ನೇಪಿಯರ್: ಮಳೆಯಿಂದ ಅಡಚಣೆಗೊಂದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೂರನೇ ಮತ್ತು ಅಂತಿಮ ಟಿ20 ಪಂದ್ಯವು ಟೈ ನಲ್ಲಿ ಅಂತ್ಯವಾಗಿದೆ. ಇದರೊಂದಿಗೆ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡವು 1-0 ಅಂತರದಿಂದ ಸರಣಿ ಜಯಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡವು 19.4 ಓವರ್ ಗಳಲ್ಲಿ 160 ರನ್ ಗೆ ಆಲೌಟಾಯಿತು. ಗುರಿ ಬೆನ್ನತ್ತಿದ ಭಾರತ ತಂಡವು 9 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದ್ದ ವೇಳೆ ಮಳೆ ಅಡ್ಡಿಪಡಿಸಿತು. ಡಕ್ ವರ್ತ್ ನಿಯಮದ ಪ್ರಕಾರ ಆ ವೇಳೆ 75 ರನ್ ಮಾಡಬೇಕಾಗಿದ್ದ ಕಾರಣ ಪಂದ್ಯ ಟೈನಲ್ಲಿ ಅಂತ್ಯವಾಯಿತು.
ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಮತ್ತೆ ಉತ್ತಮ ಆರಂಭ ಪಡೆಯಲಿಲ್ಲ. ಫಿನ್ ಅಲೆನ್ ಮೂರು ರನ್ ಗೆ ವಿಕೆಟ್ ಒಪ್ಪಿಸಿದರು. ಚಾಪ್ಮನ್ ಕೂಡಾ 12 ರನ್ ಮಾಡಿದರು. ಆದರೆ ಡೆವೋನ್ ಕಾನ್ವೆ ಮತ್ತು ಗ್ಲೆನ್ ಫಿಲಿಪ್ಸ್ ತಲಾ ಅರ್ಧಶತಕ ಬಾರಿಸಿ ತಂಡವನ್ನು ಆಧರಿಸಿದರು. ಕಾನ್ವೆ 59 ರನ್ ಮಾಡಿದರೆ, ಫಿಲಿಪ್ಸ್ 54 ರನ್ ಮಾಡಿದರು.
146 ರನ್ ಗೆ ನಾಲ್ಕನೇ ವಿಕೆಟ್ ಕಳೆದುಕೊಂಡ ಕಿವೀಸ್ ಬಳಿಕ ಸತತ ವಿಕೆಟ್ ಉರುಳಿಸಿಕೊಂಡಿತು. ವೇಗಿಗಳಾದ ಸಿರಾಜ್ ಮತ್ತು ಅರ್ಶದೀಪ್ ತಲಾ ನಾಲ್ಕು ವಿಕೆಟ್ ಕಿತ್ತರು. ಕಿವೀಸ್ 160 ರನ್ ಆಲೌಟಾಯಿತು.
Related Articles
ಗುರಿ ಬೆನ್ನತ್ತಿ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪಂತ್ 11, ಇಶಾನ್ ಕಿಶನ್ 10, ಶ್ರೇಯಸ್ ಅಯ್ಯರ್ 0, ಸೂರ್ಯಕುಮಾರ್ 13 ರನ್ ಅಷ್ಟೇ ಮಾಡಿದರು. 21 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡವನ್ನು ನಾಯಕ ಪಾಂಡ್ಯ ಆಧರಿಸಿದರು. 18 ಎಸೆತಗಳಿಂದ ಪಾಂಡ್ಯ ಅಜೇಯ 30 ರನ್ ಗಳಿಸಿದರು. ಹೂಡಾ ಅಜೇಯ 9 ರನ್ ಕಾಣಿಕೆ ನೀಡಿದರು.
ಭಾರತದ ಬ್ಯಾಟಿಂಗ್ ವೇಳೆ 8.6 ಓವರ್ ನಲ್ಲಿ ಹೂಡಾ ಬಾರಿಸಿದ ಚೆಂಡನ್ನು ಹಿಡಿಯುವಲ್ಲಿ ಫೀಲ್ಡರ್ ಸ್ಯಾಂಟ್ನರ್ ಎಡವಿದರು. ಹೀಗಾಗಿ ಭಾರತೀಯ ಬ್ಯಾಟರ್ ಗಳು ಒಂದು ರನ್ ಓಡಿದರು. ಭಾರತದ ಮೊತ್ತ 75 ರನ್. ಆಗಲೇ ಮಳೆ ಬಂದು ಪಂದ್ಯ ರದ್ದಾಯಿತು. ಆಗ ಡಿಎಲ್ ನಿಯಮದ ಪ್ರಕಾರ ಪಾರ್ ಸ್ಕೋರ್ 75 ರನ್. ಒಂದು ವೇಳೆ ಸ್ಯಾಂಟ್ನರ್ ಮಿಸ್ ಫೀಲ್ಡ್ ಮಾಡದೆ ಇದ್ದರೆ ಭಾರತದ ರನ್ 74 ಆಗಿರುತ್ತಿತ್ತು. ನ್ಯೂಜಿಲ್ಯಾಂಡ್ ಪಂದ್ಯ ಜಯಿಸುತ್ತಿತ್ತು. ಆದರೆ ಅರಿಯದೇ ಆದ ತಪ್ಪಿಗೆ ಕಿವೀಸ್ ಅವಕಾಶ ಕಳೆದುಕೊಂಡಿತು.
ಎರಡನೇ ಪಂದ್ಯ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ಭಾರತ ಸರಣಿ ಜಯಿಸಿತು. ಸಿರಾಜ್ ಪಂದ್ಯಶ್ರೇಷ್ಠ, ಸೂರ್ಯಕುಮಾರ್ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು.