ಮೈಸೂರು: ಮೈಸೂರು, ಚಾಮರಾಜ ನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿರುವ ಮಂಟೇಸ್ವಾಮಿ ಪರಂಪರೆ ಕ್ಷೇತ್ರಗಳಿಗೆ ಬರುವ ಭಕ್ತಾದಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಮಾಸ್ಟರ್ ಪ್ಲಾನ್ ರೂಪಿಸಿ ಮುಖ್ಯಮಂತ್ರಿಯವರು ನೀಡಿರುವ 3 ಕೋಟಿ ರೂ.ಅನುದಾನ ಬಳಸಿಕೊಂಡು ಅಗತ್ಯ ಸೌಕರ್ಯ ಒದಗಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮಂಟೇಸ್ವಾಮಿ ಪರಂಪರೆ ಕ್ಷೇತ್ರಗಳ ಅಭಿವೃದ್ಧಿ ಸಂಬಂಧ ಸಭೆ ನಡೆಸಿದರು. ಮುಖ್ಯಮಂತ್ರಿಯವರು 2017-18ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದಂತೆ ಈ ಕ್ಷೇತ್ರಗಳ ಅಭಿವೃದ್ಧಿಗಾಗಿ 3ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ.
ಈ ಪೈಕಿ ಮೈಸೂರು ವಿವಿಯಲ್ಲಿ ಮಂಟೇಸ್ವಾಮಿ ಪರಂಪರೆ ಅಧ್ಯಯನ ಪೀಠ ಸ್ಥಾಪಿಸಲು 1 ಕೋಟಿ ರೂ. ನೀಡಲಾಗಿದ್ದು, ಇನ್ನುಳಿದ 2 ಕೋಟಿಯಲ್ಲಿ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಕಪ್ಪಡಿ ಕ್ಷೇತ್ರದ ಅಭಿವೃದ್ಧಿಗೆ 70 ಲಕ್ಷ ರೂ., ಚಾಮರಾಜ ನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಕ್ಷೇತ್ರಕ್ಕೆ 65 ಲಕ್ಷ ರೂ. ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೊಪ್ಪಗೌಡನ ಪುರ ಕ್ಷೇತ್ರದ ಅಭಿವೃದ್ಧಿಗೆ 65 ಲಕ್ಷ ರೂ. ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಈ ಕ್ಷೇತ್ರಗಳಲ್ಲಿ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಜಾತ್ರೆಗಳು ನಡೆಯಲಿದ್ದು, ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ಹೀಗಾಗಿ ಕುಡಿಯುವ ನೀರು, ಶೌಚಾಲಯ, ಸ್ನಾನಘಟ್ಟ ನಿರ್ಮಾಣ, ವಸತಿ ವ್ಯವಸ್ಥೆ, ಉರುಳುಸೇವೆಗೆ ಪ್ರತ್ಯೇಕ ಪಥ ನಿರ್ಮಾಣ, ವ್ಯವಸ್ಥಿತ ಅಂಗಡಿ-ಮುಂಗಟ್ಟುಗಳು ಹಾಗೂ ಸಸಿಗಳನ್ನು ಬೆಳೆಸಲು ಆದ್ಯತೆ ನೀಡುವಂತೆ ತಿಳಿಸಿದರು.
ಕ್ಷೇತ್ರಗಳ ಸೌಂದರ್ಯ ಹಾಳಾಗದಂತೆ ಮಾಸ್ಟರ್‌ಪ್ಲಾನ್ ರೂಪಿಸುವಾಗ ಶ್ವಾಶತ ಯೋಜನೆಗಳು ಹಾಗೂ ಅಲ್ಪಾವಧಿ ಯೋಜನೆಗಳೆಂದು 2ಪಟ್ಟಿ ಮಾಡಿಕೊಂಡು ನೀರು ಒದಗಿಸುವ ಕೆಲಸಕ್ಕೆ ಆದ್ಯತೆ ನೀಡಿ, ಹಂತ ಹಂತವಾಗಿ ಅಭಿವೃದ್ಧಿಪಡಿಸಿ ಎಂದು ಸೂಚಿಸಿದರು. ಈ ಕ್ಷೇತ್ರಗಳಲ್ಲಿನ ಗದ್ದುಗೆಗಳು ಶಿಥಿಲಗೊಂಡಿದ್ದರೆ, ಅವುಗಳ ಜೀರ್ಣೋದ್ಧಾರಕ್ಕೂ ಕ್ರಮವಹಿಸಿ, ಕಪ್ಪಡಿ ಕ್ಷೇತ್ರದಲ್ಲಿ ಕಾವೇರಿ ನದಿ ಪಾತ್ರ ಮಲಿನವಾಗದಂತೆ ಎಚ್ಚರವಹಿಸಿ ಎಂದು ತಿಳಿಸಿದರು.
ಕಪ್ಪಡಿ ಮತ್ತು ಚಿಕ್ಕಲ್ಲೂರು ಕ್ಷೇತ್ರಗಳ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಸಂಬಂಧ ಪ್ರತ್ಯೇಕ ಪ್ರಸ್ತಾವನೆ ಕಳುಹಿಸಿ ವಿವಿಯಲ್ಲಿ ಮಂಟೇಸ್ವಾಮಿ ಅಧ್ಯಯನ ಪೀಠ ಸ್ಥಾಪನೆ ಸಂಬಂಧ ಜಿಲ್ಲಾಡಳಿತ, ವಿವಿಯೊಂದಿಗೆ ಸಮನ್ವಯ ಮಾಡುವಂತೆ ತಿಳಿಸಿದರು. ಜಿಲ್ಲಾಧಿಕಾರಿ ರಂದೀಪ್ ಡಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಪ್ರಭುರಾಜೇ ಅರಸು ಮತ್ತಿತರರಿದ್ದರು.