Advertisement

ಮಾತೃಪೂರ್ಣ ಯೋಜನೆ: ಕುಸಿದ ಫ‌ಲಾನುಭವಿಗಳ ಸಂಖ್ಯೆ

01:00 PM Dec 09, 2017 | |

ಉಡುಪಿ: ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಗೆ 15,000 ಗರ್ಭಿಣಿ ಹಾಗೂ ಬಾಣಂತಿಯರನ್ನು ಗುರುತಿಸಲಾಗಿದೆ. ಆದರೆ ಅಕ್ಟೋಬರ್‌ ತಿಂಗಳಲ್ಲಿ ಕೇವಲ 890 ಗರ್ಭಿಣಿಯರು ಮತ್ತು 658 ಬಾಣಂತಿಯರು ಮಾತೃ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಈ ಹಿಂದೆ ಇದ್ದ ಯೋಜನೆಯಲ್ಲಿ ತಿಂಗಳಿಗೆ 11,000 ಮಂದಿ ಫ‌ಲಾನುಭವಿಗಳು ಪ್ರಯೋಜನ ಗಳಿಸುತ್ತಿದ್ದರು. ಮಾತೃಪೂರ್ಣ ಯೋಜನೆಯ ಫ‌ಲಾನುಭವಿಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಕುಸಿದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

 ಶುಕ್ರವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಅವರು, ತನ್ನ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ, ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿಯ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್‌ ಅವರಿಂದ ಮಾಹಿತಿ ಪಡೆದು ಸಭೆಗೆ ತಿಳಿಸಿದರು. 

ಒಟ್ಟು 15,000 ಮಂದಿಯ ಫ‌ಲಾನುಭವಿಗಳ ಪೈಕಿ 7,500 ಗರ್ಭಿಣಿಯರು ಮತ್ತು 7,500 ಬಾಣಂತಿಯರಿದ್ದಾರೆ. ಜಿಲ್ಲೆಯ ಭೌಗೋಳಿಕ ವ್ಯವಸ್ಥೆ ಹಾಗೂ ಜನರ ಮನೋಭಾವ ಅರಿಯದೆ ಈ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಅನೇಕ ಮಂದಿ ಸೌಲಭ್ಯ ವಂಚಿತರಾಗಿದ್ದಾರೆ. ಯೋಜನೆ ಶೇ.10ರಷ್ಟು ಮಾತ್ರ ಯಶಸ್ವಿಯಾಗಿದೆ. ನವೆಂಬರ್‌ ತಿಂಗಳಲ್ಲಿ 1,642 ಗರ್ಭಿಣಿಯರು ಮತ್ತು 1,393 ಬಾಣಂತಿಯರು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆ ಬಯಲು ಸೀಮೆಯ ಜಿಲ್ಲೆಗಳಿಗೆ ಮಾತ್ರ ಪೂರಕವಾಗಿದೆ ಎಂದರು.

ನಗದು ರಹಿತ ವಹಿವಾಟಿಗೆ ಉತ್ತೇಜನ ಜಿಲ್ಲೆಯಲ್ಲಿ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವುದಕ್ಕಾಗಿ 9 ಬ್ಯಾಂಕ್‌ಗಳು ತಲಾ 10 ಗ್ರಾಮಗಳನ್ನು ದತ್ತು ಪಡೆದಿವೆ. ಡಿ.20ರ ಒಳಗೆ ಈ ಕೆಲಸ ಪೂರ್ಣಗೊಳಿಸಬೇಕು. ದತ್ತು ಪಡೆದ ಗ್ರಾಮಗಳಲ್ಲಿ ಡಿಜಿಟಲ್‌ ವ್ಯವಹಾರ ನಿರ್ವಹಿಸಲು ಅಸಕ್ತಿ ವಹಿಸದ ಬ್ಯಾಂಕ್‌ಗಳಿಗೆ ನೀಡಿರುವ ಗ್ರಾಮಗಳನ್ನು ಸಿಂಡಿಕೇಟ್‌ ಬ್ಯಾಂಕ್‌ ದತ್ತು ಸ್ವೀಕರಿಸುವಂತೆ ಅವರು ಸೂಚಿಸಿದರು. ನಗದು ರಹಿತ ವ್ಯವಹಾರ ನಡೆಸಲು ಹೊಸ ಅರ್ಜಿ ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಫ್ರಾನ್ಸಿಸ್‌ ಬೋರ್ಗಿಯಾ ತಿಳಿಸಿದರು.

ಕೇಂದ್ರದ ರಸ್ತೆ ಕಾಮಗಾರಿಯಡಿ ತೀರ್ಥಹಳ್ಳಿ-ಕಮರಳ್ಳಿ ರಸ್ತೆ ಕಾಮಗಾರಿಗೆ 110 ಕೋ. ರೂ. ಮೊತ್ತದ ಡಿಪಿಆರ್‌ ತಯಾರಾಗಿದೆ. ಮಲ್ಪೆ-ಪರ್ಕಳ ರಸ್ತೆ ಕಾಮಗಾರಿಗೆ 110 ಕೋ. ರೂ. ಮೊತ್ತದ ಡಿಪಿಆರ್‌ ರೂಪುಗೊಂಡಿದೆ ಎಂದು ರಾ. ಹೆ. ಪ್ರಾಧಿಕಾರದ ಎಂಜಿನಿಯರ್‌ ಮಾಹಿತಿ ನೀಡಿದರು. ಕೇಂದ್ರ ರಸ್ತೆ ಕಾಮಗಾರಿ ನಡೆಯುವಲ್ಲಿ ಸೂಕ್ತ ವಿವರಣಾ ಫ‌ಲಕ ಅಳವಡಿಸಬೇಕು ಎಂದು ಶೋಭಾ ಸೂಚಿಸಿದರು. 

Advertisement

ಪೊಲೀಸ್‌ ನಿಯೋಜನೆಗೆ  ಮನವಿ: ರಸ್ತೆ ಕಾಮಗಾರಿ ನಡೆಸುವ ಕೆಲವೆಡೆ ಸುರಕ್ಷೆಗಾಗಿ ಪೊಲೀಸ್‌ ನಿಯೋಜನೆ ಅಗತ್ಯವಿದೆ ಎಂದು ಹೆದ್ದಾರಿ ಅಧಿಕಾರಿಗಳು ತಿಳಿಸಿದರು. ನಿರ್ದಿಷ್ಟ ದಿನಾಂಕ ಮತ್ತುಎಲ್ಲಿ ರಕ್ಷಣೆ ಅಗತ್ಯವಿದೆ ಎಂದು ಲಿಖೀತ ಮನವಿ ನೀಡಿದರೆ ಪೊಲೀಸ್‌ ರಕ್ಷಣೆ ಒದಗಿಸಲಾಗುವುದು.ಹೆದ್ದಾರಿಯ ಡಿವೈಡರ್‌ಗಳ ಮೇಲೆ ಬೆಳೆದಿರುವ ಪೊದೆಗಳನ್ನು ಕತ್ತರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅಧಿಕಾರಿಗಳಿಗೆ ಸೂಚಿಸಿದರು. ವಸತಿ ಯೋಜನೆ ಪೂರ್ಣಗೊಳಿಸಿ: ಜಿಲ್ಲೆಯಲ್ಲಿ 13,626 ಮಂದಿ ನಿವೇಶನ ರಹಿತರಿದ್ದಾರೆ. 8,872 ಮಂದಿ ನಿವೇಶನವಿದ್ದೂ ವಸತಿ ರಹಿತ ರಾಗಿದ್ದಾರೆ. ವಸತಿ ಯೋಜನೆಯ ಗುರಿಯನ್ನು ಪೂರ್ಣಗೊಳಿಸಬೇಕು ಎಂದು ಸಂಸದೆ ಶೋಭಾ ಹೇಳಿದರು.

ಹೊಸ ರೇಷನ್‌ ಕಾರ್ಡ್‌ಗಾಗಿ  8,112 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 6,932 ಕಾರ್ಡ್‌ಗಳು ಪೂರ್ಣಗೊಂಡು, ಅಂಚೆ ಮೂಲಕ ಫ‌ಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಉಳಿದ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು  ಎಂದು ಅಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಸಿಇಒ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.

2018 ಮಾರ್ಚ್‌ಗೆ ಚತುಷ್ಪಥ ಪೂರ್ಣ
ಸುರತ್ಕಲ್‌ನಿಂದ ಕುಂದಾಪುರದವರೆಗಿನ 90 ಕಿ.ಮೀ. ಚತುಷ್ಪಥ ಹೆದ್ದಾರಿಯಲ್ಲಿ ಈಗಾಗಲೇ 82 ಕಿ.ಮೀ.  ಮಗಾರಿಪೂರ್ಣಗೊಂಡಿದೆ. ಉಳಿದ  8 ಕಿ.ಮೀ. ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣ ಗೊಳಿಸಲಾಗುವುದು. ಹೆದ್ದಾರಿಯ ಇಕ್ಕೆಲಗಳಲ್ಲಿ ಸರ್ವೀಸ್‌ ರಸ್ತೆ ನಿರ್ಮಿಸಲಾಗುತ್ತಿದೆ. ಕೆಲವೆಡೆಗಳಲ್ಲಿ ಸಾರ್ವಜನಿಕರಿಂದ ಬಂದ ಮನವಿ ಪರಿಗಣಿಸಿ ಸರ್ವೀಸ್‌ ರಸ್ತೆ ರಚಿಸಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿರುವ ಎಲ್ಲ ಫ್ಲೈಓವರ್‌ಗಳನ್ನು ಇದೇ ಅವಧಿಯಲ್ಲಿ ಪೂರ್ಣಗೊಳಿಸ ಲಾಗುವುದು ಎಂದು ರಾ. ಹೆ. ಯೋಜನಾ ನಿರ್ದೇಶಕ ವಿಜಯ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next