Advertisement

ಮಗ ತಪ್ಪು ದಾರಿ ಹಿಡಿಯುತ್ತಾನೆ ಎಂದುಕೊಂಡಿರಲಿಲ್ಲ: ಶಂಕಿತ ಉಗ್ರನ ತಂದೆ

09:57 PM Nov 21, 2022 | Team Udayavani |

ತೀರ್ಥಹಳ್ಳಿ: ನನ್ನ ಮಗನ ಸಂಪರ್ಕವಿಲ್ಲದೆ ಹಲವು ವರ್ಷಗಳೇ ಕಳೆದಿವೆ ಎಂದು ಶಂಕಿತ ಉಗ್ರ ಮತೀನ್‌ ಅವರ ತಂದೆ ಮಂಜೂರ್‌ ಅಹ್ಮದ್‌ ತಿಳಿಸಿದ್ದಾರೆ.

Advertisement

ಪಟ್ಟಣದ ಸೊಪ್ಪುಗುಡ್ಡೆಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತೀನ್‌ ಬೆಂಗಳೂರಿನ ಘಟನೆಯ ಬಳಿಕ ನಮ್ಮ ಸಂಪರ್ಕದಲ್ಲಿಲ್ಲ. ನನ್ನ ಮಗ ಹೀಗೆ ಆಗುತ್ತಾನೆ ಅಂತ ನಮಗೇ ಗೊತ್ತಿರಲಿಲ್ಲ. ಅವನು ಚೆನ್ನಾಗಿ ಇರಲಿ ಎಂದು ಓದಿಸಿದ್ದೆವು. ಬೆಂಗಳೂರಿನಲ್ಲಿ ಬಿಇ ಓದುತ್ತಿದ್ದ. ಬಳಿಕ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಈಗ ತಂತ್ರಜ್ಞಾನ ಚೆನ್ನಾಗಿದೆ. ಮೊಬೈಲ್‌ನಲ್ಲಿ ಯಾರು ಏನು ಮಾಡುತ್ತಿರುತ್ತಾರೆ  ಎಂದು ಗೊತ್ತಾಗುವುದಿಲ್ಲ. ಸೋಮವಾರ ಬೆಳಗ್ಗೆ ಮಂಗಳೂರು ಘಟನೆ ಕುರಿತು ಪೊಲೀಸರು ಬಂದು ಮನೆಯಲ್ಲಿ ತನಿಖೆ ನಡೆಸಿದ್ದಾರೆ. ಅವರಿಗೆ ಏನು ಬೇಕೋ ಅದನ್ನು ಪರಿಶೀಲಿಸಿಕೊಂಡು ಹೋಗಿದ್ದಾರೆ.  ಮತೀನ್‌ಗೆ ನಾನು ಹೇಳುವುದಿಷ್ಟೆ – “ಎಲ್ಲೇ ಇದ್ದರೂ ಬಂದು ಬಿಡು. ಒಳ್ಳೆಯ ದಾರಿಯಲ್ಲಿ ಜೀವನ ನಡೆಸು’ ಎಂದರು.

ಸೋದರಿಯರ ಖಾತೆಗಳಿಗೆ ಲಕ್ಷಗಟ್ಟಲೆ ಹಣ ಸಂದಾಯ:

ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಶಾರೀಖ್‌ ಮೂಲತಃ ತೀರ್ಥಹಳ್ಳಿಯವನು. ಹಿಂದೆ ಈತ ವಿನಾಯಕ ಚಿತ್ರಮಂದಿರದ ಎದುರು ಇರುವ ರಸ್ತೆಯಲ್ಲಿ ತನ್ನ ತಂದೆಯ ಕೊಹಿನೂರು ಎಂಬ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಈಗ ತೀರ್ಥಹಳ್ಳಿಯಲ್ಲಿರುವ ಆತನ ಮನೆ ಹಾಗೂ ಆತನ ಸಂಬಂ ಧಿಕರ ನಾಲ್ಕು ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹಲವು ಮಹತ್ವದ ದಾಖಲೆಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ.  ಅದರಲ್ಲೂ ಮುಖ್ಯವಾಗಿ ಶಾರೀಖ್‌ನನ್ನು ಗುರುತಿಸಲು ಮಂಗಳೂರಿಗೆ ತೆರಳಿರುವ ಆತನ ಸಹೋದರಿಯರ ಖಾತೆಗಳಿಗೆ ಬೇರೆ ಬೇರೆ ಮೂಲಗಳಿಂದ ಲಕ್ಷಗಟ್ಟಲೆ ಹಣ ಸಂದಾಯವಾಗಿರುವ ಮಹತ್ವದ ಸುಳಿವು ಪತ್ತೆಯಾಗಿದೆ. ಶಿವಮೊಗ್ಗದ ತುಂಗಾ ತೀರದಲ್ಲಾದ ಸ್ಫೋಟಕ್ಕೂ ಕರಾವಳಿ ತೀರದ ಸ್ಫೋಟಕ್ಕೂ ಸಂಬಂಧ  ಇರುವುದು ದೃಢವಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ.

ಹಳೆಯ ಪ್ರಕರಣಗಳ  ಮಾಹಿತಿ ಸಂಗ್ರಹ: ಬೊಮ್ಮಾಯಿ:

Advertisement

ಬೆಂಗಳೂರು: ಸ್ಫೋಟಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಆರೋಪಿಯ ವೈಯಕ್ತಿಕ ಮಾಹಿತಿ, ಆತನ ಸಂಪರ್ಕ ಮುಂತಾದವುಗಳನ್ನು ಸಂಗ್ರಹಿಸಲಾಗುತ್ತಿದೆ. ಆರೋಪಿಯ ನಿಜವಾದ ಹೆಸರು ಗೊತ್ತಾದ ಬಳಿಕ ಯವ್ಯಾವ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬ  ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶಂಕಿತ ವ್ಯಕ್ತಿ ವಶಕ್ಕೆ :

ಬೆಂಗಳೂರು: ಮಂಗಳೂರು ಸ್ಫೋಟ ಪ್ರಕರಣದ  ತನಿಖೆ ನಡೆಸುತ್ತಿರುವ ಮೈಸೂರು ಪೊಲೀಸರು ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.  ಈಗಾಗಲೇ ಮಂಗಳೂರು ಪೊಲೀಸರ ವಶದಲ್ಲಿರುವ ಶಾರೀಖ್‌ ಜತೆಗೆ ಮೈಸೂರು ಮೂಲದ ಮಹಮದ್‌ ರುಹುಲ್ಲಾ ಎಂಬಾತ ನಂಟು ಹೊಂದಿದ್ದ ಎನ್ನಲಾಗುತ್ತಿದ್ದು, ಆತನನ್ನು ನಗರದ ಕೆ.ಜಿ. ಹಳ್ಳಿಯಿಂದ ರವಿವಾರ ಪೊಲೀಸರು ವಶಕ್ಕೆ ಪಡೆದು ಮೈಸೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರ ಜತೆ ಇನ್ನೂ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ರವಿವಾರ ರಾತ್ರಿಯೇ ಮಹಮದ್‌ ರುಹುಲ್ಲಾನನ್ನ ಪೊಲೀಸರು ವಶಕ್ಕೆ ಪಡೆದು,  ತಡರಾತ್ರಿ ಮೈಸೂರಿಗೆ ಕರೆದೊಯ್ದಿದ್ದು  ಬಳಿಕ ಅಲ್ಲಿಂದ ವಿಚಾರಣೆಗಾಗಿ ಮಂಗಳೂರಿಗೆ ಕರೆದೊಯ್ದಿದ್ದಾರೆ  ಎಂದು ತಿಳಿಸಿದ್ದಾರೆ.  ಈ ಬಗ್ಗೆ  ಪ್ರತಿಕ್ರಿಯೆ ನೀಡಿದ  ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ್‌, ಕೆ.ಜಿ. ಹಳ್ಳಿಯಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಮಹಮದ್‌ ರುಹುಲ್ಲಾ  ಬಾಂಬ್‌ ಸ್ಫೋಟದ ಆರೋಪಿ ಶಾರೀಖ್‌ ಜತೆಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ ಎಂದರು.

ಮೈಸೂರು ಪೊಲೀಸರು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ  ಕೆ.ಜಿ.ಹಳ್ಳಿ ಪೊಲೀಸರು ಹಲವು ಮಜಲುಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಆತನಿಗೆ ಆಶ್ರಯ ನೀಡಿದ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕುಕ್ಕರ್‌ ಸ್ಫೋಟದ ಹಿಂದೆ ದೊಡ್ಡ ಷಡ್ಯಂತ್ರವಿದೆ.  ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಬಹಳಷ್ಟು ಸಾವು-ನೋವು ಉಂಟು ಮಾಡುವುದಕ್ಕಾಗಿ ಶಾರೀಖ್‌ ಅಲ್ಲಿಗೆ ಹೋಗುತ್ತಿದ್ದುದಾಗಿ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಈಗಾಗಲೇ ಮೂವರನ್ನು ವಶಕ್ಕೆ ಪಡೆಯಲಾಗಿದೆ.  ಮೇಲ್ನೋಟಕ್ಕೆ ಆತ ಆತ್ಮಹತ್ಯಾ ಬಾಂಬರ್‌  ಎಂದನಿಸುತ್ತದೆ.  ತನಿಖೆಯ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. -ಆರಗ ಜ್ಞಾನೇಂದ್ರ, ಗೃಹ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next