ಕುಂದಾಪುರ: ಶಂಕರ್‌ನಾಗ್ ಅವರು ತಾನೊಬ್ಬ ಸ್ಟಾರ್ ನಟ, ನಿರ್ದೇಶಕ ಅನ್ನುವ ಭಾವನೆಯೇ ಇರಲಿಲ್ಲ. ಮಕ್ಕಳೊಂದಿಗೆ ಮಕ್ಕಳಂತೆ ಇರುತ್ತಿದ್ದರು. ಮಕ್ಕಳ ಭಾಷೆಯಲ್ಲಿ ಅರ್ಥವಾಗುವಂತೆ ಹೇಳಿದ್ದಕ್ಕೆ ನನ್ನಿಂದ ಉತ್ತಮ ನಟನೆ ಬರಲು ಸಾಧ್ಯವಾಯಿತು. ಜಗತ್ತಿಗೆ ಅವರು ಶಂಕರ್‌ನಾಗ್ ಆಗಿದ್ದರೂ, ನನಗವರು ಶಂಕರ್ ಅಂಕಲ್. ವಯಸ್ಸಲ್ಲಿ ಹಿರಿಯರಾಗಿದ್ದರೂ, ಅವರು ನನ್ನ ಉತ್ತಮ ಸ್ನೇಹಿತ ಆಗಿದ್ದರು ಎಂದು ‘ಮಾಲ್ಗುಡಿ ಡೇಸ್’ ಖ್ಯಾತಿಯ ನಟ, ಈಗ ತನ್ನದೇ ಸ್ವಂತ ಕಂಪೆನಿ ನಡೆಸಿಕೊಂಡಿರುವ ಮಾಸ್ಟರ್ ಮಂಜುನಾಥ್ ಹೇಳಿದರು.
ಅವರು ಇಲ್ಲಿ ನಡೆಯುತ್ತಿರುವ ಕಾರ್ಟೂನು ಹಬ್ಬದ ಸಂವಾದದಲ್ಲಿ ತನ್ನ ಚಿತ್ರರಂಗದ ಪಯಣ, ನಟ, ನಿರ್ದೇಶಕ ಶಂಕರ್‌ನಾಗ್ ಅವರೊಂದಿಗಿನ ಒಡನಾಟವನ್ನು ಬಿಚ್ಚಿಟ್ಟರು.
90ರಲ್ಲಿ ಸೆಷಲ್ ಎಫೆಕ್ಟ್ ಪರಿಚಯಿಸಿದ್ದ ಶಂಕರನಾಗ್ ಜೀನಿಯಸ್ ಎಂದು ಸ್ಮರಿಸಿದ ಅವರು, ಆಗಲೇ ಅವರು ನನ್ನಲ್ಲಿ ಕಲಾವಿದ ಅಲ್ಲದೆಯೂ ವ್ಯಕ್ತಿಯಾಗಿ ಹೇಗಿರಬೇಕು ಅನ್ನುವುದನ್ನು ಹೇಳಿಕೊಟ್ಟಿದ್ದರು. 10 ವರ್ಷ ಅವರೊಂದಿಗೆ ಕಾಲ ಕಳೆದ ನಾನು ನಿಜಕ್ಕೂ ಅದೃಷ್ಟವಂತ ಎಂದರು.
ಮತ್ತೆ ಸಿನೆಮಾ ಮಾಡುವ ಕನಸಿದೆ
15 ವರ್ಷದಲ್ಲಿ 68 ಸಿನೆಮಾ ಮಾಡಿದೆ. ಕೆಲ ಕಾಲ ಬ್ರೇಕ್ ಪಡೆದು, ಶಿಕ್ಷಣ ಮುಗಿಸಿ, ಮತ್ತೆ ಈ ಬಗ್ಗೆ ಚಿಂತನೆ ಮಾಡಬೇಕು ಅಂತ ಇದ್ದೆ. ಆದರೆ ಶಿಕ್ಷಣದ ಬಳಿಕ ಆಗ ತಾನೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಡಿಜಿಟಲ್ ವೇದಿಕೆ ಒಳ್ಳೆಯ ಅವಕಾಶ ಒದಗಿಸಿತು. ಅದರಲ್ಲಿ ತೊಡಗಿಸಿಕೊಂಡೆ. ಉತ್ತಮ ಯಶಸ್ಸು ಕೂಡ ಸಿಕ್ಕಿತು. ಹಾಗಾಗಿ ಸಿನೆಮಾ ರಂಗಕ್ಕೆ ಬರಲು ಆಗಲಿಲ್ಲ. ಸಿನೆಮಾ ರಂಗಕ್ಕೆ ಮತ್ತೆ ವಾಪಾಸು ಬರಲು ಈಗಲೂ ತುಂಬಾ ಆಸೆಯಿದೆ. ನಿರ್ದೇಶನದ ಕನಸಿದೆ. ರಿಷಬ್ ಶೆಟ್ರಾ ಈಗಾಗಲೇ ಕಾಂತಾರ ಮೂಲಕ ಯಶಸ್ಸು ಪಡೆಯಬಹುದು ಅನ್ನುವುದನ್ನು ಸಾಧಿಸಿದ್ದಾರೆ. ಅದೇ ನನಗೆ ಸ್ಫೂರ್ತಿ. ಅದೃಷ್ಟವಿದ್ದರೆ ಅತೀ ಶೀಘ್ರದಲ್ಲಿ ನಿರ್ದೇಶನ ಮಾಡುತ್ತೇನೆ ಎಂದು ಹೇಳಿಕೊಂಡರು.
ಕುಂದಾಪುರದಲ್ಲಿ ಶಶಿ ಕಪೂರ್- ರೇಖಾ ನಟನೆಯ ಉತ್ಸವ್ ಚಿತ್ರಕ್ಕೆ ಬಂದಿದ್ದು ನೆನಪಿದೆ. ಆಗುಂಬೆಯಲ್ಲಿ ನಾನಿದ್ದ ಮನೆಗೆ ಈಗಲೂ ಹೋಗಿ ಬರುತ್ತಿರುತ್ತೇನೆ ಎಂದ ಅವರು, ನಾನು ಬೆಳೆದ ಜಾಗ ಸಿನೆಮಾ ರಂಗ. ಆ ಬಗ್ಗೆ ವಿಶೇಷ ಗೌರವವಿದೆ. ದಿಗ್ಗಜರೊಂದಿಗೆ ನಟನೆ ಮಾಡುವ ಭಾಗ್ಯ ಸಿಕ್ಕಿತು. ಆದರೆ ಆಗ ನನಗೆ ಅವರು ಯಾರು ಅಂತ ಗೊತ್ತಿರಲಿಲ್ಲ. ಬಹುಶಃ ಅದೇ ನನಗೆ ನಟನೆ ಚೆನ್ನಾಗಿ ಮಾಡಲು ಸಹಕಾರಿಯಾಗಿರಬಹುದು ಎಂದು ಮಾಸ್ಟರ್ ಮಂಜುನಾಥ್ ನೆನಪು ಮಾಡಿಕೊಂಡರು.