Advertisement

ಜರ್ಮನಿ ಮಿಶನರಿಗಳಿಂದ ಕುದುರೆ ಲಾಯದಲ್ಲಿ ಪ್ರಾರಂಭಗೊಂಡ ಶಾಲೆ

09:32 PM Nov 24, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಶಿರ್ವ: ಧರ್ಮಪ್ರಚಾರಕ್ಕೆಂದು ಜರ್ಮನಿಯ ಬಾಸೆಲ್‌ ಪ್ರಾಂತ್ಯದಿಂದ 1834ರಲ್ಲಿ ಭಾರತಕ್ಕೆ ಬಂದ ಕ್ರೈಸ್ತ ಮಿಶನರಿ ದೊರೆಗಳಿಂದ ಕುದುರೆ ಲಾಯದಲ್ಲಿ 1866ರಲ್ಲಿ ಪ್ರಾರಂಭಗೊಂಡ ಮಟ್ಟಾರು ಯುನೈಟೆಡ್‌ ಬಾಸೆಲ್‌ ಮಿಷನ್‌ ಚರ್ಚ್‌ ಶಾಲೆಯು ಶತಮಾನೋತ್ತರ ಸುವರ್ಣ ಮಹೋತ್ಸವ ಸಂಭ್ರಮ ಆಚರಿಸಿದೆ.

ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಗ್ರಾಮೀಣ ಪರಿಸರದ ಜನರಿಗೆ ವಿದ್ಯೆಯ ಅರಿವು ಇರದ ಸಮಯದಲ್ಲಿ ಶಿಕ್ಷಣದ ಕ್ರಾಂತಿ ಮೂಡಿಸಿದ ಮಟ್ಟಾರು ಯುಬಿಎಂಸಿ ಶಾಲೆ ಇಂದಿಗೂ ಬಂಗ್ಲೆ ಶಾಲೆಯಾಗಿ ಹೆಸರನ್ನುಳಿಸಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಬದುಕನ್ನು ರೂಪಿಸಿಕೊಟ್ಟಿದೆ.

ಸುಮಾರು 14.5 ಎಕ್ರೆ ಜಾಗದ ಮಿಶನ್‌ ಕಂಪೌಂಡ್‌ನ‌ಲ್ಲಿರುವ ಶಾಲೆ ಇಂದಿಗೂ ಚರ್ಚ್‌ಕಟ್ಟಡದಲ್ಲಿಯೇ ಇದೆ. ಮಟ್ಟಾರು ಪರಿಸರದ ಕ್ರೈಸ್ತ ಮಿಶನರಿ ಕುಟುಂಬಗಳ ಪ್ರಾರ್ಥನಾ ಸಭೆ ನಡೆಯುವ ಚರ್ಚ್‌ನ ಒಂದು ಪಾರ್ಶ್ವದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಪ್ರಾರಂಭದಲ್ಲಿ 1 ರಿಂದ 5 ನೇ ತರಗತಿಯವರೆಗೆ ಇದ್ದ ಶಾಲೆ 1994ರಲ್ಲಿ 6 ಮತ್ತು 7 ನೇ ತರಗತಿ ಪ್ರಾರಂಭಗೊಂಡಿತ್ತು.

ಪ್ರಸ್ತುತ 39 ವಿದ್ಯಾರ್ಥಿಗಳು
ಹಲವಾರು ವರ್ಷಗಳ ಹಿಂದೆ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕೈರನ್ನ ಅವರು ಮಳೆಗಾಲದಲ್ಲಿ ಮಕ್ಕಳಿಗೆ ನೀರು ಬೀಳದಂತೆ ಚರ್ಚ್‌ನ ಸುತ್ತ ತೆಂಗಿನ ಮಡಲನ್ನು ಕಟ್ಟಿ ಶಾಲೆ ನಡೆಸುತ್ತಿದ್ದರು. ಸರ್ವಶಿಕ್ಷಣ ಅಭಿಯಾನ ಜಾರಿಯಾದ ಬಳಿಕ ಶೌಚಾಲಯ, ಅನ್ನಪೂರ್ಣ ಅಕ್ಷರ ದಾಸೋಹ ಅಡುಗೆ ಕೋಣೆ ನಿರ್ಮಾಣಗೊಂಡಿವೆ.

Advertisement

ಪ್ರಸ್ತುತ ಶಾಲೆಯಲ್ಲಿ 39 ವಿದ್ಯಾರ್ಥಿಗಳಿದ್ದು ಡೆಪ್ಯುಟೇಶನ್‌ ಮೇಲೆ ಬಂದ ಮುಖ್ಯ ಶಿಕ್ಷಕಿ ಸೇರಿದಂತೆ 3 ಜನ ಗೌರವ ಶಿಕ್ಷಕಿಯರಿದ್ದಾರೆ. ಹಳೆವಿದ್ಯಾರ್ಥಿಗಳು ಮತ್ತು ವಿದ್ಯಾಭಿಮಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಶಾಲಾ ಕಲಿಕಾ ಸಾಮಗ್ರಿಗಳು,ಸಮವಸ್ತ್ರ, ಶೂ ಮತ್ತು ಸಾಕ್ಸ್‌ ಸಹಿತ ಇತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಹೆಮ್ಮೆಯ ಹಳೆವಿದ್ಯಾರ್ಥಿ
ಚಿತ್ರಕಲಾವಿದ, ರೇಖಾ ಚಿತ್ರ ಮಾಂತ್ರಿಕ ಪದ್ಮಶ್ರೀ,ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಕೆ.ಕೆ. ಹೆಬ್ಟಾರ್‌ ಇದೇ ಶಾಲೆಯಲ್ಲಿ ಕಲಿತಿದ್ದು ಸ್ವಲ್ಪ ಸಮಯ ಬೋಧನೆಯನ್ನೂ ಮಾಡಿದ್ದರು. ಚಿತ್ರ ಕಲಾವಿದನ ನೈಪುಣ್ಯತೆಯನ್ನು ಕಂಡು ಅಂದಿನ ಮಿಶನರಿ ದೊರೆಗಳು ಅವರನ್ನು ಮುಂಬಯಿಗೆ ಕರೆದುಕೊಂಡು ಹೋಗಿ ಕಲಾವಿದನ ರೇಖಾ ಚಿತ್ರ ಸಾಧನೆಯ ಬದುಕು ರೂಪಿಸಲು ನೆರವಾಗಿದ್ದರು.

ತಾಮ್ರಪತ್ರ ಪ್ರಶಸ್ತಿ ವಿಜೇತ ಸ್ವಾತಂತ್ರ್ಯ ಯೋಧ,ಹಿರಿಯ ಪತ್ರಕರ್ತ,ನವಭಾರತ ದಿನಪತ್ರಿಕೆಯ ಸಂಪಾದಕರಾಗಿದ್ದ ಮಟ್ಟಾರು ವಿಠಲ ಹೆಗ್ಡೆ, ಮುಂಬೈ ಚಿತ್ರರಂಗದ ಪ್ರಖ್ಯಾತ ಸ್ಟಂಟ್‌ ಮಾಸ್ಟರ್‌ ದಿ| ಫೈಟರ್‌ ಶೆಟ್ಟಿ, ಗಿರಿಬಾಲೆ  ಕಾವ್ಯನಾಮದಲ್ಲಿ ಕಥೆ,ಕವನ ಕಾದಂಬರಿ ಬರೆಯುತ್ತಿದ್ದ ಸಾಹಿತಿ ಸರಸ್ವತಿ ಬಾಯಿ ರಾಜವಾಡೆ,ತುಳು ಚಿತ್ರನಟ ಬಲೆ ತೆಲಿಪಾಲೆ ಖ್ಯಾತಿಯ ಸಂದೀಪ್‌ ಶೆಟ್ಟಿ ಮಾಣಿ ಬೆಟ್ಟು, ಬಿಜೆಪಿ ಜಿಲ್ಲಾಧ್ಯಕ್ಷ ,
ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ,,ಜಿಲ್ಲಾ ರಾಜ್ಯೋತ್ಸವ ಪ್ರಶ‌ಸ್ತಿ ಶಿಲ್ಪಿ ಬಾಬು ಆಚಾರ್ಯ,ಸಿಎ ದಿವಾಕರ ಶೆಟ್ಟಿ, ಮೊದಲಾದ ಹಳೆ ವಿದ್ಯಾರ್ಥಿಗಳನ್ನು ಈ ಸಂಸ್ಥೆ ನೀಡಿದೆ.

ವಿದ್ಯಾರ್ಥಿಗಳಿಗೆ ಸರಕಾರದ ವಿದ್ಯಾರ್ಥಿವೇತನ ದೊರೆಯುತ್ತಿದ್ದು,2016ರಲ್ಲಿ ಶಾಲೆ ಮುಚ್ಚುವ ಪರಿಸ್ಥಿತಿ ಬಂದಾಗ ಊರವರ ಸಹಕಾರದಿಂದ ಕನ್ನಡ ಶಾಲೆಯನ್ನು ಉಳಿಸುವ ಪ್ರಯತ್ನ ನಡೆಸಿ ಶತಮಾನೋತ್ತರ ಸುವರ್ಣ ಸಂಭ್ರಮವನ್ನು ಆಚರಿಸಿದ್ದೇವೆ.
-ಶರತ್‌ ಕುಮಾರಿ, ಮುಖ್ಯ ಶಿಕ್ಷಕಿ

ಗ್ರಾಮೀಣ ಭಾಗದ ಜನರಿಗೆ ಅಕ್ಷರಾಭ್ಯಾಸ ಕಲಿಸಿದ ಶತಮಾನ ಕಂಡ ಕನ್ನಡ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ. ಹಳೆವಿದ್ಯಾರ್ಥಿಗಳು ಮತ್ತು ದಾನಿಗಳ ಸಹಕಾರದೊಂದಿಗೆ ಗೌರವ ಶಿಕ್ಷಕರ ವೇತನ ನೀಡಲಾಗುತ್ತಿದೆ..
-ದೇವದಾಸ್‌ ನಾಯಕ್‌,
ಶಿರ್ವ ಗ್ರಾ.ಪಂ. ಉಪಾಧ್ಯಕ್ಷರು

ಸತೀಶ್ಚಂದ್ರ ಶೆಟ್ಟಿ ,ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next