Advertisement

ಅಸ್ತ್ರವಾಗಿ ಅಜರ್‌ ಬಳಕೆ 

12:30 AM Mar 04, 2019 | Team Udayavani |

ನವದೆಹಲಿ: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾದ ಜೈಶ್‌ ಎ ಮೊಹಮ್ಮದ್‌ ಉಗ್ರ ಮೌಲಾನಾ ಮಸೂದ್‌ ಅಜರ್‌ನನ್ನು ಈವರೆಗೆ ಪಾಕಿಸ್ತಾನವು ಭಾರತದ ವಿರುದ್ಧದ ತನ್ನ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು.

Advertisement

1994ರಲ್ಲಿ ಜಮ್ಮು ಕಾಶ್ಮೀರದಲ್ಲಿ ಸಿಕ್ಕಿ ಬೀಳುವುದಕ್ಕೂ ಮುನ್ನ ಅಫ್ಘಾನಿಸ್ತಾನ ಹಾಗೂ ಇತರ ದೇಶಗಳಲ್ಲಿ ಹರ್ಕತ್‌ ಉಲ್‌ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ. ಆದರೆ ಅಫ್ಘಾನಿಸ್ತಾನದಲ್ಲಿನ ಹೋರಾಟದಲ್ಲಿ ಗಾಯಗೊಂಡ ನಂತರ ಹೋರಾಟ ಕೈಬಿಟ್ಟು, ಧಾರ್ಮಿಕ ಬೋಧನೆಗೆ ಇಳಿದಿದ್ದ. ಈತ ಇಂಗ್ಲೆಂಡ್‌ ಹಾಗೂ ಯುರೋಪ್‌ ದೇಶಗಳಲ್ಲಿ ಧಾರ್ಮಿಕ ಬೋಧನೆ ಮಾಡುತ್ತಲೇ ಯುವಕರಲ್ಲಿ ಉಗ್ರವಾದದ ವಿಷ ಬೀಜವನ್ನೂ ಬಿತ್ತುತ್ತಿದ್ದ. ಆದರೆ 1994ರಲ್ಲಿ ಜಮ್ಮು ಕಾಶ್ಮೀರದಲ್ಲಿ ಹರ್ಕತ್‌ ಉಲ್‌ ಉಗ್ರ ಸಂಘಟನೆಗಳ ಮಧ್ಯೆ ಸಂಘರ್ಷ ಉಂಟಾದಾಗ ಅವರ ಮಧ್ಯೆ ಸಂಧಾನ ನಡೆಸಲು ಕಾಶ್ಮೀರಕ್ಕೆ ಆಗಮಿಸಿದ್ದ. ಈ ವೇಳೆ ಭಾರತೀಯ ಸೇನೆಗೆ ಸಿಕ್ಕಿಬಿದ್ದಿದ್ದ. ಆಗಲೇ ಈತನ ಭಾರತದ ವಿರುದ್ಧ ದ್ವೇಷ ಹುಟ್ಟಿಕೊಂಡಿತ್ತು.


ಕಂದಹಾರ್‌ ವಿಮಾನ ಅಪಹರಣ ಪ್ರಕರಣದಲ್ಲಿ ಬಿಡಿಸಿಕೊಂಡ ಈತ ಭಾರತದ ವಿರುದ್ಧದ ದಾಳಿಯನ್ನೇ ಗುರಿಯನ್ನಾಗಿಸಿಕೊಂಡಿದ್ದ. ಇದಕ್ಕೆ ಪಾಕಿಸ್ತಾನ ಸಂಪೂರ್ಣ ನೆರವು ನೀಡುತ್ತಿತ್ತು. ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಡೆಸಲು ಈತನಿಗೆ ಪಾಕಿಸ್ತಾನ ನಿರಂತರ ನೆರವು ನೀಡುತ್ತಿತ್ತು. ಪಾಕಿಸ್ತಾನದ ರಾಜಕಾರಣಿಗಳ ಜೊತೆಗೆ ಈತನಿಗೆ ನೇರ ಸಂಪರ್ಕವಿದೆ. ಅಷ್ಟೇ ಅಲ್ಲ, ಈತ ಧಾರ್ಮಿಕ ಮುಖಂಡನ ಸೋಗು ಹಾಕಿ, ವಿವಿಧ ದೇಶಗಳ ಮುಖಂಡರ ಜೊತೆಗೂ ಉತ್ತಮ ನಂಟು ಹೊಂದಿದ್ದಾನೆ. ಹೀಗಾಗಿಯೇ ಈತನ ವಿರುದ್ಧ ಕ್ರಮ ಕೈಗೊಳ್ಳಲು ಚೀನಾ ಎದುರಾಗುತ್ತಿರಲಿಲ್ಲ.

ಒಸಾಮಾನ ಫ್ರೆಂಡ್‌!: ಮಸೂದ್‌ ಅಜರ್‌ಗೂ ಅಲ್‌ ಖೈದಾ ಮುಖಂಡ ಒಸಾಮಾ ಬಿನ್‌ ಲಾಡೆನ್‌ಗೂ ಆತ್ಮೀಯತೆ ಇತ್ತು. ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ದಾಳಿ ನಡೆಸಿದ ನಂತರ ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ಅಫ್ಘಾನಿಸ್ತಾನದ ತೋರಾ ಬೋರಾದಲ್ಲಿ  ಇನ್ನೇನು ಸಿಕ್ಕಿಬೀಳಬೇಕು ಎಂಬ ಸನ್ನಿವೇಶವಿದ್ದಾಗ ಇದೇ ಮಸೂದ್‌ ಅಜರ್‌ ರಕ್ಷಣೆ ಮಾಡಿದ್ದ.

ಅಮೆರಿಕದ ಮೇಲೆ ಅಲ್‌ ಖೈದಾ ದಾಳಿ ನಡೆಸಿದ ನಂತರದಲ್ಲಿ ಕಾಶ್ಮೀರದ ವಿಧಾನಸಭೆ ಹಾಗೂ ಭಾರತದ ಸಂಸತ್‌ ಮೇಲೆ ಜೈಶ್‌ ಉಗ್ರರು ದಾಳಿ ನಡೆಸಿದ್ದರು. ಇದರಿಂದ ಯುದ್ಧದ ವಾತಾವರಣ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉಂಟಾಗಿತ್ತು. ಆಗ ಪಾಕಿಸ್ತಾನ ತನ್ನ ಪಡೆಯನ್ನು ತೋರಾ ಬೋರಾದಿಂದ ಭಾರತದ ಗಡಿಯ ಕಡೆಗೆ ಸಾಗಿಸಿತ್ತು. ಆಗ ಒಸಾಮಾ ಅಲ್ಲಿಂದ ಪರಾರಿಯಾಗಿದ್ದ. ಈ ಉದ್ದೇಶಕ್ಕೆಂದೇ ಭಾರತದ ಮೇಲೆ ದಾಳಿ ನಡೆಸಲಾಗಿತ್ತು ಎಂದು ಹೇಳಲಾಗಿದೆ.

ಹೆಡ್‌ಮಾಸ್ತರನ ಪುತ್ರ!
ಉಗ್ರ ಮಸೂದ್‌ ಅಜರ್‌ ಪಾಕಿಸ್ತಾನದ ಬಹಾವಲ್ಪುರದಲ್ಲಿ 1968 ಜುಲೈ 10 ರಂದು ಜನಿಸಿದ್ದ. 11 ಮಕ್ಕಳ ಪೈಕಿ ಈತ ಮೂರನೆಯವನು. ಅಚ್ಚರಿಯ ಸಂಗತಿಯೆಂದರೆ, ಮಸೂದ್‌ ಅಜರ್‌ನ ತಂದೆ ಸರ್ಕಾರಿ ಶಾಲೆಯಲ್ಲಿ ಹೆಡ್‌ಮಾಸ್ತರರಾಗಿದ್ದರು. ಅಷ್ಟೇ ಅಲ್ಲ, ದಿಯೋಬಾಂದ್‌ ಮಸೀದಿಯಲ್ಲಿ ಮೌಲ್ವಿ ಕೂಡ ಆಗಿದ್ದರು. ಜಾಮಿಯಾ ಉಲೂಮ್‌ ಇಸ್ಲಾಮಿಕ್‌ ಸ್ಕೂಲ್‌ನಲ್ಲಿ ಮಸೂದ್‌ ಅಜರ್‌ 8ನೇ ತರಗತಿಯವರೆಗೆ ಓದಿದ್ದ. ಈತ ಓದುತ್ತಿದ್ದ ಮದರಸಾ ಬಳಿಯೇ ಹರ್ಕತ್‌ ಉಲ್‌ ಉಗ್ರ ಸಂಘಟನೆಯ ಕೇಂದ್ರವಿತ್ತು. ಹೀಗಾಗಿ ಈತ ಉಗ್ರ ಸಂಘಟನೆಗೆ ಸೇರಿಕೊಂಡ.

Advertisement
Advertisement

Udayavani is now on Telegram. Click here to join our channel and stay updated with the latest news.

Next