Advertisement

ನಾಳೆ ಕೂಡಲ ಸಂಗಮದಲ್ಲಿ ಮಾತೆ ಮಹಾದೇವಿ ಅಂತ್ಯಕ್ರಿಯೆ

12:30 AM Mar 15, 2019 | |

ಬೆಂಗಳೂರು: ಬಹು ಅಂಗಾಂಗ ವೈಫ‌ಲ್ಯ ದಿಂದ ಬಳಲುತ್ತಿದ್ದ ಕೂಡಲಸಂಗಮದ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ (74) ಅವರು ಗುರುವಾರ ಹೃದಯಾ ಘಾತದಿಂದ ಲಿಂಗೈಕ್ಯ ರಾಗಿದ್ದಾರೆ.

Advertisement

ಮಾತೆ ಮಹಾದೇವಿ ಅವರಿಗೆ ಮೂತ್ರಪಿಂಡ ಹಾಗೂ ಶ್ವಾಸಕೋಶ ತೊಂದರೆಯಿಂದಾಗಿ ಮಾ.9ರಂದು ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಹು ಅಂಗಾಂಗ ವೈಫ‌ಲ್ಯದೊಂದಿಗೆ ರಕ್ತ ಸೋಂಕು ಸಮಸ್ಯೆಯೂ ಕಾಣಿಸಿಕೊಂಡ ಪರಿಣಾಮ ಅವರನ್ನು ತೀವ್ರ ನಿಗಾ ಘಟಕ ದಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಗುರುವಾರ ಸಂಜೆ 4.45ಕ್ಕೆ ಹೃದಯಾ ಘಾತದಿಂದ ಇಹಲೋಹ ತ್ಯಜಿಸಿದ್ದಾರೆ. ಕುಗ್ರಾಮದಲ್ಲಿ ಜನಿಸಿ ಜಗದ್ಗುರು ವಾದರು: ಚಿತ್ರದುರ್ಗ ತಾಲೂಕಿನ ಕುಗ್ರಾಮ ಸಾಸಲಹಟ್ಟಿ ಮಾತೆ ಮಹಾ ದೇವಿಯವರ ಹುಟ್ಟೂರು. 1946ರ ಮಾ. 13ರಂದು ಡಾ| ಎಸ್‌.ಆರ್‌. ಬಸಪ್ಪ ಹಾಗೂ ಗಂಗಮ್ಮನವರ ಪುತ್ರಿಯಾಗಿ ಜನಿಸಿದ ಮಾತೆ ಮಹಾದೇವಿ ಪೂರ್ವಾಶ್ರಮದ ಹೆಸರು ರತ್ನ ಎಂದಾಗಿತ್ತು.

ತಂದೆ ಬಸಪ್ಪ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾಗ ಅಕಾಲಿಕ ಮರಣಕ್ಕೆತುತ್ತಾದರು. ಆಗ ಇವರ ಆಸರೆಗೆ
ಬಂದಿದ್ದು ತಾತ, ಖ್ಯಾತ ವಕೀಲ ಬಿ.ಟಿ.ಶಿವನ್‌ ಮತ್ತು ತಂದೆಯ ಸಹೋದರಿ ಈರಮ್ಮ. ಇವರ ನೆರಳಿನಲ್ಲಿ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ ಮಾಡಿದರು. ಬಿಎಸ್ಸಿ ಮುಗಿಯುತ್ತಿದ್ದಂತೆ ಸಾಮಾಜಿಕ ಕಾದಂಬರಿ “ಹೆಪ್ಪಿಟ್ಟ ಹಾಲು’ ಕೃತಿ ರಚಿಸಿದರು. ಬಿಎಸ್ಸಿ ಮುಗಿಸಿ ಎಂಎ ಓದಲು ವಿವಿಗೆ ತೆರಳಿದಾಗ ಇವರು ಬರೆದ ಕಾದಂಬರಿ “ಹೆಪ್ಪಿಟ್ಟ ಹಾಲು’ ಎಂಎ ವಿದ್ಯಾರ್ಥಿಗಳಿಗೆ ಪಠ್ಯವಾಯಿತು.

1965ರ ಆ. 19 ರಿಂದ ಬಸವ ಧರ್ಮ  ಪ್ರಚಾರ ಆರಂಭಿಸಿದ ಎರಡೇ ದಿನದಲ್ಲಿ ಲಿಂಗಾನಂದ ಸ್ವಾಮಿಗಳಿಂದ ಇಷ್ಟಲಿಂಗದೀಕ್ಷೆ ಪಡೆದರು. ಧರ್ಮ ಪ್ರಚಾರ ಅನುಕೂಲಕ್ಕಾಗಿ 1968 ಏ.13ರಂದು ವೀರ ವೈರಾಗ್ಯ ನಿಧಿ  ಅಕ್ಕಮಹಾದೇವಿ ಜಯಂತಿ ದಿನ ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪಿಸಿದರು.

ಐತಿಹಾಸಿಕ ಅಕ್ಕ ಮಹಾದೇವಿ ಅನುಭವ ಪೀಠವೆಂಬ ವಿಶ್ವದ ಮೊಟ್ಟ ಮೊದಲ ಮಹಿಳಾ ಜಗದ್ಗುರು ಪೀಠ ಸ್ಥಾಪಿಸಿ ಅದರ ಪ್ರಥಮ ಪೀಠಾಧ್ಯಕ್ಷರಾಗಿ ಪ್ರತಿಜ್ಞಾ ವಿ ಧಿ ಸ್ವೀಕರಿಸಿದರು. 1977ರಲ್ಲಿ ವಿಶ್ವ ಕಲ್ಯಾಣ ಮಿಷನ್‌ (ಟ್ರಸ್ಟ್‌ ), ಬೆಂಗಳೂರಿನ ಕುಂಬಳಗೋಡಿನಲ್ಲಿ 1978ರಲ್ಲಿ ಬಸವ ಗಂಗೋತ್ರಿ ಆಶ್ರಮ, 2002ರಲ್ಲಿ ಬಸವಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯಪೀಠ ಸ್ಥಾಪಿಸಿ 12ನೇ ಶತಮಾನದ ಶೂನ್ಯಪೀಠ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದರು.

Advertisement

ಕೂಡಲಸಂಗಮದಲ್ಲಿ ನಾಳೆ ಅಂತ್ಯಕ್ರಿಯೆ
ಬಾಗಲಕೋಟೆ: ಮಾತೆ ಮಹಾದೇವಿ ಅವರ ಅಂತ್ಯಕ್ರಿಯೆ ಮಾ.16ರಂದು ಕೂಡಲಸಂಗಮದಲ್ಲಿ ನಡೆಯಲಿದೆ. ಎರಡು ದಿನ ಮಾತಾಜಿಯವರ ಪಾರ್ಥಿವ ಶರೀರ ದರ್ಶನ ವ್ಯವಸ್ಥೆ ಮಾಡಲಾಗಿದೆ. ಮಾ.15ರ ಬೆಳಗ್ಗೆ 11ರವರೆಗೆ ಬೆಂಗಳೂರಿನ ರಾಜಾಜಿನಗರದ ಬಸವ ಮಂಟಪದಲ್ಲಿ, ಅಲ್ಲಿಂದ ಮಾತಾಜಿಯವರ ಜನ್ಮಸ್ಥಳ ಸಾಸಲಹಟ್ಟಿಯಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.

ಬಳಿಕ ರಾತ್ರಿ ಲಿಂಗಾಯತ ಧರ್ಮ ಕ್ಷೇತ್ರ ಕೂಡಲಸಂಗಮಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತಿದ್ದು, ಅಲ್ಲಿ ಮಾ. 16ರವರೆಗೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಮಾ.16ರಂದೇ ಕೂಡಲಸಂಗಮದಲ್ಲಿ ನಾಡಿನ ಸಕಲ ಬಸವ ಪರಂಪರೆಯ ಜಂಗಮ ಮೂರ್ತಿಗಳು, ಬಸವ ಭಕ್ತರ ಉಪಸ್ಥಿತಿಯಲ್ಲಿ ಲಿಂಗಾಯತ ಧರ್ಮದ ಪದ್ಧತಿಯಂತೆ ಅಂತಿಮ ಕ್ರಿಯಾ ವಿಧಿ ವಿಧಾನ ನಡೆಯಲಿದೆ ಎಂದು ಬಸವ ಧರ್ಮ ಪೀಠದ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next