Advertisement

ವೈವಾಹಿಕ ಪ್ರಕರಣ ವರ್ಷದೊಳಗೆ ಇತ್ಯರ್ಥಪಡಿಸಿ: ಹೈಕೋರ್ಟ್‌

09:19 PM Jul 27, 2023 | Team Udayavani |

ಬೆಂಗಳೂರು: ವಿವಾಹ ವಿಚ್ಛೇದನ ಸೇರಿ ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬ ಮಾಡಿದರೆ ಎರಡೂ ಕುಟುಂಬಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ವೈವಾಹಿಕ ಪ್ರಕರಣಗಳನ್ನು ಗರಿಷ್ಠ ಒಂದು ವರ್ಷದ ಮಿತಿಯಲ್ಲಿ ಇತ್ಯರ್ಥಪಡಿಸಬೇಕೆಂದು ಆದೇಶಿಸಿದೆ.

Advertisement

ತನ್ನ ವಿವಾಹ ವಿಚ್ಛೇದನ ಅರ್ಜಿಯನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಎನ್‌. ರಾಜೀವ್‌ ಎಂಬುವರು ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, “ಮನುಷ್ಯ ಜೀವನದ ಅಲ್ಪಾವಧಿಯನ್ನು ಗಮನದಲ್ಲಿಟ್ಟುಕೊಂಡು ವೈವಾಹಿಕ ಪ್ರಕರಣಗಳ ವಿಲೇವಾರಿಯನ್ನು ಯುದೊœàಪಾದಿಯಲ್ಲಿ ಕೈಗೊಳ್ಳಬೇಕಿದೆ ಎಂದು ಹೇಳಿದೆ.

“ಲೈಫ್ ಈಸ್‌ ಟೂ ಶಾರ್ಟ್‌ ಟು ಬಿ ಲಿಟ್ಲ’ (ಬದುಕು ತೀರಾ ಚಿಕ್ಕದು) ಎಂಬ ಆಂಗ್ಲ ಇತಿಹಾಸಕಾರರೊಬ್ಬರ ಹೇಳಿಕೆಯನ್ನು ಆದೇಶದಲ್ಲಿ ಉಲ್ಲೇಖೀಸಿರುವ ನ್ಯಾಯಮೂರ್ತಿಗಳು, ಮದುವೆಯ ವಿಸರ್ಜನೆ ಅಥವಾ ಅನೂರ್ಜಿತತೆ ಬಯಸುವ ವೈವಾಹಿಕ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಗರಿಷ್ಠ ಒಂದು ವರ್ಷದ ಮಿತಿಯೊಳಗೆ ವಿಲೇವಾರಿಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಕೌಟುಂಬಿಕ ಅಥವಾ ವಿಚಾರಣಾ ನ್ಯಾಯಾಲಯಗಳು ಮಾಡಬೇಕೆಂದು ಆದೇಶಿಸಿದ್ದಾರೆ.

ವೈವಾಹಿಕ ಪ್ರಕರಣಗಳಲ್ಲಿ ತ್ವರಿತ ತೀರ್ಪು ನೀಡಿದ್ದಲ್ಲಿ ಇಬ್ಬರೂ ತಮ್ಮ ಜೀವನವನ್ನು ಪುನರ್‌ ರೂಪಿಸಿಕೊಳ್ಳಬಹುದು. “ಲೈಫ್ ಈಸ್‌ ಲಾಸ್ಟ್‌ ಇನ್‌ ಲಿವಿಂಗ್‌’ (ಜೀವನ ಕಳೆಯುವುದರಲ್ಲಿ ಬದುಕುವುದನ್ನು ಮರೆತು ಬಿಟ್ಟಿದ್ದೇವೆ) ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದು ಮಾರ್ಮಿಕವಾಗಿ ಹೇಳಿರುವ ನ್ಯಾಯಪೀಠ ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾದರೆ ಇಬ್ಬರ ಮೇಲೂ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಸೂಕ್ಷ್ಮವಾಗಿ ಹೇಳಿದೆ.

ಆದ್ದರಿಂದ ಏಳು ವರ್ಷಗಳ ಹಳೆಯದಾದ ರಾಜೀವ್‌ ಅವರ ಪ್ರಕರಣವನ್ನು ಮೂರು ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ಸಂಬಂಧಿಸಿದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಿಗೆ ಮನವಿ ಮಾಡಿರುವ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ, ಇಂತಹದ್ದೇ ಪ್ರಕರಣಗಳನ್ನು ಎದುರಿಸುತ್ತಿರುವವರು ತಮ್ಮ ಅರ್ಜಿಗಳ ತ್ವರಿತ ವಿಲೇವಾರಿಗೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯಾಲಯದ ಕದ ತಟ್ಟುವ ಪ್ರಮೇಯ ಉದ್ಭವಿಸಬಾರದು. ಆದ್ದರಿಂದ ಈ ಆದೇಶವನ್ನು ಸಂಬಂಧಪಟ್ಟ ಎಲ್ಲರಿಗೂ ರವಾನಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.

Advertisement

ಪತ್ನಿಯೊಂದಿಗಿನ ವಿವಾಹ ಬಂಧವನ್ನು ಅನೂರ್ಜಿತಗೊಳಿಸಬೇಕು ಎಂದು ರಾಜೀವ್‌ 2016ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತ್ವರಿತ ವಿಲೇವಾರಿ ಆಗದ ಕಾರಣ, ತಮ್ಮ ಅರ್ಜಿಯನ್ನು ಮೂರು ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ರಾಜೀವ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತ್ವರಿತ ನ್ಯಾಯದಾನದ ಹಕ್ಕನ್ನು ಅನುಚ್ಛೇದ 21ರಡಿ ಸಾಂವಿಧಾನಿಕ ಖಾತರಿ ಎಂದು ಸುಪ್ರೀಂಕೋರ್ಟ್‌ ಗುರುತಿಸಿದೆ. ಆದ್ದರಿಂದ ತನ್ನ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next