Advertisement

ಕಬ್ಬಿನಾಲೆಯ ಪ್ರಕೃತಿ ಸೌಂದರ್ಯಯಕ್ಕೆ ಮತ್ತೊಂದು ಹೆಸರೇ ‘ಮತ್ತಾವು ಜಲಪಾತ’…

04:45 PM Dec 03, 2022 | ಸುಧೀರ್ |

ದಟ್ಟ ಕಾಡು ಕಾಡಿನ ನಡುವೊಂದು ಕಡಿದಾದ ದಾರಿ ಹೀಗೆ ದಾರಿಯಲ್ಲಿ ಸಾಗುತ್ತಾ ಹೋದಂತೆ ಭೋರ್ಗರೆಯುವ ನೀರಿನ ಸದ್ದು ಕಿವಿಗೆ ಕೇಳುತ್ತದೆ, ಇದೆ ಸದ್ದನ್ನು ಆಲಿಸುತ್ತಾ ಹೋದರೆ ಕಾಣ ಸಿಗುವುದೇ ಬಂಡೆಗಳನ್ನು ಸೀಳಿಕೊಂಡು ಧುಮ್ಮಿಕ್ಕುವ ಕಬ್ಬಿನಾಲೆ ಜಲಪಾತ ಇದಕ್ಕೆ ಮತ್ತಾವು ಜಲಪಾತ ಎಂದೂ ಕರೆಯುತ್ತಾರೆ. ಇದು ಇರುವುದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದಲ್ಲಿ.

Advertisement

ನಮ್ಮ ಊರಿನ ಸುತ್ತ ಮುತ್ತ ನಮಗೆ ಗೊತ್ತಿರದಂತೆ ಅದೆಷ್ಟೋ ವರ್ಷಗಳಿಂದ ಜಲಪಾತಗಳು ನಿಗೂಢವಾಗಿ ಹರಿಯುತ್ತಿದ್ದು ಯುವ ಜನರ ಮೊಬೈಲ್ ಬಳಕೆಯಿಂದಾಗಿ ಇದೀಗ ಒಂದೊಂದೇ ಬೆಳಕಿಗೆ ಬರುತ್ತಿವೆ.

ಮುನಿಯಾಲು ನಿಂದ ಕಬ್ಬಿನಾಲೆ ಮಾರ್ಗವಾಗಿ ಸಂಚರಿಸಿದರೆ ರಸ್ತೆ ಬದಿಯಲ್ಲೇ ಮತ್ತಾವು ಜಲಪಾತ ಭೋರ್ಗರೆಯುತ್ತಿರುವ ಸದ್ದು ಕೇಳುತ್ತದೆ. ನೀವು ಆಗುಂಬೆ ಮಾರ್ಗವಾಗಿ ಬರುವುದಾದರೆ ಸೀತಾನದಿಯಿಂದ ಕಾರ್ಕಳ ಮಾರ್ಗವಾಗಿ ಸಂಚರಿಸಿ ಬಚ್ಚಪ್ಪು ಜಂಕ್ಷನ್ ನಿಂದ ಎಡಕ್ಕೆ ಕಬ್ಬಿನಾಲೆ ಮಾರ್ಗ ಮೂಲಕ ಬಂದರೆ ಕಬ್ಬಿನಾಲೆ ಸೇತುವೆ ಬಳಿಯೇ ಈ ಜಲಪಾತ ಕಾಣಸಿಗುತ್ತದೆ.

ಅಂದ ಹಾಗೆ ಇಲ್ಲಿ ಯಾವುದೇ ಸೂಚನಾ ಫಲಕ ಇಲ್ಲ, ಕಡಿದಾದ ಮಾರ್ಗದ ಬದಿಯಲ್ಲೇ ವಾಹನಗಳನ್ನು ಇಡಬೇಕು ಅಲ್ಲದೆ ಜಲಪಾತಕ್ಕೆ ಹೋಗಲು ಸಣ್ಣ ಕಾಲುದಾರಿಯಿದೆ, ಅದರ ಮೂಲಕ ಇಳಿದು ಹೋದರೆ ಅಲ್ಲೇ ಬಂಡೆ ಕಲ್ಲುಗಳನ್ನು ಸೀಳಿಕೊಂಡು ಮೈದುಂಬಿ ಹರಿಯುತ್ತದೆ ಜಲಪಾತ, ಇದರ ಸೌಂದರ್ಯ ವರ್ಣಿಸಲು ಅಸಾಧ್ಯ ಅದರ ಸೌಂದರ್ಯ ಸವಿಯಲು ಮಳೆಗಾಲದ ಸಮಯದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಬೇಕು. ಬಂಡೆಯಿಂದ ಬಂಡೆಗೆ ಇಳಿಜಾರಿನ ಮೂಲಕ ಹರಿಯುವ ಜಲಪಾತ ನೋಡುವುದೇ ಒಂದು ಚೆಂದ.

Advertisement

ಎಚ್ಚರ ಅಗತ್ಯ:
ಪ್ರವಾಸಿಗರು ಎಲ್ಲೇ ಹೋದರು ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯ ವಿಚಾರ ಆದರೆ ಕೆಲವೊಮ್ಮೆ ಈ ಸೆಲ್ಫಿ ಜೀವಕ್ಕೆ ಕುತ್ತು ತರುತ್ತದೆ. ಜಲಪಾತ, ಬಂಡೆಕಲ್ಲು, ಗಿರಿ ಶಿಖರ ಹೀಗೆ ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ತುಂಬಾ ಅಪಾಯ ಇಂಥ ಸ್ಥಳಗಳಲ್ಲಿ ನಾವು ಎಚ್ಚರದಿಂದಿರುವುದು ಅತೀ ಅಗತ್ಯ.

ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಿರಿ:
ಅಂದಹಾಗೆ ಈ ಜಲಪಾತಕ್ಕೆ ತೆರಳುವ ಮೊದಲು ಅರಣ್ಯ ಇಲಾಖೆಯ ಅಧಿಕಾರಿಗಳ ಅನುಮತಿ ಪಡೆಯಿರಿ, ಯಾಕೆಂದರೆ ಬಂಡೆ ಕಲ್ಲುಗಳಿಂದ ಆವರಿಸಿರುವ ಜಲಪಾತವಾಗಿರುವುದರಿಂದ ಪ್ರವಾಸಿಗರು ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ, ಮಳೆಗಾಲದಲ್ಲಿ ಬಂಡೆ ಕಲ್ಲುಗಳು ಹೆಚ್ಚಾಗಿ ಪಾಚಿಯಿಂದ ಆವರಿಸಿದ್ದು ಜಾರುತ್ತಿರುತ್ತದೆ, ಯುವಕರು ಸೆಲ್ಫಿ, ಫೋಟೋ ಶೂಟ್ ಅಂತ. ಯಾಮಾರಿದರೆ ಅಪಾಯ ಎದುರಾಗಬಹುದು ನಮ್ಮ ಜಾಗರೂಕತೆ ನಾವೇ ಮಾಡಬೇಕು ಅಷ್ಟೇ…

ನಿರ್ವಹಣೆ ಇಲ್ಲ :
ಕರಾವಳಿಯಲ್ಲಿ ಹಲವಾರು ಪ್ರವಾಸಿ ತಾಣಗಳಿವೆ ಅವುಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮಕ್ಕೆ ಯಾವುದೇ ಅಡ್ಡಿ ಇಲ್ಲ, ಹಾಗೆಯೇ ಇಲ್ಲಿ ಯಾವುದೇ ಸಿಬ್ಬಂದಿಗಳನ್ನು ನೇಮಕ ಮಾಡಲಿಲ್ಲ ಹಾಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ತಾವು ತಂದ ತಿಂಡಿ ತಿನಿಸುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ, ಅದಲ್ಲದೆ ಕೆಲವರು ಇಲ್ಲಿಯೇ ಮದ್ಯ ಸೇವಿಸಿ ಮದ್ಯದ ಬಾಟಲಿಗಳನ್ನು ಬಂಡೆ ಕಲ್ಲಿನ ಮೇಲೆ ಎಸೆದು ಹೋಗುತ್ತಾರೆ, ಇದು ತುಂಬಾ ಅಪಾಯಕಾರಿ. ಹಾಗಾಗಿ ಪ್ರವಾಸಿಗರು ತಾವು ತಂದ ತಿಂಡಿ ತಿನಿಸುಗಳನ್ನು ತಾವೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಇದರಿಂದ ಪರಿಸರದ ಮೇಲೆ ಯಾವುದೇ ಪರಿಣಾಮ ಬೀರದ ಹಾಗೆ ನಡೆದುಕೊಳ್ಳುವುದು ಪ್ರತಿಯೊಬ್ಬ ಪ್ರವಾಸಿಗನ ಆದ್ಯ ಕರ್ತವ್ಯ.

ಕಬ್ಬಿನಾಲೆ ಸುತ್ತಮುತ್ತ ಹಲವಾರು ಪ್ರವಾಸಿ ತಾಣಗಳಿವೆ ಪುರಾತನ ದೇವಾಲಯ, ಬಸದಿ, ಜಲಪಾತ ಎಲ್ಲವೂ ಇವೆ, ವೀಕೆಂಡ್ ನಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

*ಸುಧೀರ್ ಎ. ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next