ಧಾರವಾಡ: ವಿಶ್ವದ ಎಲ್ಲಾ ದುಡಿವ ಜನರು ಹೋರಾಟದ ಸ್ಫೂರ್ತಿಯಿಂದ ಆಚರಿಸುವ ದಿನವೇ ಮೇ ದಿನ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಸಂಚಾಲಕ ಗಂಗಾಧರ ಬಡಿಗೇರ ಹೇಳಿದರು.
ವಿವೇಕಾನಂದ ವೃತ್ತದಲ್ಲಿ 131ನೇ ಮೇ ದಿನಾಚರಣೆ ಅಂಗವಾಗಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ವತಿಯಿಂದ ವಿವೇಕಾನಂದ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಮಾಲೀಕ ವರ್ಗದ ವಿರುದ್ಧದ ಕದನದಲ್ಲಿ ಕಾರ್ಮಿಕ ವರ್ಗ ಗಳಿಸಿರುವ ಸ್ಮರಣೀಯ ಜಯಕ್ಕಾಗಿ ಆಚರಿಸುವ ಈ ದಿನವು ಶೋಷಣೆಯ ವಿರುದ್ಧದ ಹೋರಾಟದ ಸಂಕೇತ. ಸುಮಾರು ಒಂದೂವರೆ ಶತಮಾನದ ಹಿಂದೆ ಕೈಗಾರೀಕರಣದಲ್ಲಿ ಮುಂದುವರಿದಿದ್ದ ಅಮೆರಿಕ ಹಾಗೂ ಯೂರೋಪ್ ದೇಶಗಳಲ್ಲಿ ಕಾರ್ಮಿಕರನ್ನು, ತುಂಬು ಗರ್ಭಿಣಿಯರನ್ನು ಸಹ ದಿನಕ್ಕೆ 16-18 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದ ಸಂದರ್ಭ.
ಯಂತ್ರಗಳೊಂದಿಗೆ ಯಂತ್ರಗಳಂತೆ ದುಡಿದು ಕಾರ್ಮಿಕರು ಬೇಸತ್ತಿದ್ದರು. ದುಡಿಮೆಯ ಅವಧಿಯನ್ನು 8 ಗಂಟೆಗಳಿಗೆ ಸೀಮಿತಗೊಳಿಸಬೇಕೆಂದು ಎಲ್ಲೆಡೆ ಕಾರ್ಮಿಕರ ಆಂದೋಲನಗಳು ಬೆಳೆಯುತ್ತಿದ್ದವು ಎಂದರು.
ಮೇ 1ತ್ಯಾಗದ ದಿನ: 1886ರ ಮೇ 1ರಂದು ಅಮೆರಿಕದಲ್ಲಿ ಸುಮಾರು 13,000 ಕಾರ್ಖಾನೆಗಳಿಗೆ ಸೇರಿದ 3 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಬಿಳಿ ಬಾವುಟಗಳನ್ನು ಹಿಡಿದು 8 ಗಂಟೆಯ ದುಡಿಮೆಯ ದಿನದ ಬೇಡಿಕೆಗಾಗಿ ಬೀದಿಗಿಳಿದರು. ಕಾರ್ಮಿಕ ಚಳವಳಿಯ ಕೇಂದ್ರವಾಗಿದ್ದ ಚಿಕಾಗೋ ನಗರವೊಂದರಲ್ಲೇ 80,000ಕ್ಕೂ ಹೆಚ್ಚು ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ನಂತರ ಮೇ3 ರಂದು ಶಾಂತಿಯುತವಾಗಿ ಸಭೆ ಸೇರಿದ್ದ ಕಾರ್ಮಿಕರ ಮೇಲೆ ಪೊಲೀಸರು ದಾಳಿ ಮಾಡಿದರು. ಪೊಲೀಸ್ ದೌರ್ಜನ್ಯವನ್ನು ಪ್ರತಿಭಟಿಸಲು ಮೇ 4 ರಂದು ಬೃಹತ್ ಸಭೆ ಸೇರಿದ್ದಾಗಲೇ ಮಾರ್ಕೇಟ್ ದುರಂತ ಸಂಭವಿಸಿತು. ಬಿಳಿ ಬಾವುಟವು ಕಾರ್ಮಿಕರ ರಕ್ತದಲ್ಲಿ ತೋಯ್ದು ಕೆಂಪಾದವು.
ಅಂದಿನಿಂದ ಕಾರ್ಮಿಕರ ಬಾವುಟದ ಬಣ್ಣ ಕೆಂಪು. 1889ರಲ್ಲಿ ಅಂತಾರಾಷ್ಟ್ರೀಯ ಸಮಾಜವಾದಿ ಸಮ್ಮೇಳನವು ಮೇ1ಅನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲು ಕರೆ ನೀಡಿತು. ಹಾಗಾಗಿ 8 ಗಂಟೆಯ ದುಡಿಮೆಯ ದಿನ ಈ ರೀತಿ ತ್ಯಾಗ-ಬಲಿದಾನಗಳಿಂದ ಗಳಿಸಿದ ಹಕ್ಕು ಎಂದು ಕಾರ್ಮಿಕ ಮುಖಂಡ ಬಡಿಗೇರ ವ್ಯಾಖ್ಯಾನಿಸಿದರು.