Advertisement

Karnataka: 25 ದೇವಾಲಯಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌: ಸಚಿವ ರಾಮಲಿಂಗಾ ರೆಡ್ಡಿ

10:06 PM Sep 16, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ದೇವಾಲಯಗಳು ಹೊಂದಿರುವ ಚರ ಆಸ್ತಿಗಳ ಸರ್ವೇ ಮಾಡಿ, ಒತ್ತುವರಿ ಆಗಿದ್ದರೆ ತೆರವುಗೊಳಿಸಿ ಕಡ್ಡಾಯವಾಗಿ ದಾಖಲೀಕರಣ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

Advertisement

ಸಾರಿಗೆ ಇಲಾಖೆ ಆಯುಕ್ತರ ಕಚೇರಿಯಲ್ಲಿ ಶನಿವಾರ ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ಇಲಾಖೆಯ ರಾಜ್ಯದ ಪ್ರಮುಖ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ರಾಜ್ಯದ ಎಲ್ಲ ಜಿಲ್ಲೆಗಳ ಸಹಾಯಕ ಆಯುಕ್ತರು ಮತ್ತು ಧಾರ್ಮಿಕ ದತ್ತಿ ತಹಶೀಲ್ದಾರ್‌ ಜತೆಗೆ ನಡೆದ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ದೇವಾಲಯಗಳಿಗೆ ಸೇರಿದ ಬಹಳಷ್ಟು ಆಸ್ತಿಗಳಿವೆ. ಕೆಲವು ದೇವಾಲಯಗಳಿಗೆ ಸಂಬಂಧಿಸಿದ ಭೂ ವ್ಯಾಜ್ಯಗಳು ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿದೆ. ದೇವಾಲಯದ ಜಾಗ ಒತ್ತುವರಿ ಮಾಡಿರುವುದು ಕಂಡು ಬಂದರೆ ಅದನ್ನು ವಶಕ್ಕೆ ಪಡೆಯಲಾಗುವುದು ಎಂದು ವಿವರಿಸಿದರು.

25 ದೇವಾಲಯ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌
ಶಕ್ತಿ ಯೋಜನೆ ಆರಂಭವಾದ ಬಳಿಕ ದೇವಾಲಯಗಳಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ದರ್ಶನಕ್ಕೆ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಲಕ್ಷಾಂತರ ಜನ ಭೇಟಿ ಕೊಡುವ ಪ್ರಮುಖ 25 ದೇವಾಲಯಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮಾಸ್ಟರ್‌ಪ್ಲಾನ್‌ ತಯಾರಿಸಲು ಯೋಜನೆ ರೂಪಿಸಲಾಗಿದೆ. ಇದರ ಪ್ರಕಾರ ದೇವಾಲಯಗಳ ಕಟ್ಟಡ ಸೂಕ್ತ ರೀತಿಯಲ್ಲಿ ನಿರ್ವಹಣೆ, ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಗೃಹ ಸಹಿತ ವಿವಿಧ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಸಹಾಯಧನ ವ್ಯವಸ್ಥೆ ಸರಳ
ಚಾರ್‌ಧಾಮ್‌ ಯಾತ್ರೆ-ಕಾಶಿ ಯಾತ್ರೆ-ಮಾನಸ ಸರೋವರ ಯಾತ್ರೆ-ಕರ್ನಾಟಕ ಗೌರವ್‌ ಕಾಶಿ-ಯಾತ್ರೆಗೆ ಸಹಾಯಧನ ವಿತರಿಸುವ ವ್ಯವಸ್ಥೆ ಸರಳಗೊಳಿಸಿ, ಮೊಬೈಲ್‌ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದರು.

Advertisement

ಎಲ್ಲ ಪ್ರಮುಖ ದೇವಾಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕೆಮರಾ ಅಳವಡಿಸಲು ಕ್ರಮ ಕೈಗೊಳ್ಳಬೇಕು. 65 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನರಿಗೆ ಸುಗಮವಾಗಿ ದೇವರ ದರ್ಶನ ಮಾಡಿಸುವ ವ್ಯವಸ್ಥೆಯನ್ನು ಎಲ್ಲ ದೇವಾಲಯಗಳಲ್ಲಿ ಕಡ್ಡಾಯವಾಗಿ ಕಲ್ಪಿಸಬೇಕು. ಪುಟ್ಟ ಶಿಶುಗಳಿಗೆ ಹಾಲುಣಿಸಲು ಅನುಕೂಲವಾಗುವಂತೆ ಪ್ರತ್ಯೇಕ ಹಾಲುಣಿಸುವ ಕೇಂದ್ರ (ಕೊಠಡಿ)ವನ್ನು ನಿರ್ಮಿಸಬೇಕು. ದೇವಾಲಯಗಳ ಸುತ್ತ 100 ಮೀಟರ್‌ ಸುತ್ತಳತೆಯಲ್ಲಿ ಮದ್ಯ, ಸಿಗರೇಟು, ಗುಟ್ಕಾ ಹಾಗೂ ಇತರ ಮಾದಕ ವಸ್ತುಗಳ ಮಾರಾಟವನ್ನು ನಿಷೇಧಿಸುವ ಬಗ್ಗೆ ಆದೇಶ ಹೊರಡಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಅರ್ಚಕರ ಖಾತೆಗೆ ಜಮೆ
ಅರ್ಚಕರ ತಸ್ತೀಕ್‌/ ವರ್ಷಾಸನವನ್ನು ನೇರವಾಗಿ ಅವರ ಖಾತೆಗೆ (ಡಿಬಿಟಿ) ಜಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದ ಮುಜರಾಯಿ ಇಲಾಖೆ ವ್ಯಾಪ್ತಿಗಳಲ್ಲಿರುವ ದೇವಾಲಯಗಳ ಅರ್ಚಕರ ಬ್ಯಾಂಕ್‌ ಖಾತೆಗೆ ವಾರ್ಷಿಕ 15 ಸಾವಿರ ರೂ. ಜಮೆಯಾಗಲಿದೆ. ಮಹಿಳಾ ಅರ್ಚಕರನ್ನು ನೇಮಕ ಮಾಡುವ ವಿಚಾರಕ್ಕೆ ಸಂಬಂಧಿಸಿ, ಯಾರಾದರೂ ಅರ್ಜಿ ಸಲ್ಲಿಸಿದರೆ ಚಿಂತನೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಆ್ಯಪ್‌ ಮೂಲಕವೇ ಆನ್‌ಲೈನ್‌ ಸೇವೆ
ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಆ್ಯಪ್‌ ಮೂಲಕವೇ ಆನ್‌ಲೈನ್‌ ಸೇವೆ ಆರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆ್ಯಪ್‌ ಮೂಲಕ ಪೂಜೆ, ಪುನಸ್ಕಾರಕ್ಕೆ ಮುಂಗಡ ನೋಂದಣಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಜತೆಗೆ ಪ್ರಮುಖ ದೇವಾಲಯಗಳಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಕೊಠಡಿಗಳನ್ನೂ ಮೊಬೈಲ್‌ ಆ್ಯಪ್‌ ಮೂಲಕವೇ ಕಾದಿರಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next