“ಐದು ದಿನಗಳ ಚಾರಣಕ್ಕೆ ತೆರಳುವಾಗ ಪ್ರಮುಖವಾಗಿ ಏನನ್ನು ತೆಗೆದುಕೊಂಡು ಹೋಗಬೇಕು?’ - ಹೀಗೆಂದು ಜ| ಬಿಪಿನ್ ರಾವತ್ ಅವರಿಗೆ ಸರ್ವಿಸಸ್ ಸೆಲೆಕ್ಷನ್ ಬೋರ್ಡ್ (ಎಸ್‌ಎಸ್‌ಬಿ) ಸಂದರ್ಶನಕ್ಕೆ ಹಿರಿಯ ಸೇನಾಧಿಕಾರಿ ಪ್ರಶ್ನೆ ಕೇಳಿದ್ದರಂತೆ. ಅದಕ್ಕೆ ಬಿಪಿನ್ ರಾವತ್ ಅವರು “ಬೆಂಕಿಪೆಟ್ಟಿಗೆ’ ಎಂದು ಉತ್ತರಿಸಿದ್ದರು. ಜತೆಗೆ ಆ ಉತ್ತರಕ್ಕೆ ಸಮರ್ಥನೆಗಳನ್ನೂ ನೀಡಿದ್ದರಂತೆ. ಕೆಲವು ದಿನಗಳು ಕಳೆದ ಮೇಲೆ, ರಾವತ್ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ಆಯ್ಕೆಯಾಗಿದ್ದ ಸಿಹಿ ಸುದ್ದಿ ತಲುಪಿತ್ತು.
ಸೇನೆಗೆ ಸೇರಲು ಬಯಸುವ ಯುವಕರಿಗೆ ಪ್ರೋತ್ಸಾಹ ತುಂಬುವ ಕಾರ್ಯಕ್ರಮವೊಂದಲ್ಲಿ ವಿದ್ಯಾರ್ಥಿಗಳಿಗೆ ರಕ್ಷಣ ಪಡೆಗಳ ಮುಖ್ಯಸ್ಥರಾಗಿದ್ದ ಜ| ಬಿಪಿನ್ ರಾವತ್ ಈ ಕುತೂಹಲಕಾರಿ ಅಂಶವನ್ನು ವಿವರಿಸಿದ್ದರು. ಸೇನಾಧಿಕಾರಿಗಳ ಕುಟುಂಬಕ್ಕೇ ಸೇರಿದ್ದ ಜ| ರಾವತ್ ಅವರು ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಪರೀಕ್ಷೆ ಬರೆದು ಉತ್ತೀರ್ಣರಾಗಿ, ಪುಣೆ ಸಮೀಪದ ಖಡಕ್‌ವಾಸ್ಲಾದಲ್ಲಿರುವ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ಸೇರ್ಪಡೆಯಾಗಿದ್ದರು.
ಅಲಹಾಬಾದ್‌ನ ಸರ್ವಿಸಸ್ ಸೆಲೆಕ್ಷನ್ ಬೋರ್ಡ್ (ಎಸ್‌ಎಸ್‌ಬಿ)ನ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗಿದ್ದರು. ಅದಕ್ಕೆ ಸಂಬಂಧಿಸಿದ ಐದು ದಿನಗಳ ಕಠಿನ ಅರ್ಹತಾ ಪರೀಕ್ಷೆಗಳು ಮುಕ್ತಾಯವಾದ ಬಳಿಕ, ಪ್ರಧಾನ ಅಂಶವಾಗಿರುವ ಮೌಖೀಕ ಸಂದರ್ಶನದಲ್ಲಿದ್ದ ಹಿರಿಯ ಸೇನಾಧಿಕಾರಿ, ರಾವತ್‌ಗೆ ಹವ್ಯಾಸಗಳ ಬಗ್ಗೆ ಪ್ರಶ್ನಿಸಿದ್ದರು. ಅದಕ್ಕೆ ಚಾರಣ ಎಂದು ಉತ್ತರಿಸಿದ್ದರು ರಾವತ್. “ಒಂದು ವೇಳೆ ಐದು ದಿನಗಳ ಚಾರಣಕ್ಕೆ ತೆರಳಬೇಕು ಎಂದಾದರೆ, ಪ್ರಧಾನವಾಗಿ ಯಾವ ವಸ್ತುವನ್ನು ತೆಗೆದುಕೊಳ್ಳಬೇಕು’ ಎಂದು ಸೇನಾಧಿಕಾರಿ ಪ್ರಶ್ನೆ ಕೇಳಿದ್ದರು. ಅದಕ್ಕೆ ಬೆಂಕಿಪೊಟ್ಟಣ ಎಂದು ಥಟ್ಟನೆ ಉತ್ತರಿಸಿದ್ದರು. ಅದಕ್ಕೆ ಸಮರ್ಥನೆ ನೀಡಿದ್ದ ರಾವತ್ “ಬೆಂಕಿ ಪೊಟ್ಟಣ ಇದ್ದರೆ ನನಗೆ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ. ಮಾನವ ಜೀವನದ ಆರಂಭದ ದಿನಗಳಲ್ಲಿ ಬೆಂಕಿಯ ಉಪಯೋಗ ಅರಿತು ಕೊಂಡದ್ದೇ ಪ್ರಧಾನ ಸಾಧನೆ ಮತ್ತು ಯಶಸ್ಸು. ಹೀಗಾಗಿ, ಚಾರಣಕ್ಕೆ ತೆರಳುವಾಗ ಬೆಂಕಿ ಪೊಟ್ಟಣ ಪ್ರಧಾನವಾಗಿ ತೆಗೆದುಕೊಳ್ಳಬೇಕು’ ಎಂದಿದ್ದರು.
ಒತ್ತಡ ಹೇರಿದ್ದರು: ರಾವತ್ ನೀಡಿದ್ದ ಸುದೀರ್ಘ ವಿವರಣೆ ಸರಿಯಲ್ಲವೆಂದು ಸಂದರ್ಶನ ಸಮಿತಿ ಯಲ್ಲಿದ್ದ ಸೇನಾಧಿಕಾರಿ ವಾದಿಸಿದ್ದರು. ಆದರೆ, ರಾವತ್ ಬೆಂಕಿ ಪೊಟ್ಟಣವೇ ಸರಿಯಾದ ಉತ್ತರ ಎಂದು ವಿನಯ ಪೂರ್ವಕವಾಗಿ ಉತ್ತರಿಸಿದ್ದರು. ಕರ್ತವ್ಯದಲ್ಲಿ ಇರುವ ವೇಳೆ ಎಂಥಾ ಒತ್ತಡ ಬಂದರೂ ನಿಲುವು ಸಡಿಲಿಕೆ ಮಾಡಬಾರದು ಎಂಬುದನ್ನು ಸೇನೆಗೆ ಸೇರುವ ಆಕಾಂಕ್ಷಿಗಳಿಗೆ ತಿಳಿಸಿ ಹೇಳುವ ನಿಟ್ಟಿನಲ್ಲಿ ಜ| ರಾವತ್ ಈ ಅಂಶ ಪ್ರಸ್ತಾವಿಸಿದ್ದರು. ಇದಾದ ಕೆಲವು ದಿನಗಳ ಬಳಿಕ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ಆಯ್ಕೆಯಾದ ಸಿಹಿ ಸುದ್ದಿ ಅವರಿಗೆ ತಲುಪಿತ್ತು.