Advertisement

2019ರ ಐಪಿಎಲ್‌ ಪಂದ್ಯಗಳ ಮೇಲೆ ಫಿಕ್ಸಿಂಗ್‌ ಆರೋಪ: 7 ಮಂದಿ ಬುಕ್ಕಿಗಳ ಹೆಸರು ದಾಖಲು: ಸಿಬಿಐ

10:38 AM May 15, 2022 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದಿಂದ ಪಡೆದ ಮಾಹಿತಿಗಳ ಆಧಾರದಲ್ಲಿ 2019ರ ಐಪಿಎಲ್‌ ಪಂದ್ಯಗಳ ಫಿಕ್ಸಿಂಗ್‌ ಆರೋಪಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಬಿಐ ಏಳು ಮಂದಿ ಸಂಶಯಿತ ಬುಕ್ಕಿಗಳ ಹೆಸರನ್ನು ದಾಖಲಿಸಿಕೊಂಡಿದೆ.

Advertisement

ಈ ಸಂಬಂಧ ಕೇಂದ್ರ ಗುಪ್ತಚರ ಸಂಸ್ಥೆಯು ದೇಶಾದ್ಯಂತ ತನಿಖೆಯನ್ನು ತೀವ್ರಗೊಳಿಸಿದೆ. ದಿಲ್ಲಿ, ಹೈದರಾಬಾದ್‌, ಜೈಪುರ ಮತ್ತು ಜೋಧ್‌ಪುರ ಸಹಿತ ಏಳು ಕಡೆ ಸಿಬಿಐ ತಂಡ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದೆ.

ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಜಾಲವು ಪಾಕಿಸ್ಥಾನದಿಂದ ಪಡೆಯುತ್ತಿರುವ ಮಾಹಿತಿಯ ಆಧಾರದಲ್ಲಿ ಐಪಿಎಲ್‌ ಪಂದ್ಯಗಳ ಫ‌ಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ. ಹೀಗಾಗಿ ಬೆಟ್ಟಿಂಗ್‌ನಲ್ಲಿ ಪಾಕಿಸ್ಥಾನದ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಸಿಬಿಐ ತಿಳಿಸಿದೆ.

ಸಿಬಿಐ ತನ್ನ ಮೊದಲ ಎಫ್ಐಆರ್‌ನಲ್ಲಿ ದಿಲ್ಲಿಯ ರೋಹಿಣಿ ಮೂಲದ ದಿಲೀಪ್‌ ಕುಮಾರ್‌ ಮತ್ತು ಹೈದರಾಬಾದ್‌ ಮೂಲದ ಗುರ್ರಂ ವಾಸು ಮತ್ತು ಗುರ್ರಂ ಸತೀಶ್‌ ಅವರನ್ನು ಆರೋಪಿಗಳೆಂದು ಹೆಸರಿಸಿದೆ. ಇದೇ ವೇಳೆ ರಾಜಸ್ಥಾನದ ಸಜ್ಜನ್‌ ಸಿಂಗ್‌, ಪ್ರಭು ಲಾಲ್‌ ಮೀನಾ, ರಾಮ್‌ ಅವತಾರ್‌ ಮತ್ತು ಅಮಿತ್‌ ಕುಮಾರ್‌ ಶರ್ಮ ಅವರೆಲ್ಲ ಎರಡನೇ ಆರೋಪಿಗಳೆಂದು ಹೆಸರಿಸಿದೆ.

ಕ್ರಿಕೆಟ್‌ ಬೆಟ್ಟಿಂಗ್‌ ಜಾಲವು ರಾಜಸ್ಥಾನದಿಂದ ಒಂದು 2010ರಿಂದ ಮತ್ತು ಇನ್ನೊಂದು 2013ರಿಂದ ಕಾರ್ಯಾಚರಿಸುತ್ತಿದೆ.

Advertisement

ಪಾಕಿಸ್ಥಾನದಿಂದ ಪಡೆದ ಮಾಹಿತಿಯ ಆಧಾರದಲ್ಲಿ ಈ ಬೆಟ್ಟಿಂಗ್‌ ಜಾಲವು ಸಾರ್ವಜನಿಕರನ್ನು ಬೆಟ್ಟಿಂಗ್‌ಗೆ ಪ್ರೇರೇಪಿಸುವ ಮೂಲಕ ವಂಚಿಸುತ್ತಿದ್ದವು ಎಂದು ಸಿಬಿಐ ತಿಳಿಸಿದೆ.

ಬೆಟ್ಟಿಂಗ್‌ ಕಾರ್ಯಾಚರಣೆ ನಡೆಸುವವರು ನಕಲಿ ಗುರುತಿನ ಮೂಲಕ ಬ್ಯಾಂಕ್‌ ಖಾತೆ ಹೊಂದಿದ್ದಾರೆ ಮತ್ತು ಅಪರಿಚಿತ ಬ್ಯಾಂಕ್‌ ಅಧಿಕಾರಿಗಳ ಜತೆ ಶಾಮೀಲಾಗಿ ಗ್ರಾಹಕರ ದಾಖಲೆಗಳನ್ನು ತಿಳಿದಿದ್ದಾರೆ. ಬ್ಯಾಂಕ್‌ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸದ ಕಾರಣ ಬೆಟ್ಟಿಂಗ್‌ ನಡೆಸುವವರು ನಕಲಿ ದಾಖಲೆಗಳನ್ನು ನೀಡಿ ಖಾತೆ ತೆರೆದಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಬೆಟ್ಟಿಂಗ್‌ ಚಟುವಟಿಕೆಗಳ ಮೂಲಕ ದೇಶದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ ಹಣದ ಒಂದು ಭಾಗವನ್ನು ಹವಾಲಾ ವಹಿವಾಟುಗಳನ್ನು ಬಳಸಿಕೊಂಡು ವಿದೇಶದಲ್ಲಿರುವ ಅವರ ಸಹಚರರ ಜತೆ ಹಂಚಿಕೊಳ್ಳಲಾಗುತ್ತದೆ ಎಂದು ಎಫ್ಐಆರ್‌ನಲ್ಲಿ ಆರೋಪಿಸಲಾಗಿದೆ.

ರಾಜಸ್ಥಾನದಲ್ಲಿ ನಡೆದ ಬೆಟ್ಟಿಂಗ್‌ ದಂಧೆಯಲ್ಲಿ ಬೆಟ್ಟಿಂಗ್‌ ಜಾಲದವರು ಹವಾಲಾ ವಹಿವಾಟುಗಳನ್ನು ಬಳಸಿಕೊಂಡು ವಿದೇಶದಲ್ಲಿ ನೆಲೆಸಿರುವ ತಮ್ಮ ಸಹಚರರೊಂದಿಗೆ ಬೆಟ್ಟಿಂಗ್‌ ಚಟುವಟಿಕೆಗಳಿಂದ ಭಾರತದಲ್ಲಿ ಸಾರ್ವಜನಿಕರಿಂದ ಪಡೆದ ಹಣದ ಒಂದು ಭಾಗವನ್ನು ಹಂಚಿಕೊಳ್ಳುತ್ತಿದ್ದಾರೆಂದು ಸಿಬಿಐ ಬಹಿರಂಗಪಡಿಸಿದೆ.

ರಾಜಸ್ಥಾನದಲ್ಲೂ ಬೆಟ್ಟಿಂಗ್‌
ರಾಜಸ್ಥಾನದಲ್ಲಿ ನಡೆದ ಬೆಟ್ಟಿಂಗ್‌ ಜಾಲದಲ್ಲಿ ಆರೋಪಿಗಳಾದ ಸಿಂಗ್‌, ಮೀನಾ, ರಾಮ್‌ ಅವತಾರ್‌ ಮತ್ತು ಶರ್ಮ ಅವರು ಪಾಕಿಸ್ಥಾನದ ಶಂಕಿತ ಬುಕ್ಕಿಯೊಬ್ಬರ ಜತೆ ಸಂಪರ್ಕದಲ್ಲಿದ್ದರು ಮತ್ತು ಪಾಕಿಸ್ಥಾನಿ ಸಂಖ್ಯೆ +9233222226666 ಮೂಲಕ ಭಾರತದಲ್ಲಿನ ಕೆಲವು ಅಪರಿಚಿತ ವ್ಯಕ್ತಿಗಳನ್ನು ಸಂಪರ್ಕಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಮೇಲಿನ ಆರೋಪಿಗಳು ಅಕ್ರಮ ಕ್ರಿಕೆಟ್‌ ಬೆಟ್ಟಿಂಗ್‌ ಚಟುವಟಿಕೆಗಳಲ್ಲಿ ತೊಡಗಿರುವ ಜಾಲದ ಭಾಗವಾಗಿದ್ದಾರೆ ಎಂದು ಈ ಮಾಹಿತಿ ಬಹಿರಂಗಪಡಿಸುತ್ತದೆ ಎಂದು ಎಫ್ಐಆರ್‌ನಲ್ಲಿ ಅರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next