ಸಿನಿಮಾದ ಗಳಿಕೆಯಲ್ಲಿ ಬರುವ ಹಣವನ್ನು ಅದರ ನಿರ್ಮಾಪಕರು ತಮ್ಮ ಮತ್ತೂಂದು ಸಿನಿಮಾಕ್ಕೆ ಬಂಡವಾಳ ಮಾಡಿಕೊಳ್ಳುವುದು ಚಿತ್ರರಂಗದಲ್ಲಿ ಮಾಮೂಲಿ. ಆದರೆ ಇಲ್ಲೊಂದು ಚಿತ್ರತಂಡ, ತಮ್ಮ ಸಿನಿಮಾದ ಲಾಭದಲ್ಲಿ ಬರುವ ಶೇ 25ರಷ್ಟು ಹಣವನ್ನು ಕನ್ನಡ ಚಿತ್ರರಂಗದಲ್ಲಿ ಆರ್ಥಿಕವಾಗಿ ಅಶಕ್ತರಾಗಿರುವ ಹಿರಿಯ ಕಲಾವಿದರ ಕಲ್ಯಾಣಕ್ಕಾಗಿ ಬಳಸಿಕೊಳ್ಳುತ್ತಿದೆ. ಆ ಮೂಲಕ ಚಿತ್ರರಂಗದಲ್ಲಿ ಒಂದು ಮಾದರಿ ಎನಿಸುವ ಕಾರ್ಯಕ್ಕೆ ಮುಂದಾಗಿದೆ.
ಹೌದು, ಇದೇ ಜ. 19ರಂದು ಬಿಡುಗಡೆಯಾಗಿ ತೆರೆಗೆ ಬರುತ್ತಿರುವ “ಮತ್ತೆ ಮತ್ತೆ’ ಸಿನಿಮಾ ಇಂಥದ್ದೊಂದು ಅಪರೂಪದ ಮಾದರಿ ಕೆಲಸ ಮಾಡುತ್ತಿರುವ ಸಿನಿಮಾ.
ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ “ಮತ್ತೆ ಮತ್ತೆ’ ಚಿತ್ರತಂಡ, ತಮ್ಮ ಸಿನಿಮಾದ ಜೊತೆಗೆ ಇಂಥದ್ದೊಂದು ಸಮಾಜಮುಖೀ ಕಾರ್ಯದ ಉದ್ದೇಶವನ್ನೂ ತೆರೆದಿಟ್ಟಿತು.
‘ನೈರುತ್ಯ ಆರ್ಟ್ ಮೀಡಿಯಾ’ ಬ್ಯಾನರ್‌ನಲ್ಲಿ ಡಾ. ಅರುಣ್ ಹೊಸಕೊಪ್ಪ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ “ಮತ್ತೆ ಮತ್ತೆ’ ಸಿನಿಮಾದಲ್ಲಿ ಹಿರಿಯನಟ ಎಂ. ಎಸ್. ಉಮೇಶ್, ಡಿಂಗ್ರಿ ನಾಗರಾಜ್, ಮುಖ್ಯಮಂತ್ರಿ ಚಂದ್ರು, ಹೊನ್ನವಳ್ಳಿ ಕೃಷ್ಣ, ತುಮಕೂರು ಮೋಹನ್, ಶ್ರೀನಿವಾಸ ಗೌಡ, ಪ್ರಕಾಶ್ ತುಮ್ಮಿನಾಡ್, ವೈಷ್ಣವಿ ಮೆನನ್, ಸುಮಾ ರಾವ್, ಕುಳ್ಳ ಅನಂತ್, ರತ್ನಮಾಲಾ, ಅಂಜನಪ್ಪ, ಹೀಗೆ ಅನೇಕ ಹಿರಿಯ ಮತ್ತು ಕಿರಿಯ ಕಲಾವಿದರ ದಂಡೇ ಇದೆ. ನಟಿ ಸಂಜನಾ ಗಲ್ರಾನಿ ಕೂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
“ಮತ್ತೆ ಮತ್ತೆ’ ಸಿನಿಮಾದ ಬಗ್ಗೆ ಮಾತನಾಡಿದ ಹಿರಿಯನಟ ಎಂ. ಎಸ್. ಉಮೇಶ್, “ಇದೊಂದು ಸಂಪೂರ್ಣ ಕಾಮಿಡಿ ಸಿನಿಮಾ. ಇಲ್ಲಿ ಕಥೆಯೇ ಹೀರೋ. ಇದರಲ್ಲಿ ನಾನು ಹೆಣ್ಣುಮಕ್ಕಳನ್ನು ಕಂಡರೆ ಜೊಲ್ಲು ಸುರಿಸುವವಂಥ ಮನೆ ಮಾಲೀಕನ ಪಾತ್ರ ಮಾಡಿದ್ದೇನೆ. ಅಣ್ಣಾವ್ರನ್ನು ನೆನಪಿಸುವಂಥ ಹಾಡಿನಲ್ಲಿ ಸಂಜನಾ ಅವರ ಜೊತೆ ಡ್ರೀಮ್ ಸಾಂಗ್ ಮಾಡಿದ್ದೇನೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
ನಿರ್ಮಾಪಕ ಕಂ ನಿರ್ದೇಶಕ ಡಾ. ಅರುಣ್ ಹೊಸಕೊಪ್ಪ ಮಾತನಾಡಿ, “ಜರ್ನಲಿಸಂ ಮುಗಿಸಿದ ಐವರು ವಿದ್ಯಾರ್ಥಿಗಳು ಸಿನಿಮಾವೊಂದನ್ನು ಮಾಡಿ, ಅದರಿಂದ ಬಂದ ಹಣದಲ್ಲಿ ಒಂದು ಚಾನಲ್ ಪ್ರಾರಂಭಿಸಲು ಯೋಚಿಸುತ್ತಾರೆ. ಆ ಹಂತದಲ್ಲಿ ಏನೆಲ್ಲ ನಡೆಯುತ್ತದೆ, ಕೊನೆಗೂ ಈ ಹುಡುಗರು ಅಂದುಕೊಂಡಂತೆ ಸಿನಿಮಾ ಮಾಡಿ ಮುಗಿಸಿದರೇ, ಇಲ್ಲವೇ ಎನ್ನುವುದೇ ಸಿನಿಮಾದ ಕಥೆಯ ಎಳೆ. ಸಿನಿಮಾ ತುಂಬ ಚೆನ್ನಾಗಿ ಬಂದಿದ್ದು, ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್, ನಟರಾದ ಕೋಟೆ ಪ್ರಭಾಕರ್, ಆರ್.ಜೆ. ವಿಕ್ಕಿ, ಸ್ವಾತಿ, ನೃತ್ಯ ನಿರ್ದೇಶಕ ಅನಿ ಮೊದಲಾದವರು “ಮತ್ತೆ ಮತ್ತೆ’ ಸಿನಿಮಾದ ಬಗ್ಗೆ ಒಂದಷ್ಟು ಭರವಸೆಯ ಮಾತುಗಳನ್ನಾಡಿದರು