Advertisement

Article: ನದಿಯ ಹಂಗು ಬದುಕಿಗಿರಲಿ ಸದಾ

12:26 AM Sep 24, 2023 | Team Udayavani |

ಪ್ರತೀ ವರ್ಷ ಸೆಪ್ಟಂಬರ್‌ ತಿಂಗಳ ನಾಲ್ಕನೇ ರವಿವಾರವನ್ನು ವಿಶ್ವ ನದಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ನದಿ ಸಹಿತ ಪ್ರಕೃತಿಯ ಮೇಲಣ ನಮ್ಮ ಗೌರವ ಆರಾಧನೆಗಷ್ಟೇ ಸೀಮಿತವಾಗದೆ ಅದರ ರಕ್ಷಣೆ, ಉಳಿವಿಗಾಗಿ ಶ್ರಮಿಸಲೇಬೇಕಾದ ಅನಿವಾರ್ಯತೆಯೂ ಇದೆ. ಹಾಗಾದರೆ ಮಾತ್ರ ನಮ್ಮ ಬದುಕು ಕೂಡ ನದಿಯಂತೆ ಸಹಜ ಹರಿವನ್ನು ಕಾಣಲು ಸಾಧ್ಯ.

Advertisement

ಒಂದು ಹಳ್ಳಿ. ಅತ್ಯಂತ ಪ್ರಶಾಂತ. ಹರಿಯುತ್ತಿರುವ ಒಂದು ನದಿ. ನೀರಿನ ಜುಳು ಜುಳು ನಾದ. ರಭಸವೂ ಇಲ್ಲ, ಅಬ್ಬರವೂ ಇಲ್ಲದ ನಡೆ. ನದಿಯಲ್ಲಿ ಎರಡು ನೀರಗಾಲಿಗಳು. ತಿರುಗುತ್ತಲೇ ಇರುವುದು ಅವುಗಳ ಜಾಯಮಾನ.

ಸುತ್ತಲೂ ಹಸುರು. ಅಲ್ಲಲ್ಲಿ ಅರಳಿದ ಹೂವುಗಳು. ಅವುಗಳಿಗೋ ಹಲವು ಬಣ್ಣಗಳು. ಆ ನದಿಗೊಂದು ಕಾಲು ಸಂಕ. ಉದ್ದನೆಯದು. ಸಂಕದ ಮತ್ತೂಂದು ತುದಿಯ ಬದಿಯಲ್ಲಿ ಒಬ್ಬ ಅಜ್ಜ, ನೀರಗಾಲಿಯ ದುರಸ್ತಿಯಲ್ಲಿ ತೊಡಗಿದ್ದಾನೆ. ಒಬ್ಬ ತರುಣ ಸುತ್ತಲೂ ನೋಡುತ್ತಾ ಕಾಲು ಸಂಕ ದಾಟಿ ಅಜ್ಜನಲ್ಲಿಗೆ ಬಂದ. ಮತ್ತೂಮ್ಮೆ ಸುತ್ತಲೂ ನೋಡಿದ. ಮೌನದ ಮಧ್ಯೆ ನದಿಯ ನಾದ ಬಿಟ್ಟರೆ ಬೇರಿಲ್ಲ. ಮೆಲ್ಲಗೆ ಅಜ್ಜನ ಬಳಿ ಬಂದ. ಶುಭ ಕೋರಿದ. ಅಜ್ಜನದು ಸಣ್ಣ ಮುಗುಳ್ನಗೆಯ ಉತ್ತರ. “ಈ ಹಳ್ಳಿಯ ಹೆಸರೇನು?’ ತರುಣನ ಮೊದಲ ಪ್ರಶ್ನೆ. “ಅಂಥದ್ದೇನೂ ಇಲ್ಲ. ಎಲ್ಲರೂ ಹಳ್ಳಿಯೆಂದೇ ಕರೆಯುತ್ತಾರೆ. ಸುತ್ತಲಿನ ಕೆಲವರು ವಾಟರ್‌ ಮಿಲ್‌ (ನೀರಿನ ಗಿರಣಿ) ವಿಲೇಜ್‌ ಎನ್ನುತ್ತಾರಷ್ಟೇ’ ಎಂದು ತನ್ನ ಕಾರ್ಯದಲ್ಲಿ ಮಗ್ನನಾದ.

ಹೀಗೇ ಇಬ್ಬರ ನಡುವಿನ ಮಾತುಕತೆ ನದಿಯಂತೆ ಸಾಗಿ ಹೋಗಿ ಸಾಗರ ಸೇರುವಾಗ ತರುಣ, “ನಿಮಗೆ ಎಷ್ಟು ವರ್ಷ’ ಎಂದು ಕೇಳಿದ. ಅಜ್ಜ ತೃಪ್ತ ನಗೆ ಬೀರುತ್ತಾ “ನೂರಾ ಮೂರು. ಬದುಕು ಮುಗಿಸಲು ಒಳ್ಳೆಯ ವಯಸ್ಸು ಎನ್ನುತ್ತಾರೆ. ಇನ್ನು ಕೆಲವರು ಬದುಕು ಕಷ್ಟ ಎನ್ನುತ್ತಾರೆ. ಅದು ಸುಮ್ಮನೆ ಮಾತಿಗೇ. ನಿಜವಾಗಲೂ ಇದು ಜೀವಿಸಲು ಒಳ್ಳೆಯ ವಯಸ್ಸು. ಬದುಕುವುದೆಂದರೆ ರೋಚಕವಲ್ಲವೇ?’ ಎಂದು ಹೇಳಿದ. ತರುಣ ಅಜ್ಜನ ಜೀವನೋತ್ಸಾಹ ಮತ್ತು ಜೀವನ ಪ್ರೀತಿಯನ್ನು ಅಚ್ಚರಿಯಂತೆ ಕಂಡು ಅಲ್ಲಿಂದ ಸಾಗಿದ. ನದಿ ತಣ್ಣಗೇ ಪಯಣಿಸುತ್ತಲೇ ಇತ್ತು ಸಾಗರದತ್ತ.

ನದಿ ಮತ್ತು ಬದುಕಿಗೂ ಎಷ್ಟೊಂದು ಸಾಮೀಪ್ಯ?

Advertisement

ಅಕಿರಾ ಕುರಸೋವಾ. ಜಗತ್ತಿನ ಅತ್ಯಂತ ಪ್ರಮುಖ ಚಿತ್ರ ನಿರ್ದೇಶಕ. ಜಪಾನ್‌ ದೇಶದವನು. ಅವನ ಹಲವು ಆಯಾಮಗಳ ಅನೇಕ ಚಲ ನಚಿತ್ರಗಳು ಸಾರ್ವಕಾಲಿಕ ಮೌಲ್ಯವನ್ನು ಉಳ್ಳವು. ಅವನ “ಡ್ರೀಮ್ಸ್‌’ ಎಂಟು ಕಿರುಚಿತ್ರಗಳ ಅಥವಾ ದೃಶ್ಯಸಂಕಲನಗಳ ಗುತ್ಛ. ಎಲ್ಲವೂ ವಾಸ್ತ ವವಾದಿ ನೆಲೆಯವು. ವಿಭಿನ್ನ ವಸ್ತುಗಳ ಸಂರಚನೆಯುಳ್ಳವು. ಆ ಪೈಕಿ ಒಂದು “ವಿಲೇಜ್‌ ಆಫ್ ವಾಟರ್‌ ಮಿಲ್ಸ್‌’. ಅಜ್ಜ ಮತ್ತು ತರುಣ ಹಳೆಯ ಮತ್ತು ಆಧುನಿಕ ತಲೆಮಾರುಗಳನ್ನಷ್ಟೇ ಪ್ರತಿನಿಧಿಸಿಲ್ಲ. ಪ್ರಕೃತಿ ಮತ್ತು ಬದುಕಿನ ಕ್ರಮವನ್ನೂ ಹೇಳುತ್ತದೆ, ಎರಡರ ಸುಖ-ಸಂತೋಷದ ಪರಿಕಲ್ಪನೆಯನ್ನೂ ವಿವರಿಸುತ್ತದೆ. ಇಂದಿನ ವಾಸ್ತವತೆಗೂ ಕನ್ನಡಿ ಹಿಡಿಯುತ್ತಲೇ ತಾಂತ್ರಿಕತೆ, ತಂತ್ರಜ್ಞಾನಗಳು ಸುಖ, ಸಂತೋಷ, ನೆಮ್ಮದಿ, ಬದುಕಿಗೆ ಕೊಟ್ಟ ಹೊಸ ಅರ್ಥ ವ್ಯಾಖ್ಯಾನಗಳನ್ನೂ ಹೇಳುತ್ತದೆ.

ಅಲ್ಲೇ ಇದ್ದ ಒಂದು ಸಣ್ಣ ಕೋಣೆಯಲ್ಲಿನ ಕತ್ತಲೆಯನ್ನು ಕಂಡ ತರುಣ “ಇಲ್ಲಿ ವಿದ್ಯುತ್‌ ಇಲ್ಲವೇ?’ ಎಂದು ಕೇಳಿದ. “ಅಗತ್ಯವೇನಿದೆ?’ ಎಂದು ಮರುಪ್ರಶ್ನೆಯಿತ್ತ ಅಜ್ಜ.
“ರಾತ್ರಿ ಬಹಳ ಕತ್ತಲೆಯಲ್ಲವೇ?’ ಎಂಬ ಪ್ರಶ್ನೆಗೆ ಅಜ್ಜ “ರಾತ್ರಿ ರಾತ್ರಿ ಯಂತೆಯೇ ಇರಬೇಕಲ್ಲ! ಅದು ಹೇಗೆ ಹಗಲಿನಂತೆ ಪ್ರಕಾಶಿಸೀತು? ಅಂಥ ನಿರೀಕ್ಷೆಯೂ ಯಾಕೆ? ಅಷ್ಟಕ್ಕೂ ರಾತ್ರಿಯೂ ಹಗಲಿನಂತೆ ಬೆಳಕಿನಲ್ಲಿ ಮಿಂದರೆ ನಕ್ಷತ್ರ ನೋಡುವುದೆಂತು?’ ಎಂಬ ಉತ್ತರಕ್ಕೆ ತರುಣನದ್ದು ಮುಗುಳ್ನಗೆಯ ಪ್ರತಿಕ್ರಿಯೆ.

ತರುಣ ಕತ್ತಲೆಯನ್ನು ಹೇಗೆ ಕಳೆಯುತ್ತೀರಿ ಎಂದು ಕೇಳಿದ್ದಕ್ಕೆ ಅಜ್ಜ, “ತೈಲದ ದೀಪಗಳಿವೆ. ಮನುಷ್ಯರು ಅನುಕೂಲಗಳಿಗೆ ಹೊಂದಿಕೊಂ ಡಿದ್ದಾರೆ. ಅದೇ ನೆಮ್ಮದಿ ಎಂದುಕೊಂಡು ಸಹಜವಾದುದೆಲ್ಲವನ್ನೂ ದೂರ ಎಸೆಯುತ್ತಿದ್ದಾರೆ’ ಎಂದ.

ಹೌದಲ್ಲವೇ? ಎರಡಕ್ಕೂ ಸಹಜವಾದ ಹರಿವು ಇರಬೇಕಲ್ಲ. ನದಿಗೂ ಮತ್ತು ಬದುಕಿಗೂ.

ನದಿ. ನಾಗರಿಕತೆಯ ಮಡಿಲು. ನಗರಗಳ ಒಡಲು. ಜಗತ್ತಿನ ಬಹು ತೇಕ ನಾಗರಿಕತೆಗಳು ಅರಳಿರುವುದು ನದಿಗಳ ಒಡಲಲ್ಲೇ. ಸಿಂಧೂ ವಿನಿಂದ ಹಿಡಿದು ನೈಲ್‌ ನದಿಯವರೆಗೂ ನಾಗರಿಕತೆಗಳ ಹೆಜ್ಜೆಗಳು ಹರ ಡಿವೆ. ಭಾರತೀಯ ಪರಂಪರೆಯಲ್ಲಂತೂ ನದಿಗಳಿಗೆ ಅತ್ಯಂತ ಪೂಜ್ಯ ಮತ್ತು ಪವಿತ್ರ ಸ್ಥಾನ. ಪ್ರಕೃತಿ ಆರಾಧಕರು ನಾವು. ನಮ್ಮ ಬದುಕಿನುದ್ದಕ್ಕೂ ಪ್ರಕೃತಿಯನ್ನು ಒಳಗೊಳ್ಳುತ್ತಲೇ ಬಂದವರು. ಇದು ಜಗತ್ತಿನ ಎಲ್ಲ ಹಿರಿಯ ತಲೆಮಾರುಗಳೂ ಪ್ರಕೃತಿಯನ್ನು ಪ್ರೀತಿಸುತ್ತಲೇ ಬಂದವರು. ಅವರ ಬದುಕಿನಲ್ಲಿ ನದಿಗಳಿಗೂ ಸ್ಥಾನವಿತ್ತು, ಕಾಡಿಗೂ ಸ್ಥಾನವಿತ್ತು, ಸಾಗರಕ್ಕೂ ಅವಕಾಶವಿತ್ತು. ಅದೇ ಜಪಾನಿನ ಅಕಿರಾ ಕುರಸೋವಾನ ಚಿತ್ರವೂ ಹೇಳಿದ್ದು.

ಬದುಕು ನದಿಯಂತೆಯೆ ಸಾಗಬೇಕೆಂದರೆ ಕಲುಷಿತವೂ ಆಗಬಾರದು, ಹರವನ್ನೂ, ಹಾದಿಯನ್ನೂ ಮರೆಯಬಾರದು ತಾನೇ.

ಅಲಕಾನಂದ. ಉತ್ತರಾಖಂಡ ರಾಜ್ಯದ ಪ್ರಮುಖ ನದಿ. ಹಿಮಾಲಯ ತಪ್ಪಲಿನಲ್ಲಿ ಹರಿಯುವಂಥದ್ದು. ಗಂಗೆಯ ಹೆಸರು ನಾವು ಕೇಳಿದ್ದೇವೆ, ಅನುಭವಿಸಿದ್ದೇವೆ, ಆರಾಧಿಸಿದ್ದೇವೆ. ಆ ಗಂಗೆಯ ಹರಿಯುವಿಕೆಯ ಪ್ರಧಾನ ಎರಡು ಧಾರೆಗಳಲ್ಲಿ ಅಲಕಾನಂದವೂ ಒಂದು. ಬದರೀನಾಥ ಕ್ಷೇತ್ರವೂ ಇದರ ತಟದಲ್ಲಿದೆ. ಮೈ ಕೊರೆಯುವಂಥ ತಣ್ಣಗಿನ ಅಲಕಾನಂದ ಸ್ಫಟಿಕದಷ್ಟು ಶುಭ್ರ. ಹಿಮಾಲಯ ಪ್ರದೇಶದ ಸತೋ ಪಂಥ್‌ನಲ್ಲಿ ಹುಟ್ಟಿ ಹರಿದು ಸರಸ್ವತಿ ನದಿಯನ್ನು ಸೇರಿಕೊಂಡು ಬದರೀನಾಥ ಕಣಿವೆಯನ್ನು ದಾಟಿ ಹಾಗೆಯೇ ಹರಿದು ದೇವ ಪ್ರಯಾಗದಲ್ಲಿ ಭಾಗೀರಥಿಯನ್ನು ಸೇರುತ್ತಾಳೆ. ಮುಂದೆ ಗಂಗೆಯತ್ತ ಪ್ರಯಾಣ. ನಿಜಕ್ಕೂ ಗಂಗೆ, ಯಮುನೆಯರಿಗೂ ಇಲ್ಲವೇನೋ ಎಂಬಂಥ ವಿಶೇಷ ಸೌಂದರ್ಯ ಇವಳಿಗಿದೆ. ಗಂಗೆಯ ರಭಸಕ್ಕೂ, ಅಲಕಾನಂದಳ ತಣ್ಣನೆಯ ಹರಿವಿಗೂ ಎಷ್ಟೊಂದು ವ್ಯತ್ಯಾಸವಿದೆ.

ತಮಿಳುನಾಡಿನ ಕಮ್ಮವಾನ್‌ ಪೆಟ್ಟೈ ಒಂದು ಹಳ್ಳಿ. ಸುಮಾರು ಐದು ವರ್ಷಗಳ ಹಿಂದೆ ಬಹಳ ಸುದ್ದಿಯಾದದ್ದು ಒಂದು ನದಿಯ ಕಾರ ಣಕ್ಕಾಗಿಯೇ. ನಾಗನದಿ ಪಾತ್ರದ ಮಹಿಳೆಯರೆಲ್ಲ ಸೇರಿ 15 ವರ್ಷಗಳಿಂದ ಬಹುತೇಕ ಸತ್ತೇ ಹೋಗಿದ್ದ ನದಿಯನ್ನು ಪುನರುಜ್ಜೀವನಗೊಳಿಸಿದರು. ದಿ ಆರ್ಟ್‌ ಆಫ್ ಲಿವಿಂಗ್‌ (ಎಒಎಲ್‌)ಸಂಸ್ಥೆಯ ನದಿ ಪುನರುಜ್ಜೀವನದ ಭಾಗವಾಗಿತ್ತು ಈ ಪ್ರಯತ್ನ.

ಕೃಷಿ ಹಾಗೂ ನಿತ್ಯ ಬದುಕಿಗೂ ಅಸಾಧ್ಯವೆನಿಸುವ ನೀರಿನ ಕೊರತೆ ಯನ್ನು ಸಹಿಸಲಾಗದೇ ನದಿಯ ಪುನರುಜ್ಜೀವನಕ್ಕೆ ಮುಂದಾದರು. ಹಳ್ಳಿಯ ಮಹಿಳೆಯರ ಪ್ರಯತ್ನಕ್ಕೆ ಪರಿಣತರು, ಎಒಎಲ್‌ನ ಕಾರ್ಯಕರ್ತರು ಸಹಕರಿಸಿದರು. ನರೇಗಾ ಯೋಜನೆಯ ಸಹಯೋಗವೂ ಸಿಕ್ಕಿತು. ಎಲ್ಲದರ ಫ‌ಲವಾಗಿ ಸುಮಾರು 20 ಸಾವಿರ ಮಂದಿ ಭಗೀರಥೆಯರು ನಾಗ ನದಿಯನ್ನು ಮತ್ತೆ ಕರೆತಂದರು.

ಇನ್ನೊಂದು ಇಂಥದ್ದೇ ಕಥೆ ಇದೆ. ಇತ್ತೀಚಿನದು. ಹತ್ತಿರದ ಕೇರಳದಿಂದ ಬಂದದ್ದು. ಆಲಪ್ಪುಳ ಜಿಲ್ಲೆಯಲ್ಲಿನ ಕುಟ್ಟಂಪೆರೂರು ನದಿ ಮತ್ತೆ ಹರಿಯತೊಡಗಿದೆ. ಪಂಪಾ ಮತ್ತು ಅಚೆನ್‌ಕೊಯಿಲ್‌ ನದಿಗಳ ಉಪ ನದಿ ಈ ಕುಟ್ಟಂಪೆರೂರು ನದಿ. ತ್ಯಾಜ್ಯಗಳ ಸುರಿಯುವಿಕೆ, ಒತ್ತುವರಿ ಇತ್ಯಾದಿ ಕಾರಣದಿಂದ ನದಿ ಸಾವಿಗೆ ದಿನ ಎಣಿಸುತ್ತಿತ್ತು. ಸುಮಾರು ನೂರು ಮೀಟರ್‌ ಅಗಲದ ನದಿಯ ಹರವು 15 ಮೀಟರ್‌ಗೆ ಇಳಿದಿತ್ತು ಎಂದರೆ ಎಷ್ಟೊಂದು ಕೃಶವಾಗಿತ್ತೆಂದು ಊಹಿಸಿ.

ಗ್ರಾಮಸ್ಥರ ಭಾಗೀದಾರಿಕೆ, ಸ್ಥಳೀಯ ಆಡಳಿತ, ಸರಕಾರಗಳ ಸಹಕಾ ರದಿಂದ 6 ವರ್ಷಗಳಲ್ಲಿ ಮತ್ತೆ ನದಿ ಹಿಂದಿನಂತಾಯಿತು. ಖುಷಿಯಿಂದ ಹರಿಯತೊಡಗಿದೆ. ಎಪ್ರಿಲ್‌ನಲ್ಲಿ ಈ ಸಾಧನೆಯನ್ನೂ ಪ್ರಧಾನಿ ನರೇಂದ್ರ ಮೋದಿಯವರೂ ತಮ್ಮ “ಮನ್‌ ಕೀ ಬಾತ್‌’ನಲ್ಲಿ ಉಲ್ಲೇಖೀಸಿದ್ದಾರೆ.

ಅಲ್ಲಿಗೆ ನದಿಯ ಅಗಾಧತೆ ಮತ್ತು ಸಾಧ್ಯತೆಯೇ ನಮಗೂ ಇದೆ, ನಮ್ಮ ಬದುಕಿಗೂ ಇದೆ. ಎಷ್ಟು ಅಚ್ಚರಿಯಲ್ಲವೇ?

ನಾವು ಉಳಿಯಬೇಕಾದರೆ, ನಾಗರಿಕತೆ ಉಳಿಯಬೇಕಾದರೆ, ನಾವು ಕಟ್ಟುತ್ತಿರುವ ಊರುಗಳು, ಪಟ್ಟಣಗಳು, ನಗರಗಳು ಉಳಿಯ ಬೇಕಾದರೆ ಜಗತ್ತಿನಲ್ಲೂ ನದಿಗಳು ಉಳಿಯಬೇಕು, ಉಳಿಸಬೇಕು. ನದಿಗೆ ಹಾಗಲ್ಲ, ಹಲವು ದಾರಿಗಳಿವೆ. ನಮಗಿರುವುದೊಂದೇ ದಾರಿ, ಅದು ನದಿಗಳ ಸಂರಕ್ಷಣೆ ಮತ್ತು ಪುನರುಜ್ಜೀವನ. ಅದೇ ಅಂತಿಮ ಆಯ್ಕೆ. ನದಿ ಸಂರಕ್ಷಣೆಯತ್ತ ನಾವು ತಿರುಗಲೇಬೇಕು.

ಅಂದಹಾಗೆ ಮಂಡ್ಯದಲ್ಲಿ ಕಾವೇರಿ ಪ್ರತಿಭಟನೆ ಜೋರಾಗಿದೆ. ಮಿತಿ ಯಿಲ್ಲದ ನಮ್ಮ ಬೇಡಿಕೆ, ಕರಗುತ್ತಿರುವ ಅರಣ್ಯ, ಹವಾಮಾನ ವೈಪರೀತ್ಯ ಹತ್ತಾರು ಕಾರಣಗಳಿಗೆ ಕಾವೇರಿಯಲ್ಲೂ ಕಸುವಿಲ್ಲ. ಹಾಗಾದರೆ ಹೇಗೆ ಆಕೆ ಓಡಿ ಓಡಿ ಸಾಗರವ ಸೇರುವುದು?

ಇದೇ ನಮ್ಮ ಎದುರು ಇರುವ ಶತಕೋಟಿ ಪ್ರಶ್ನೆ.

ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next