Advertisement

ಕಾಸಿನಾಸೆಯ ಹುಡುಗನ ಮಾಸ್ಟರ್‌ ಗೇಮ್‌

10:36 AM Jul 22, 2017 | |

ಅಪ್ಪನಿಗೆ ಆಪರೇಷನ್‌ ಮಾಡಿಸಬೇಕು, ಮನೆ ನಿರ್ವಹಣೆಗೆ ತಾಯಿ ಮಾಡಿದ ಸಾಲ ತೀರಿಸಬೇಕು, ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಬೇಕಾದರೆ ಮೂರು ಬೆಡ್‌ರೂಮ್‌ ಮನೆ ಮಾಡಬೇಕು, ಜೊತೆಗೆ ಅದ್ಧೂರಿ ಮದುವೆಯ ಖರ್ಚು ನೋಡಿಕೊಳ್ಳಬೇಕು … ಇವೆಲ್ಲವನ್ನು ಮಾಡಲು ಕೈ ತುಂಬಾ ಕಾಸು ಬೇಕು. ಆಗಲೇ ಆತ ಒಂದು ನಿರ್ಧಾರಕ್ಕೆ ಬರೋದು. ಹೇಗಾದರೂ ಸರಿ ಕಾಸು ಮಾಡಬೇಕು. “ಐ ನೀಡ್‌ ಮನಿ’ ಎಂದು ಜೋರಾಗಿ ಕೂಗುತ್ತಾನೆ. ಕೊನೆಗೂ ಆತ ಕಾಸು ಮಾಡುತ್ತಾನೆ. ಮೇಲ್ನೋಟಕ್ಕೆ ಅಡ್ಡದಾರಿಯಲ್ಲಿ ಕಾಸು ಮಾಡಿದಂತೆ ಕಂಡರೂ ಅದರ ಹಿಂದೆ ಒಂದು ರೋಚಕ ಕಥೆ ಇದೆ. ಆ ರೋಚಕತೆಯನ್ನು ನೀವು ತೆರೆಮೇಲೆ ನೋಡಿದರೇನೆ ಮಜಾ. 

Advertisement

ನಿರ್ದೇಶಕ ಶಿವತೇಜಸ್‌ ತಮ್ಮ ಎರಡನೇ ಸಿನಿಮಾದಲ್ಲಿ ಒಂದು ಮೈಂಡ್‌ಗೇಮ್‌ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೈಂಡ್‌ಗೇಮ್‌ ಅನ್ನು ಮಜಾವಾಗಿ ಕಟ್ಟಿಕೊಟ್ಟಿದ್ದಾರೆ ಕೂಡಾ. ಈ ಹಿಂದೆ ಅಜೇಯ್‌ ರಾವ್‌ ಈ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಆ ತರಹದ ಒಂದು ಮಾಸ್ಟರ್‌ಮೈಂಡ್‌ನ‌ ಪಾತ್ರ. ಮಧ್ಯಮ ವರ್ಗದ ಕುಟುಂಬದ ಒಬ್ಬ ಹುಡುಗ ಯಾವ ಮಟ್ಟಕ್ಕೆ ಬೆಳೆಯುತ್ತಾನೆ ಮತ್ತು ಅದಕ್ಕೆ ಕಾರಣವಾಗುವ ಅಂಶಗಳೊಂದಿಗೆ ಇಡೀ ಸಿನಿಮಾ ಕಟ್ಟಿಕೊಡಲಾಗಿದೆ. ಮೊದಲೇ ಹೇಳಿದಂತೆ ಇದು ಮಧ್ಯಮ ವರ್ಗದ ಹುಡುಗನೊಬ್ಬನ ಕಥೆ.

ಹಾಗಾಗಿ, ಆ ಕುಟುಂಬದ ಸ್ಥಿತಿಗತಿ, ಒಂದೊಂದು ರೂಪಾಯಿಗೂ ಕಷ್ಟಪಡಬೇಕಾದ ಪರಿಸ್ಥಿತಿ, ಸಾಲಕೊಟ್ಟವರ ಕಥೆ … ಈ ಎಲ್ಲಾ ಅಂಶಗಳೊಂದಿಗೆ ಸಿನಿಮಾ ಆರಂಭವಾಗುತ್ತದೆ. ಮೊದಲರ್ಧ ಸಿನಿಮಾದಲ್ಲಿ ನಾಯಕನ ಕುಟುಂಬದ ಹಿನ್ನೆಲೆ, ಗ್ಯಾಪಲ್ಲೊಂದು ಲವ್‌, ಹಾಡುಗಳಿಗೆ ಸೀಮಿತವಾಗಿದೆ. ಹಾಗಾಗಿ, ಇಲ್ಲಿ ಹೆಚ್ಚಿನದ್ದೇನು ನಿರೀಕ್ಷಿಸುವಂತಿಲ್ಲ. ಇಂಟರ್‌ವಲ್‌ ಹೊತ್ತಿಗೆ ನಿಜವಾದ ಕಥೆ ತೆರೆದುಕೊಳ್ಳುತ್ತದೆ. ಅಲ್ಲಿಂದ ನಾಯಕ ಹಾಗೂ ವಿಲನ್‌ ನಡುವಿನ ಮಜಾವಾದ ಆಟ ಆರಂಭ. ಸಾಮಾನ್ಯವಾಗಿ ಅಜೇಯ್‌ ರಾವ್‌ ಎಂದರೆ ಲವ್‌ಸ್ಟೋರಿಗಳಿಗೆ ಸೀಮಿತ ಎಂಬಂತಿತ್ತು.

ಆದರೆ, ಚಿತ್ರದಲ್ಲಿ ಲವ್‌ಸ್ಟೋರಿ ಇದೆ. ಅದು ರುಚಿಗೆ ತಕ್ಕಷ್ಟು. ಇಡೀ ಸಿನಿಮಾ ನಿಂತಿರೋದು ಮೈಂಡ್‌ಗೇಮ್‌ ಮೇಲೆ. ಆ ಮಟ್ಟಿಗೆ ಅಜೇಯ್‌ ಕೆರಿಯರ್‌ನಲ್ಲಿ ಇದು ಹೊಸ ಬಗೆಯ ಸಿನಿಮಾ ಎಂದರೆ ತಪ್ಪಲ್ಲ. ಕನ್ನಡದಲ್ಲಿ ಈ ಹಿಂದೆ ಇಂತಹ ಸಿನಿಮಾ ಬಂದಿಲ್ಲ ಎಂದಲ್ಲ. ಈ ತರಹದ ಕಣ್ಣಾಮುಚ್ಚಾಲೆಯಾಟದ ಸಿನಿಮಾಗಳು ಬಂದಿವೆ. ಆದರೆ, ಇಲ್ಲಿನ ಕಾನ್ಸೆಪ್ಟ್ ಹಾಗೂ ಸಂದರ್ಭ ಸನ್ನಿವೇಶಗಳು ಭಿನ್ನವಾಗಿವೆ. ಹಾಗಾಗಿ, ಚಿತ್ರ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಶಿವತೇಜಸ್‌ ಎಲ್ಲಾ ವರ್ಗದ ಜನರನ್ನು ಒಮ್ಮೆಲೇ ತೃಪ್ತಿಪಡಿಸಲು ಪ್ರಯತ್ನಿಸಿದ್ದಾರೆ.

ಹಾಗಾಗಿ, ಕುತೂಹಲಕ್ಕೆ ಆಗಾಗ ಬ್ರೇಕ್‌ ಕೊಡಲು ಸಾಧುಕೋಕಿಲ ಕಾಮಿಡಿ ಇದೆ. “ಪಿಕೆ’ ಗೆಟಪ್‌ನಲ್ಲಿ ಬಂದು ಸಾಧು ಕೋಕಿಲ ನಿಮ್ಮನ್ನು ನಗಿಸುತ್ತಾರೆ. ಜೊತೆಗೆ ಅಜೇಯ್‌ ಹಾಗೂ ರವಿಶಂಕರ್‌ ಅವರ ಜಿದ್ದಾಜಿದ್ದಿ ಚಿತ್ರದ ಹೈಲೈಟ್‌. ಈ ನಡುವೆಯೇ ಪೊಲೀಸ್‌ ಆಫೀಸರ್‌ ಕನಸಲ್ಲಿ ಬರೋ ಡಾ.ರಾಜ್‌, ವಿಷ್ಣು, ಶಂಕರ್‌ನಾಗ್‌ ದೃಶ್ಯಗಳು ಗ್ಯಾಪಲ್ಲೊಂದು ನಗುತರಿಸುತ್ತವೆ. ಚಿತ್ರದ ಸಂಭಾಷಣೆಗಳು ಚುರುಕಾಗಿವೆ. ಚಿತ್ರದಲ್ಲಿ ಸಣ್ಣಪುಟ್ಟ ತಪ್ಪುಗಳಿವೆ. ಹಾಗೆಯೇ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ ಕೂಡಾ. ಅವೆಲ್ಲದಕ್ಕೆ ಉತ್ತರ ಹುಡುಕುವ ಗೋಜಿಗೆ ಹೋಗದಿದ್ದರೆ “ಧೈರ್ಯಂ’ ಒಂದು ಪ್ರಯತ್ನವಾಗಿ ಇಷ್ಟವಾಗುತ್ತದೆ.

Advertisement

ಚಿತ್ರದಲ್ಲಿ ಅಜೇಯ್‌ ರಾವ್‌ ಮಧ್ಯಮ ವರ್ಗದ ಹುಡುಗನಾಗಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆರಂಭದಲ್ಲಿ ಜಾಲಿಬಾಯ್‌ ಆಗಿ, ಆ ನಂತರ ದೊಡ್ಡ ವ್ಯಕ್ತಿಗಳನ್ನೇ ಗಿರಗಿರ ತಿರುಗಿಸೋ ಕಿಲಾಡಿಯಾಗಿ ಇಷ್ಟವಾಗುತ್ತಾರೆ. ಇನ್ನು, ಇಡೀ ಸಿನಿಮಾದ ಹೈಲೈಟ್‌ ರವಿಶಂಕರ್‌. ನಾಯಕಿ ಅದಿತಿ ಪ್ರಭುದೇವ ಬೋಲ್ಡ್‌ ಅಂಡ್‌ ಬಬ್ಲಿ ಹುಡುಗಿಯಾಗಿ ಚೆನ್ನಾಗಿ ನಟಿಸಿ ಭವಿಷ್ಯದ ಭರವಸೆ ಮೂಡಿಸಿದ್ದಾರೆ.

ಚಿತ್ರದ ಹೈಲೈಟ್‌ಗಳಲ್ಲಿ ರವಿಶಂಕರ್‌ ಪಾತ್ರ ಕೂಡಾ ಒಂದು. ಇಂಟರ್‌ವಲ್‌ಗೆ ಎಂಟ್ರಿಕೊಡುವ ರವಿಶಂಕರ್‌ ಕ್ಲೈಮ್ಯಾಕ್ಸ್‌ವರೆಗೆ ತಮ್ಮ ವಿಶಿಷ್ಟ ಮ್ಯಾನರೀಸಂ, ಡೈಲಾಗ್‌ಗಳ ಪ್ರೇಕ್ಷಕರಿಗೆ ಹತ್ತಿರವಾಗುತ್ತಾ ಹೋಗಿದ್ದಾರೆ. ಉಳಿದಂತೆ ಜೈ ಜಗದೀಶ್‌, ಶ್ರೀನಿವಾಸ ಪ್ರಭು, ಹೊನ್ನಾವಳ್ಳಿ ಕೃಷ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ. ಎಮಿಲ್‌ ಸಂಗೀತ ನಿರ್ದೇಶನದ ಎರಡು ಹಾಡುಗಳು ಇಷ್ಟವಾಗುತ್ತವೆ. ಶೇಖರ್‌ಚಂದ್ರ ಛಾಯಾಗ್ರಹಣ ಚಿತ್ರಕ್ಕೆ ಪೂರಕ.

ಚಿತ್ರ: ಧೈರ್ಯಂ
ನಿರ್ಮಾಣ: ಡಾ.ಕೆ. ರಾಜು
ನಿರ್ದೇಶನ: ಶಿವತೇಜಸ್‌
ತಾರಾಗಣ: ಅಜೇಯ್‌ ರಾವ್‌, ಅದಿತಿ ಪ್ರಭುದೇವ, ರವಿಶಂಕರ್‌, ಸಾಧು ಕೋಕಿಲ, ಜೈ ಜಗದೀಶ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next