರಂಭಕ್ಕೆ ಮುನ್ನ ಹೀಗೆ ಸರ್ವಪಕ್ಷಗಳ ಸಭೆ ನಡೆಯುವುದು, ಅಲ್ಲಿ ಕಲಾಪ ಸುಗಮವಾಗಿ ನಡೆಯಲು ಸಹಕರಿಸುವಂತೆ ವಿಪಕ್ಷಗಳನ್ನು ಸರಕಾರ ಕೋರಿಕೊಳ್ಳುವುದು, ವಿಪಕ್ಷಗಳು ಅದಕ್ಕೆ ಒಪ್ಪಿಕೊಳ್ಳುವುದು ಒಂದು ರೂಢಿಯಂತೆ ನಡೆಯುತ್ತಿದೆ. ಆದರೆ ವಾಸ್ತವವಾಗಿ ಕಲಾಪದ ವೇಳೆ ನಡೆಯುವುದೇ ಬೇರೆ. ವಿಪಕ್ಷಗಳು ಕಲಾಪ ಭಂಗವನ್ನೇ ಉದ್ದೇಶವಾಗಿಟ್ಟುಕೊಂಡಂತೆ ವರ್ತಿಸುವುದು, ಸರಕಾರ ವಿಪಕ್ಷಗಳ ಕೂಗು ಕೇಳಿಯೇ ಇಲ್ಲವೆಂಬಂತೆ ಮಸೂದೆಗಳನ್ನು ಅಂಗೀಕರಿಸಿಕೊಂಡು ಮುನ್ನಡೆಯುವುದು ಎಲ್ಲ ಅಧಿವೇಶನಗಳಲ್ಲಿಯೂ ಕಂಡುಬರುವ ಸಾಮಾನ್ಯ ವಿದ್ಯಮಾನ. ಇದಕ್ಕೆ ಪೂರಕವಾಗಿ ಅಧಿವೇಶನದ ಮೊದಲ ದಿನವೇ ಮುಂದಿನ ಕಲಾಪಗಳು ಹೇಗೆ ನಡೆಯಬಹುದು ಎಂಬ ಮುನ್ಸೂಚನೆಯೂ ಲಭಿಸಿದೆ.
ಇದು ದೇಶದ, ಪ್ರಜಾಪ್ರಭುತ್ವದ ದೃಷ್ಟಿಯಿಂದ ಆಗಬಾರದು. ಈ ಬಾರಿ ಯಾದರೂ ವಿಪಕ್ಷಗಳು ಮತ್ತು ಸರಕಾರ ಅಮೂಲ್ಯ ಕಲಾಪದ ಸಮಯ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಬೇಕು. ಚಳಿಗಾಲದ ಅಧಿವೇಶನದ ಕಲಾಪವು ಗದ್ದಲದಲ್ಲಿ ಕಳೆದುಹೋಗಲು ಬೇಕಾದ ವಿಷಯಗಳು ಕಣ್ಣಮುಂದೆಯೇ ಇವೆ. ಹಾಗೆಂದು ಅವು ಅಧಿವೇಶನದಲ್ಲಿ ಚರ್ಚೆಯಾಗಬಾರದ ವಿಷಯಗಳು ಎಂದಲ್ಲ. ಆದರೆ ಅವೇ ಕಾರಣವಾಗಿ ಒಟ್ಟೂ ಅಧಿವೇಶನ ಹಾಳಾಗಬಾರದು. ಈ ಎಚ್ಚರವನ್ನು ಇರಿಸಿಕೊಂಡು ಉಭಯತರು ವಿವೇಚನೆ, ವಿವೇಕದಿಂದ ಮುನ್ನಡೆಯಬೇಕಾಗಿದೆ.