ಕೆ.ಆರ್.ಪೇಟೆ: ಮನೆ ಚಿಕ್ಕದಾಗಿದ್ದರೂ ಮನಸ್ಸು ದೊಡ್ಡದಾಗಿರಬೇಕು ಎಂಬ ಮಾತಿನಂತೆ ಶಾಲೆ, ಶಾಲೆಯ ಆವರಣ ಚಿಕ್ಕದಾಗಿದ್ದರೂ ಸಹ ಮಕ್ಕಳಿಗೆ ಮಾತ್ರ ಆಧುನಿಕ ಶಿಕ್ಷಣ ನೀಡುವ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಅರಿವಿನ ಮೂಲಕ ಮತ್ತಿಘಟ್ಟದ ಸರ್ಕಾರಿ ಶಾಲೆ ಎಲ್ಲರಿಗೂ ಮಾದರಿಯಾಗಿದೆ.
ಮತ್ತಿಘಟ್ಟ ಶಾಲೆಗೆ ಎ.ಬಿ.ಮಹೇಶ್ ಮುಖ್ಯ ಶಿಕ್ಷಕರಾಗಿ ನೇಮಕವಾದ ದಿನವೇ ಇಲ್ಲಿನ ಮುಖ್ಯ ಶಿಕ್ಷಕರು ಎರಡು ಟೀಕ್ ಮರ ಸಸಿ ನೆಡುವ ಮೂಲಕ ಶಾಲೆಯನ್ನು ಹಸಿರೀಕರಣ ಮಾಡುವುದಕ್ಕೆ ಚಾಲನೆ ನೀಡಿದರು. ನಂತರ ಹತ್ತಾರು ವಿವಿಧ ಬಗೆಯ ಸಸಿ ನೆಡುವುದರ ಜೊತೆಗೆ ಮಕ್ಕಳಿಗೂ ಪರಿಸರ ಸಂರಕ್ಷಣೆ ಹೇಳಿಕೊಡುತ್ತಿದ್ದಾರೆ.
ವಾರಕ್ಕೆ ಒಂದುದಿನ ಹೆಚ್ಚುವರಿಯಾಗಿ ಬೆಳೆಯುವ ಸಸಿಗಳನ್ನು ಸಮವಾಗಿ ಕತ್ತರಿಸಿ ಸಸಿಗಳ ಬುಡ ಸ್ವಚ್ಛಮಾಡಿ ನೆಲಕ್ಕೆ ಉದುರುವ ಎಲೆಗಳನ್ನು ಬುಡಕ್ಕೆ ಹಾಕುವ ಮೂಲಕ ಅವುಗಳಿಂದಲೇ ಸಾವಯವ ಗೊಬ್ಬರ ತಯಾರು ಮಾಡುತ್ತಿದ್ದಾರೆ. ಅಲ್ಲದೇ, ಮಕ್ಕಳಿಗೂ ಸಸಿ ಬೆಳೆಸುವುದು ಮತ್ತು ಸಾವಯವ ಗೊಬ್ಬರ ತಯಾರು ಮಾಡುವ ಬಗ್ಗೆ ಶಾಲೆಯಲ್ಲಿ ಕಲಿಸಲಾಗುತ್ತಿದೆ.
ನಲಿಕಲಿ ಜೊತೆಗೆ ಆಧುನಿಕ ಶಿಕ್ಷಣ: ಸರ್ಕಾರಿ ಶಾಲೆ ಎಂದರೆ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂದು ಕೆಲವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲು ಮಾಡಿಸುವುದನ್ನು ಕಾಣುತ್ತಿದ್ದೇವೆ. ಆದರೆ, ಈ ಶಾಲೆಯಲ್ಲಿ ಮಕ್ಕಳಿಗೆ ಸರಳವಾಗಿ ನಲಿಕಲಿ ಪದ್ಧತಿಯಲ್ಲಿ ಪಾಠ ಕಲಿಸುವ ಜೊತೆಗೆ ಮುಖ್ಯ ಶಿಕ್ಷಕರ ಮನವಿ ಮೇರೆಗೆ ಇನ್ಫೋಸಿಸ್ ಅವರು ಕೊಡುಗೆಯಾಗಿ ನೀಡಿರುವ ಕಂಪ್ಯೂಟರ್‌ಗಳನ್ನು ಬಳಸಿಕೊಂಡು ಮಕ್ಕಳಿಗೆ ಆಧುನಿಕವಾಗಿ ಪಾಠವನ್ನು ಹೇಳಿಕೊಡುತ್ತಿದ್ದಾರೆ.
ನೀರು ಮರುಬಳಕೆ ಮತ್ತು ಸ್ವಚ್ಛತೆಗೆ ಆದ್ಯತೆ: ಶಾಲೆ ಹೊರಭಾಗದ ಆವರಣದ ತುಂಬೆಲ್ಲಾ ಮರಗಿಡಗಳು ಬೆಳೆದಿವೆ. ಎಲೆಗಳು ಉದುರು ವುದು ಸಾಮಾನ್ಯವಾಗಿದ್ದರೂ ಪ್ರತಿದಿನ ಶಾಲೆ ಆವರಣವನ್ನು ಸ್ವಚ್ಛಗೊಳಿಸುವುದರಿಂದ ಸುಂದರ ಮತ್ತು ಸ್ವಚ್ಛ ಪರಿಸರ ನಿರ್ಮಾಣ ವಾಗಿದೆ. ಇದರ ಜೊತೆಗೆ ಶಾಲಾ ಕೊಠಡಿ ಒಳಭಾಗದಲ್ಲಿಯೂ ಸ್ವಚ್ಛತೆ ಕಾಪಾಡಿಕೊಂಡಿ ದ್ದು ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸಿದ್ದಾರೆ. ಜೊತೆಗೆ ಮಕ್ಕಳು ಮಧ್ಯಾಹ್ನ ಬಿಸಿಯೂಟ ಮಾಡಿದ ನಂತರ ಕೈ ಮತ್ತು ತಟ್ಟೆಗಳನ್ನು ತೊಳೆದ ನೀರು ನೇರವಾಗಿ ಮರಗಳು ಮತ್ತು ಹೂವಿನ ಸಸಿಗಳ ಬೇರು ಸೇರುವಂತೆ ಮಾಡಲಾಗಿದೆ.
ಅವಧಿಗೂ ಮುನ್ನ ಶಾಲೆಗೆ ಹಾಜರು: ಮತ್ತಿಘಟ್ಟ ಗ್ರಾಮಸ್ಥರು ಹೇಳುವ ಪ್ರಕಾರ ಈ ಶಾಲೆಯ ಮುಖ್ಯ ಶಿಕ್ಷಕರು ಶಾಲಾ ಅವಧಿಗಿಂತ ಒಂದು ಗಂಟೆ ಮುಂಚಿತವಾಗಿ ಶಾಲೆಗೆ ಪ್ರತಿದಿನ ಬಂದು ಸಸಿಗಳಿಗೆ ನೀರು ಹಾಕುವ ಕೆಲಸ ಮಾಡುತ್ತಾರೆ. ಮತ್ತೂರ್ವ ಶಿಕ್ಷಕಿ ಎಚ್.ಎನ್.ಸುರೇಖಾ ಕೂಡಾ ಸಮಯಕ್ಕೆ ಸರಿಯಾಗಿ ಶಾಲೆಗೆ ಆಗಮಿಸಿ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಶಾಲೆಗೆ ಮತ್ತೂಂದು ವಿಶೇಷವಾಗಿದೆ.
•ಎಚ್.ಬಿ.ಮಂಜುನಾಥ