Advertisement

ದೀನ ದಲಿತರ ಅಭಿವೃದ್ಧಿಗೆ ಮಠಮಾನ್ಯಗಳು ಬದ್ಧ; ರುದ್ರೇಶ್ವರ ಶ್ರೀ

06:41 PM Sep 06, 2022 | Team Udayavani |

ಚಿತ್ರದುರ್ಗ: ಮುರುಘಾ ಮಠದಲ್ಲಿ ಕಳೆದ 32 ವರ್ಷಗಳಿಂದ ಪ್ರತಿ ತಿಂಗಳು ತಪ್ಪದೇ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಸಲಾಗುತ್ತಿದ್ದು, ಇದು ಗಿನ್ನಿಸ್‌ ದಾಖಲೆಯಾಗುವ ಹಂತದಲ್ಲಿದೆ. ಇದೇ ರೀತಿ ದೀನ ದಲಿತರ ಅಭಿವೃದ್ಧಿಗೆ ನಾಡಿನ ಅನೇಕ ಮಠಗಳು ಶ್ರಮಿಸುತ್ತಿವೆ ಎಂದು ಹೆಬ್ಬಾಳು ರುದ್ರೇಶ್ವರ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.

Advertisement

ನಗರದ ಮುರುಘಾ ಮಠದ ಬಸವ ಕೇಂದ್ರದಲ್ಲಿ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಸಹಯೋಗದಲ್ಲಿ ನಡೆದ 32ನೇ ವರ್ಷದ ಒಂಭತ್ತನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಶ್ರೀಗಳು ಮಾತನಾಡಿದರು. ಐತಿಹಾಸಿಕ ಹಿನ್ನೆಲೆ ಹಾಗೂ ಭವ್ಯ ಪರಂಪರೆಯ ಮುರುಘಾ ಮಠದಲ್ಲಿ ಎಂದಿನಂತೆ ಎಲ್ಲ ಕಾರ್ಯಗಳು ನಡೆದುಕೊಂಡು ಹೋಗುತ್ತಿವೆ.ಇಲ್ಲಿ ಯಾವುದೇ ರೀತಿಯ ನೀರವ ಮೌನ
ಆವರಿಸಿಲ್ಲ. ಎಂದಿನಂತೆ ನಿರ್ಭಯವಾಗಿ ಭಕ್ತರು ಆಗಮಿಸಿ ಶ್ರೀಮಠದೊಂದಿಗೆ ಸಹಕರಿಸಬೇಕು.

ಮಠದಲ್ಲಿ ಚಾಚೂ ತಪ್ಪದೆ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಅನ್ನ ದಾಸೋಹ, ಶಿಕ್ಷಣ ದಾಸೋಹ, ಮುರುಘಾ ವನದ ವೀಕ್ಷಣೆ ಎಂದಿನಂತೆ ಇರುತ್ತದೆ ಎಂದರು. ಮಾನವನ ಬದುಕು ಹಸನಾಗಲು ಶಿಕ್ಷಣ ಅತ್ಯಗತ್ಯ. ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ಸಾಮಾನ್ಯ ಶಿಕ್ಷಕರಾಗಿ, ನಂತರ ರಾಷ್ಟ್ರದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದರು. ಅವರ ಸಾಧನೆ ನಮಗೆಲ್ಲರಿಗೂ ಆದರ್ಶ ಎಂದು ತಿಳಿಸಿದರು.

ಗುರುಮಠಕಲ್‌ನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗದಂತೆ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಆರಂಭಿಸಲಾಯಿತು. 17 ಸಾವಿರ ಜೋಡಿಗಳು ವಿವಾಹವಾಗಿರುವುದು ದಾಖಲೆಯಾಗಿದೆ. ಇದೊಂದು ಆದರ್ಶ ಕಾರ್ಯಕ್ರಮ ಎಂದು ಬಣ್ಣಿಸಿದರು. ಸತಿಪತಿಗಳೊಂದಾದ ಭಕ್ತಿ ಶಿವಂಗೆ ಹಿತವಪ್ಪುದು. ಸಾಂಸಾರಿಕ ಬದುಕಿನಲ್ಲಿ ಸಾಮರಸ್ಯ ಮುಖ್ಯ. ಬದುಕು ನಿಂತ ನೀರಾಗದೆ ನಿರಂತರ ಹರಿಯುವ ನದಿಯಾಗಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. 6 ಜೋಡಿ ದಾಂಪತ್ಯ ಜೀವನ ಪ್ರವೇಶಿಸಿದರು. ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಅಥಣಿಯ ಶ್ರೀ ಶಿವಬಸವ ಸ್ವಾಮೀಜಿ, ಹಾವೇರಿಯ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ, ಶರಣೆ ಮುಕ್ತಾಯಕ್ಕ, ಶ್ರೀ ಗುಂಡಯ್ಯ ಸ್ವಾಮೀಜಿ, ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯಕಾರಿ ಮಂಡಳಿಯ ಎಂ.ಟಿ. ಮಲ್ಲಿಕಾರ್ಜುನ ಸ್ವಾಮಿ, ಎಸ್‌. ಷಣ್ಮುಖಪ್ಪ, ಸಿದ್ದಾಪುರ ಎಸ್‌.ವಿ. ನಾಗರಾಜಪ್ಪ, ಎಚ್‌. ಆನಂದಪ್ಪ, ಮಹಡಿ ಶಿವಮೂರ್ತಿ, ಟಿ.ಪಿ. ಜ್ಞಾನಮೂರ್ತಿ, ಶಿವಕುಮಾರ್‌ ಉಪಸ್ಥಿತರಿದ್ದರು.

Advertisement

ಅದೆಷ್ಟೋ ಬಡವರು ಸಾಮೂಹಿಕ ವಿವಾಹದಿಂದ ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ಅವರ ಬದುಕು ಹಸನಾಗಿದೆ. ಬಸವಾದಿ ಶರಣರ ಆಶಯದಂತೆ ನಡೆಯುವ ಈ ವಿವಾಹ ಕಾರ್ಯಕ್ರಮ ಇಂದಿನ ದಿನಗಳಲ್ಲಿ ಪ್ರಸ್ತುತವೆನಿಸಿದೆ. ಮದುವೆ ಎಂಬುದು ಆಡಂಬರವಲ್ಲ, ಅದೊಂದು ಆದರ್ಶ.
ಶ್ರೀ ಶಾಂತವೀರ ಗುರು
ಮುರುಘರಾಜೇಂದ್ರ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next