Advertisement

ನಗರದ ಜೀವನಾಡಿ ಒಳರಸ್ತೆಗಳು ಮತ್ತಷ್ಟು ಸುಧಾರಣೆಯಾಗಲಿ 

08:19 PM Nov 09, 2021 | Team Udayavani |

ಮಹಾನಗರ: ನಗರದಿಂದ ಐದಾರು ಕಿಲೋ ಮೀಟರ್‌ ದೂರದಲ್ಲಿರುವ ಕೊಂಚ ಗ್ರಾಮೀಣ ಸೊಗಡು ಬೆಸೆದು ಕೊಂಡಿರುವ ಪ್ರದೇಶದ ಒಳರಸ್ತೆಗಳು ಮತ್ತಷ್ಟು ಸುಧಾರಣೆಯ ಹೊಂಗನಸಿನಲ್ಲಿದೆ. ತಕ್ಕಮಟ್ಟಿಗೆ ರಸ್ತೆ ಅಭಿವೃದ್ಧಿಯಾಗಿದ್ದರೂ ಇಲ್ಲಿ ಇನ್ನಷ್ಟು ಅಭಿವೃದ್ಧಿಯ ನಿರೀಕ್ಷೆ ಸ್ಥಳೀಯರದ್ದಾಗಿದೆ.

Advertisement

ಜಪ್ಪಿನಮೊಗರುವಿನಲ್ಲಿ ಕಡೇಕಾರ್‌ನಿಂದ ತಾರ್ದೊಲ್ಯ ಹೋಗುವ ರಸ್ತೆಯು ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಆದರೆ, ಕೆಲವು ತಿಂಗಳ ಹಿಂದೆ ಡ್ರೈನೇಜ್‌ ಕಾಮಗಾರಿಗಾಗಿ ಈ ರಸ್ತೆಯನ್ನು ಅಗೆದದ್ದು ಬಿಟ್ಟರೆ, ಮತ್ತೆ ರಸ್ತೆ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ, ಸ್ಥಳೀಯ ನಿವಾಸಿಗಳ ದ್ವಿಚಕ್ರ ವಾಹನಗಳಿಗಂತು ಈ ರಸ್ತೆ ನಿತ್ಯ ಸಮಸ್ಯೆಯ ಕೂಪವಾಗಿದೆ.

ಕಡೇಕಾರ್‌ ಮಲ್ಲಿಕಾರ್ಜುನ ದೇವಸ್ಥಾನ ದಿಂದ ಹೆದ್ದಾರಿಗೆ ಬಂದು ಮಂಗಳಾದೇವಿ ಕಡೆಗೆ ಸ್ಥಳೀಯ ವಾಹನಗಳು ತೆರಳ ಬೇಕಾದರೆ ಇಲ್ಲಿ ನಿತ್ಯ ಸಂಕಷ್ಟಪಡುವ ಪರಿಸ್ಥಿತಿಯಿದೆ. ಯಾಕೆಂದರೆ ನಿಯಮದ ಪ್ರಕಾರ, ಕಡೇಕಾರ್‌ ಕಡೆಯಿಂದ ಬಂದವರು ಮಂಗಳಾದೇವಿ ಕಡೆಗೆ ಬರಲು ಹೆದ್ದಾರಿಗೆ ಬಂದು ಎಡಕ್ಕೆ ತಿರುಗಿ ಸೇತುವೆ ಆಗಿ ಕಲ್ಲಾಪುವರೆಗೆ ಹೋಗಿ ಮತ್ತೆ ಟರ್ನ್ ಹೊಡೆದು ವಾಪಸಾಗಬೇಕು. ಪೆಟ್ರೋಲ್‌ ದರ ಗಗನಕ್ಕೇರಿರುವ ಈ ಸಂದರ್ಭದಲ್ಲಿ 50 ಮೀ. ದಾಟಲು 2 ಕಿ.ಮೀ.ನಷ್ಟು ಸುತ್ತುಬಳಸಿ ತೆರಳುವುದು. ಒಂದುವೇಳೆ ಕಡೇಕಾರ್‌ನಿಂದ ಬಂದವರು ಬಲಭಾಗದ ವನ್‌ವೇಯಲ್ಲಿ ಬಂದು 50 ಮೀ. ಸಾಗುವುದನ್ನು ಟ್ರಾಫಿಕ್‌ ಪೊಲೀಸರು ಕಂಡರೆ ದಂಡ ಕಟ್ಟಿಟ್ಟಬುತ್ತಿ! ಸರ್ವಿಸ್‌ ರಸ್ತೆ ಒದಗಿಸದ ಪರಿಣಾಮ ಇಲ್ಲಿ ಈ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಹಾಗೆಂದು ಸೇತುವೆಯ ಅಡಿಯಲ್ಲೊಂದು ಕಚ್ಚಾರಸ್ತೆಯಿದ್ದು, ಅದು ದುರಸ್ತಿ ಕಾಣದೆ ಎಷ್ಟೋ ವರ್ಷಗಳಾಗಿವೆ. ಅದನ್ನಾದರೂ ಸರಿ ಮಾಡಿಕೊಟ್ಟಿದ್ದರೆ ಮಂಗಳಾದೇವಿ ಭಾಗಕ್ಕೆ ಹೋಗುವವರು ಕಿಲೋ ಮೀಟರ್‌ ದೂರ ಹೋಗಿ ಬರುವ ಸಮಸ್ಯೆ ಪರಿಹಾರವಾದೀತು.

ಮೋರ್ಗನ್‌ಗೇಟ್ ನಿಂದ ಜಪ್ಪಿನ ಮೊಗರು ಸಂಪರ್ಕಿಸುವ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದು ನಗರದಿಂದ ಹೆದ್ದಾರಿ ಸಂಪರ್ಕಕ್ಕೆ ಇರುವ ಮುಖ್ಯ ರಸ್ತೆ. ಮೀನಿನ ಲಾರಿ ಸಹಿತ ಬಹುತೇಕ ನಗರದ ಮುಖ್ಯ ವಾಹನಗಳು ಹೆದ್ದಾರಿಗೆ ಬಂದು ಕೇರಳ ಅಥವಾ ಕೊಣಾಜೆ ಕಡೆಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದೆ. ಆದರೆ ಈ ರಸ್ತೆ ಪ್ರತೀ ಮಳೆಗಾಲಕ್ಕೆ ಹೊಂಡ ಗುಂಡಿಗಳಿಂದಲೇ ಸ್ವಾಗತ ನೀಡುವ ಸ್ಥಿತಿಯಲ್ಲಿದೆ. ಈ ರಸ್ತೆ ಯಾವಾಗ ಸುಧಾರಣೆಯಾದೀತು? ಎಂದು ಆಡಳಿತದವರನ್ನು ಕೇಳಿದರೆ “ಸ್ಮಾರ್ಟ್‌ ಸಿಟಿ’ಯ ಲೋಕವನ್ನು ಕಣ್ಣಿಗೆ ಹಿಡಿಯುತ್ತಾರೆ. ಯಾಕೆಂದರೆ ಜಪ್ಪಿನ ಮೊಗರುವಿನಿಂದ ಮೋರ್ಗನ್‌ಗೇಟ್ ಗೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಪ್ರತ್ಯೇಕ ಚತುಷ್ಪಥ ರಸ್ತೆ ಕಾಮಗಾರಿ ಈಗಾಗಲೇ ಶುರುವಾಗಿದೆ. ಅದಾದ ಬಳಿಕ ಎಲ್ಲವೂ ಸರಿಯಾಗುತ್ತದೆ ಎನ್ನುತ್ತಾರೆ. ಆದರೆ, ಅಲ್ಲಿಯವರೆಗೆ ಹಾಲಿ ಇರುವ ರಸ್ತೆಯೇ ಗತಿ ಎನ್ನುವಂತಾಗಿದೆ!

ಇದನ್ನೂ ಓದಿ:ಇನ್‌ಸ್ಟಾಗ್ರಾಂ ಡೌನ್‌ಲೋಡ್‌ಗೆ ಭಾರತವೇ ಫ‌ಸ್ಟ್‌

Advertisement

ಇದಿಷ್ಟು ಪಂಪ್‌ವೆಲ್‌-ತಲಪಾಡಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿ ರುವ ನಗರ ವ್ಯಾಪ್ತಿಯ ಸಂಗತಿಯಾದರೆ, ಬೆಂಗ ಳೂರು ರಾ.ಹೆದ್ದಾರಿ 75ಕ್ಕೆ ಸಂಪರ್ಕ ಕಲ್ಪಿಸುವ ಪಡೀಲ್‌ ಸನಿಹದ ಬಜಾಲ್‌, ಅಳಪೆ ಉತ್ತರದ ಕಥೆ ಮತ್ತೂಂದು ರೀತಿಯಿದೆ.

ಇನ್ನಷ್ಟು ಸುಧಾರಣೆಯಾಗಬೇಕಿದೆ
ಅಳಪೆ ಉತ್ತರ ಭಾಗ ಸಾಮಾನ್ಯವಾಗಿ ಗ್ರಾಮೀಣ ಪರಿಸರವನ್ನು ಹೊಂದಿರುವ ನಗರ ವ್ಯಾಪ್ತಿ. ಹಳ್ಳಿಯ ಸೊಗಡನ್ನು ವ್ಯಾಪಿಸಿ ರುವ ಇಲ್ಲಿ ಡಾಮರು ರಸ್ತೆಗಳು ಸಾಕಷ್ಟು ಕಾಣಸಿಗುತ್ತಿವೆ. ಆದರೆ ಎಲ್ಲವೂ ಸರಿ ಇದೆ ಎನ್ನುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಕೊಡಕ್ಕಲ್‌ ವೈದ್ಯನಾಥ ದೇವಸ್ಥಾನದಿಂದ ರೈಲ್ವೇ ಅಂಡರ್‌ಪಾಸ್‌ವರೆಗಿನ ರಸ್ತೆ ಇನ್ನಷ್ಟು ಸುಧಾರಣೆಯಾಗಬೇಕಿದೆ. ಅಲ್ಲಿಂದ ನೂಜಿಗೆ ಸಂಪರ್ಕಿಸುವ ರಸ್ತೆ ಕೂಡ ಡಾಮರು ಕಿತ್ತು ಹೋಗಿದ್ದು, ಸವಾರರು ಸಂಕಷ್ಟ ಪಡುವಂತಾಗಿದೆ. ಸದ್ಯ ಮಳೆ ಕೂಡ ಕಾಡುತ್ತಿರುವ ಕಾರಣದಿಂದ ಒಳರಸ್ತೆ ಸುಧಾರಣೆಯಾಗಿಲ್ಲ. ಜನವಸತಿ ವ್ಯಾಪ್ತಿಯನ್ನು ಹೊಂದಿರುವ ಇಲ್ಲಿನ ರಸ್ತೆಗೆ ಪುನರುಜ್ಜೀವ ನೀಡಬೇಕಿದೆ. ಈ ಮಧ್ಯೆ ಸರಿಪಳ್ಳ ರಸ್ತೆ ಹೊಸ ನಿರೀಕ್ಷೆಯೊಂದಿಗೆ ವಿಸ್ತರಣೆ ಯೊಂದಿಗೆ ಸುಸಜ್ಜಿತಗೊಳ್ಳುತ್ತಿರುವುದು ಸ್ಥಳೀಯರಿಗೆ ಕೊಂಚ ಸಮಾಧಾನ.

ಬಜಾಲ್‌ ವ್ಯಾಪ್ತಿ ಗ್ರಾಮೀಣ ಸೊಗಡು ಹೊಂದಿರುವ ಪ್ರದೇಶ. ತೀರಾ ಗ್ರಾಮೀಣ ಸ್ವರೂಪದ ಚಿತ್ರಣ ಈ ವ್ಯಾಪ್ತಿಯಲ್ಲಿದೆ. ಜತೆಗೆ ಗುಡ್ಡಗಾಡು ವ್ಯಾಪ್ತಿಯನ್ನು ಒಳಗೊಂಡಿ ರುವ ಪ್ರದೇಶವಿದು. ಹೆಚ್ಚಾ ಕಡಿಮೆ ಇಲ್ಲಿ ಡಾಮರು ರಸ್ತೆ ಇದೆಯಾದರೂ ಸುಧಾರಣೆಯಾಗಲು ಅವಕಾಶ ತುಂಬಾ ಇದೆ. ಜನವಸತಿ ವ್ಯಾಪ್ತಿಯನ್ನು ಒಳಗೊಂಡ ಇಲ್ಲಿ ಒಳರಸ್ತೆಯನ್ನು ವಿಭಿನ್ನ ನೆಲೆಯಲ್ಲಿ ಅಭಿವೃದ್ಧಿಪಡಿಸಬಹುದಾಗಿದೆ.

ನಾಗರಿಕರ ಬೇಡಿಕೆಗಳೇನು?
-ಒಳರಸ್ತೆಯಿಂದ ರಾ.ಹೆದ್ದಾರಿಗೆ ಸಂಪರ್ಕಕ್ಕೆ ಎದುರಾಗಿರುವ ಬಹು ಸಮಸ್ಯೆಗಳಿಗೆ ಪರಿಹಾರ.
– ಜಪ್ಪು ನೇತ್ರಾವತಿ ಸೇತುವೆಯ ಕೆಳಭಾಗದ ಕಚ್ಚಾರಸ್ತೆ ಸುಧಾರಣೆಯಾಗಲಿ.
– ಮೋರ್ಗನ್‌ಗೇಟ್ ಜಪ್ಪಿನಮೊಗರು ರಸ್ತೆ ದುರಸ್ತಿಯಾಗಲಿ.
– ಅಗೆದು ಹಾಕಿರುವ ತಂದೊಲಿಗೆ ರಸ್ತೆ ಸರಿಯಾಗಲಿ.
– ಕೊಡಕ್ಕಲ್‌-ನೂಜಿ ರಸ್ತೆ ಸರಿಯಾಗಬೇಕಿದೆ.
– ಸರಿಪಳ್ಳ ರಸ್ತೆ ಶೀಘ್ರ ಮುಕ್ತಾಯವಾಗಲಿ.

ಜಪ್ಪಿನಮೊಗರು, ಅತ್ತಾವರ ಅಳಪೆ ಉತ್ತರ, ಬಜಾಲ್‌ ವಾರ್ಡ್‌ಗಳಲ್ಲಿ ಉದಯವಾಣಿ ಸುದಿನ ತಂಡ ಸಂಚರಿಸಿ ಮಾಹಿತಿ ಸಂಗ್ರಹಿಸಿದ್ದು, ಈ ಪ್ರದೇಶದ ಕೆಲವೆಡೆ ಡ್ರೈನೇಜ್‌ ಕಾಮಗಾರಿಗಾಗಿ ರಸ್ತೆ ಅಗೆದಿದ್ದು ಮತ್ತೆ ಸರಿಪಡಿಸಿಲ್ಲ. ಹಲವಡೆ ರಸ್ತೆಯ ಡಾಮರು ಕಿತ್ತು ಹೋಗಿ ಹೊಂಡಗಳು ಸೃಷ್ಟಿಯಾಗಿದ್ದು, ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು 9900567000 ನಂಬರ್‌ಗೆ ಕಳುಹಿಸಬಹುದು.

-ದಿನೇಶ್‌ ಇರಾ

ಚಿತ್ರಗಳು: ಸತೀಶ್‌ ಇರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next