Advertisement
ಸಮಯ ಸಿಕ್ಕಾಗ ಧಾರಾವಾಹಿ ನಿರ್ಮಾಣದಲ್ಲೂ ತೊಡಗಿಕೊಳ್ಳುವ ಯಶಸ್ವಿನಿ, ಪತಿಗೆ ಎಲ್ಲಾ ಸಮಯದಲ್ಲೂ ಸಾಥ್ ಕೊಡುತ್ತಾರೆ. ಎಲ್ಲರಂತೆ ಪತಿ ಜೊತೆ ಹೊರಗಡೆ ಸುತ್ತಾಡುತ್ತಾ ಪಾನಿಪುರಿ ತಿನ್ನಲಾಗುತ್ತಿಲ್ಲ ಎನ್ನುವುದೊಂದು ಬಿಟ್ಟರೆ ಇನ್ಯಾವುದೇ ದೂರುಗಳಿಲ್ಲ. ಇದ್ದುದರಲ್ಲೇ ಹಾಯಾಗಿದ್ದುಬಿಡಬೇಕೆನ್ನುವ ಯಶಸ್ವಿನಿಯವರು ಮನದ ಮಾತುಗಳನ್ನು “ಅವಳು’ ಜೊತೆ ಹಂಚಿಕೊಂಡಿದ್ದಾರೆ…
ಆನಂದ್ ಪ್ರಪೋಸಲ್ ಬಂದಾಗ ನನ್ನ ಫ್ರೆಂಡ್ಸ್ ಎಲ್ಲರೂ ಒಪ್ಕೋಬೇಡ, ಸಿನಿಮಾದವರ ಸಹವಾಸ ಒಳ್ಳೆಯದಲ್ಲ ಅಂತಲೇ ಹೇಳ್ತಾ ಇದ್ರು. ಎಲ್ಲರೂ ಏನು ಹೇಳ್ತಾರೊ ಅದಕ್ಕೆ ವಿರುದ್ಧವೇ ನಡೆದುಕೊಳ್ಳುವ ಅಭ್ಯಾಸ ನನಗೆ. ಹಾಗಾಗಿ ನಾನು ಆನಂದ್‌ರನ್ನೇ ಮದುವೆ ಆಗಬೇಕು ಅಂತ ನಿರ್ಧರಿಸಿದೆ. ಜೊತೆಗೆ, ನನ್ನ ಅಣ್ಣ ಆನಂದ್‌ರ ದೊಡ್ಡ ಫ್ಯಾನ್ ಆಗಿದ್ದ. ಆನಂದ್‌ರ ಪ್ರಪೋಸಲ್ ಬರುತ್ತಲೇ ನನ್ನನ್ನು ಯಾವುದೋ ಹೋಟೆಲ್‌ಗೆ ಕರೆದುಕೊಂಡು ಹೋಗಿ “ನೀನು ಅವರನ್ನೇ ಮದುವೆಯಾಗು. ಖಂಡಿತಾ ಸುಖವಾಗಿರ್ತೀಯ’ ಅಂತ ತಲೆಗೆ ತುಂಬಿದ್ದ. ಹೀಗೆಲ್ಲಾ ಆಗಿ ಅವರನ್ನು ಮದುವೆಯಾಗಲು ಒಪ್ಪಿದ್ದೆ. * ಮದುವೆಗೂ ಮುಂಚಿನ ದಿನಗಳನ್ನು ಹೇಗೆ ಎಂಜಾಯ್ ಮಾಡಿದಿರಿ?
ಅವರ ಕುಟುಂಬದವರು ಜನವರಿಯಲ್ಲಿ ಹೆಣ್ಣು ಕೇಳಲು ನಮ್ಮ ಮನೆಗೆ ಬಂದಿದ್ದರು. ಮಾ.18ಕ್ಕೆ ನಿಶ್ಚಿತಾರ್ಥ ಮತ್ತು ನವೆಂಬರ್‌ನಲ್ಲಿ ಮದುವೆ ಗೊತ್ತು ಮಾಡಿದರು. ನಂಜನಗೂಡಿನಲ್ಲೇ ನಮ್ಮ ಮದುವೆ ನೆರವೇರಬೇಕು ಎಂದು ಇವರ ಮನೆಯವರ ಹರಕೆಯಾಗಿತ್ತು. ನಮ್ಮ ಮದುವೆ ದಿನಾಂಕದಲ್ಲಿ ನಂಜನಗೂಡಿನಲ್ಲಿ ಯಾವ ಛತ್ರಗಳೂ ಸಿಗಲಿಲ್ಲ. ಹಾಗಾಗಿ ನಿಶ್ಚಿತಾರ್ಥಕ್ಕೆ ನಿಗದಿಪಡಿಸಿದ್ದ ದಿನವೇ ಮದುವೆ ಮಾಡಿದರು. ಅಷ್ಟರ ಒಳಗೆ ನಾವು ಕೇವಲ 2 ಬಾರಿಯಷ್ಟೇ ಭೇಟಿಯಾಗಿದ್ದೆವು. ಆನಂದ್ ಆಗ ಸಿನಿಮಾವೊಂದರಲ್ಲಿ ನಟಿಸಬೇಕಿತ್ತು. ಹೀಗಾಗಿ ತುಂಬಾ ಬ್ಯುಸಿ ಇದ್ದರು. ಮೊದಲ ಬಾರಿ “ಕಾರ್ತಿಕ್ ಕಾಲಿಂಗ್ ಕಾರ್ತಿಕ್’ ಸಿನಿಮಾಗೆ ಕರೆದುಕೊಂಡು ಹೋದರು. ಹೋದ ಕೂಡಲೇ ಅವರಿಗೆ ಫೋನ್ ಬಂತು. ಆಚೆ ಎದ್ದು ಹೋದವರು ಸರಿಯಾಗಿ ಇಂಟರ್‌ವಲ್‌ಗೆ ಬಂದು ಎಂಥದೋ ಸ್ನ್ಯಾಕ್ ಕೊಟ್ಟು ಹೋದರು. ಸಿನಿಮಾ ಮುಗಿದ ಮೇಲೆ ಬಂದು ವಾಪಸ್ ಕರೆದುಕೊಂಡು ಹೋಗಿ ಮನೆಗೆ ಬಿಟ್ಟರು!
Related Articles
ಜೀವನದ ಚಿಕ್ಕ ಚಿಕ್ಕ ಖುಷಿಗಳನ್ನು ಕಳೆದುಕೊಂಡಿದ್ದೇನೆ. ಗಂಡನ ಜೊತೆ ರಸ್ತೆ ಬದಿಯಲ್ಲಿ ನಿಂತು ಪಾನಿಪುರಿ ತಿನ್ನುವುದು, ಅವರ ಜೊತೆ ಸಂಜೆ ಆರಾಮಾಗಿ ಒಂದು ವಾಕ್ ಹೋಗಿ ಬರುವುದು ಇಂಥದ್ದೆಲ್ಲಾ ಮಾಡಲು ಆಗಲೇ ಇಲ್ಲ. ಜೊತೆಗೆ ಹೊರಗೆ ಹೋಗುವುದಾದರೆ ಹೆಚ್ಚಾಗಿ ರಾತ್ರಿಯೇ ಹೋಗುತ್ತೇವೆ. ಸೆಲೆಬ್ರಿಟಿಯಾದರೆ ಲಾಭಗಳೂ ಇವೆ. ಯಾವುದಾದರೂ ಬೇರೆ ಊರಿಗೆ ಹೋದಾಗ ಏನಾದರೂ ಸಹಾಯ ಬೇಕಾದಾಗ ಜನರು ಪ್ರೀತಿಯಿಂದ ಕೂಡಲೇ ಸಹಾಯ ಮಾಡುತ್ತಾರೆ.
Advertisement
* ಮದುವೆಯಾದಾಗಿನಿಂದ ಈವೆರೆಗಿನ ನಿಮ್ಮ ಮರೆಯಲಾರದ ಘಳಿಗೆ ಯಾವುದು?ನಾನು ಚಿಕ್ಕ ಮಗು ಇದ್ದಾಗಿನಿಂದ ರವಿಚಂದ್ರನ್‌ರ ದೊಡ್ಡ ಅಭಿಮಾನಿ. ಅವರನ್ನು ನೋಡಬೇಕು, ಅವರ ಜೊತೆ ಫೊಟೊ ತೆಗೆಸಿಕೊಳ್ಳಬೇಕು ಎಂಬುದು ನನ್ನ ದೊಡ್ಡ ಕನಸಾಗಿತ್ತು. ಇವರನ್ನು ಮದುವೆಯಾದಾಗಿನಿಂದ ನಾನು ನನಗೆ ರವಿಚಂದ್ರನ್‌ರನ್ನು ಭೇಟಿ ಮಾಡಿಸಿ ಎಂದು ಕೇಳುತ್ತಲೇ ಇದ್ದೆ. “ಡ್ಯಾನ್ಸಿಂಗ್ ಸ್ಟಾರ್’ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರೇ ಜಡ್ಜ್ ಆಗಿದ್ದರಿಂದ ನಾನು ಕಾರ್ಯಕ್ರಮ ನೋಡಲು ಹೋಗಿದ್ದೆ. ಆಗ ಅವರ ಜೊತೆ ಮಾತನಾಡಿದೆ, ಸೆಲ್ಫಿ ತೆಗೆದುಕೊಂಡೆ. ನನ್ನ ದೀರ್ಘ ಕಾಲದ ಕನಸು ನನಸಾಗಿದ್ದು ಮರೆಯಲಾರದ ಸಂದರ್ಭ. * ಮದುವೆಯಾದ ಮೇಲೆ ಅಡುಗೆ ಮನೆಯಲ್ಲಿ ಏನಾದರೂ ಯಡವಟ್ ಮಾಡಿಕೊಂಡಿದ್ದೀರಾ?
ನನಗೆ ಮದುವೆ ಗೊತ್ತಾದಾಗ ಕೇವಲ 19 ವರ್ಷ ವಯಸ್ಸು. ಫೈನಲ್ ಇಯರ್ ಡಿಗ್ರಿಯಲ್ಲಿದ್ದೆ. ನಮ್ಮ ಮನೆಯಲ್ಲಿ ಅಡುಗೆ ಮನೆಗೆ ಕಾಲಿಟ್ಟವಳೇ ಅಲ್ಲ. ಹೀಗಾಗಿ ಮದುವೆಯಾಗಿ ನಮ್ಮವರ ಮನೆಗೆ ಬಂದಾಗ ಸ್ವಲ್ಪವೂ ಅಡುಗೆ ಬರುತ್ತಿರಲಿಲ್ಲ. ಒಮ್ಮೆ ನಮ್ಮತ್ತೆ ನನಗೆ ಮಿಕ್ಸಿಯಲ್ಲಿ ಚಟ್ನಿ ರುಬ್ಬಲು ಹೇಳಿದರು. ಜಾರಿಗೆ ಎಲ್ಲಾ ಪದಾರ್ಥಗಳನ್ನು ಅವರೇ ಹಾಕಿ. ಒಂದು ಲೋಟದ ತುಂಬ ನೀರು ಕೊಟ್ಟರು. ನನಗೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚಟ್ನಿ ರುಬ್ಬಬೇಕು ಅಂತ ಗೊತ್ತಿರಲಿಲ್ಲ. ಅಷ್ಟು ನೀರನ್ನೂ ಒಟ್ಟಿಗೇ ಹಾಕಿ ಮಿಕ್ಸರ್ ಆನ್ ಮಾಡಿದೆ. ಚಟ್ನಿ ಹೋಗಿ ಅದು ಸಾರು ಆಗಿತ್ತು. ಆಮೇಲೆ ನಮ್ಮ ಮಾವ ಪ್ರತಿದಿನ ಅಡುಗೆ ಮಾಡಲು ಹೇಳಿಕೊಟ್ಟರು. ನನಗೆ ದೋಸೆ ಹುಯ್ಯಲು ಹೇಳಿಕೊಟ್ಟಿದ್ದು ನನ್ನ ಮೈದುನ. ಈಗಲೂ ದೋಸೆ ಹುಯ್ಯುವಾಗ ಆತನನ್ನು ನೆನೆಸಿಕೊಳ್ತೀನಿ. * ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತೀರಿ?
ನನಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಫ್ರೀಸ್ಟೈಲ್ ಡಾನ್ಸ್ ಕಲಿಯುತ್ತಿದ್ದೇನೆ. ಅದು ಬಿಟ್ಟರೆ, ಇಂಟರ್‌ನೆಟ್ ನೋಡಿಕೊಂಡು ಬೇರೆಬೇರೆ ಬಗೆಯ ಅಡುಗೆ ಟ್ರೈ ಮಾಡ್ತೀನಿ. * ರೋಬೊ ಫ್ಯಾಮಿಲಿಯ ಕಾರ್ಯಕಾರಿ ನಿರ್ಮಾಪಕಿಯಾದ ಅನುಭವ ಹೇಗಿತ್ತು?
ಸಿನಿಮಾ, ಧಾರಾವಾಹಿ ಹಿನ್ನೆಲೆಯಿಲ್ಲದ ನನಗೆ “ರೋಬೊ ಫ್ಯಾಮಿಲಿ’ ಧಾರಾವಾಹಿಯ ಕಾರ್ಯಕಾರಿ ನಿರ್ಮಾಪಕಿಯಾಗಿದ್ದು ದೊಡ್ಡ ಸವಾಲೇ ಆಗಿತ್ತು. ಪ್ರತಿದಿನ ಶೂಟಿಂಗ್ ಸೆಟ್‌ಗೆ ಹೋಗಿ ಕೂರಬೇಕಿತ್ತು. ಹಣಕಾಸಿನ ನಿರ್ವಹಣೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಶೂಟಿಂಗ್‌ಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಕೆಲವೊಮ್ಮೆ ಲೆಕ್ಕ ತಪ್ಪುತ್ತಿದ್ದೆ. ಎಷ್ಟೋ ಬಾರಿ ಚೆಕ್‌ಗೆ ಸಹಿ ಹಾಕದೆಯೇ ಕಳಿಸಿಕೊಡುತ್ತಿದ್ದೆ. ಏನೇ ಅಚಾತುರ್ಯ ಮಾಡಿದರೂ ಆನಂದ್ ಯಾವತ್ತೂ ಕೋಪಿಸಿಕೊಂಡು ಬೈಯುತ್ತಿರಲಿಲ್ಲ. ಅಲ್ಲಿ ಧಾರಾವಾಹಿ ನಿರ್ಮಾಣದ ಕುರಿತು ಅನೇಕ ವಿಷಯಗಳನ್ನು ತಿಳಿದುಕೊಂಡೆ. ಆರ್ಕುಟ್‌ನಲ್ಲಿ ಪರಿಚಯ: ನಮ್ಮ ಮದುವೆ, ನನಗೆ ಅರೇಂಜ್ಡ್ ಮ್ಯಾರೇಜ್. ಆದರೆ ಆನಂದ್‌ಗೆ ಲವ್ ಮ್ಯಾರೇಜ್. ಹಾಗಾಗಿ ನಮ್ಮದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಈಗೆಲ್ಲಾ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ, ಲವ್ ಆಗಿ ಮದುವೆಯಾಗುವುದು ಸಾಮಾನ್ಯ. ಆದರೆ ನಮ್ಮದು ಆರ್ಕುಟ್(ಫೇಸ್‌ಬುಕ್‌ಗೂ ಮುಂಚೆ ಚಾಲ್ತಿಯಲ್ಲಿದ್ದ ಸಾಮಾಜಿಕ ಜಾಲತಾಣ) ಲವ್. ನಾನು ಆನಂದ್ ಆರ್ಕುಟ್‌ನಲ್ಲಿ ಫ್ರೆಂಡ್ಸ್ ಆಗಿದ್ದೆವು. ನನ್ನನ್ನು ಆರ್ಕುಟ್‌ನಲ್ಲಿ ನೋಡಿಯೇ ಅವರಿಗೆ ಲವ್ ಆಯಿತಂತೆ. ನನ್ನ ವಿವರಗಳನ್ನು ಪಡೆದು ನಮ್ಮ ಮನೆಗೆ ಮದುವೆ ಪ್ರಪೋಸಲ್ ಕೊಟ್ಟರು. ಮನೆಯವರೂ ಒಪ್ಪಿ ಮದುವೆ ಮಾಡಿದರು. ಸರ ಅಂತ ತಿಳಿದು ಸೊಂಟದ ಪಟ್ಟಿ ತಂದು ಕೊಟ್ಟಿದ್ದರು!: ನನ್ನ ಗಂಡನಷ್ಟು ಚೆನ್ನಾಗಿ ಸರ್‌ಪ್ರೈಸ್ ಕೊಡುವವರು ಬೇರೆ ಯಾರೂ ಇಲ್ಲ ಅನ್ನಿಸುತ್ತೆ. ಆದರೆ ಯಾವತ್ತೂ ಕಾಡಿಸದೇ ಸರ್‌ಪ್ರೈಸ್ ಕೊಡಲ್ಲ. ಒಮ್ಮೆ ಕೇಕ್‌ನಲ್ಲಿ ಪೆಂಡೆಂಟ್ ಇಟ್ಟು “ಗಿಫ್ಟ್ ನಿನ್ನ ಹತ್ತಿರವೇ ಇದೆ, ನೀನೇ ಹುಡುಕಿಕೋ ಎಂದಿದ್ದರು. ಮತ್ತೂಮ್ಮೆ 7- 8 ಡಬ್ಬಿಗಳನ್ನು ಒಂದರೊಳಗೆ ಒಂದು ಇರಿಸಿ ಕಡೇ ಡಬ್ಬಿಯಲ್ಲಿ ಗಿಫ್ಟ್ ಎಲ್ಲಿ ಇದೆ ಎಂಬ ಕುರುಹನ್ನು ಒಂದು ಚೀಟಿಯಲ್ಲ ಬರೆದಿದ್ದರು. ಇತ್ತೀಚೆಗೆ ಅವರು ನನಗೆ, ಮಗನಿಗೆ, ಮಗಳಿಗೆ, ಮೂವರಿಗೂ ಬೆಳ್ಳಿ ಉಡುಗೊರೆ ತಂದಿದ್ದರು. “ನಿನಗೆ ತೂಕದ ಗಿಫ್ಟ್ ತಂದಿದ್ದೀನಿ ತಗೋ’ ಎಂದು ಕೊಟ್ಟರು. ನೋಡಿದರೆ ಅದು ಸೊಂಟದ ಪಟ್ಟಿ! ನಾನು “ಸೊಂಟದ ಪಟ್ಟಿ ಹಾಕಲ್ಲ ಅಂತ ಗೊತ್ತಿದ್ದರೂ ಏಕೆ ತಂದಿರಿ?’ ಎಂದು ಕೇಳಿದೆ. ಪಾಪ.. ಅವರಿಗೆ ಅದು ಸೊಂಟದ ಪಟ್ಟಿ ಅಂತಲೇ ಗೊತ್ತಿರಲಿಲ್ಲವಂತೆ. ದೊಡ್ಡ ಸರ ಅಂತ ನನಗೆ ತಂದುಕೊಟ್ಟಿದ್ದರು. ಸೆಲೆಬ್ರಿಟಿಗಳಿಂದ ದೂರ: ಸೆಲೆಬ್ರಿಟಿಯ ಹೆಂಡತಿಯಾಗಿರುವುದರಿಂದ ಹಲವಾರು ಸೆಲೆಬ್ರಿಟಿಗಳು ನನಗೆ ಪರಿಚಯ ಇರುತ್ತಾರೆ. ಹಲವಾರು ಕಾರ್ಯಕ್ರಮಗಳಿಗೆ ನಾನು ಹೋಗುತ್ತೇನೆ ಎಂದೇ ತುಂಬಾ ಜನ ತಿಳಿದಿರುತ್ತಾರೆ. ಆದರೆ ನಾನು ಪಾರ್ಟಿ, ಸೆಲೆಬ್ರಿಟಿ ಕಾರ್ಯಕ್ರಮಗಳಿಂದ ಸಂಪೂರ್ಣ ದೂರ ಇರುತ್ತೇನೆ. ನನಗೆ ಸೆಲೆಬ್ರಿಟಿಗಳೆಲ್ಲಾ ಸೇರುವ ಸ್ಥಳಕ್ಕೆ ಹೋಗಲು ಅದೇನೋ ಒಂಥರಾ ಮುಜುಗರ. ಮೊದಮೊದಲು ಆನಂದ್ ತುಂಬಾ ಒತ್ತಾಯ ಮಾಡುತ್ತಿದ್ದರು. ನಾನು ಅಂಥ ಕಡೆಗಳಲ್ಲೆಲ್ಲಾ ಆರಾಮಾಗಿ ಇರುವುದಿಲ್ಲ ಎಂದು ತಿಳಿದು ಈಗ ಒತ್ತಾಯ ಮಾಡುವುದನ್ನೇ ಬಿಟ್ಟಿದ್ದಾರೆ. ಭಾರತಿ ವಿಷ್ಣುವರ್ಧನ್ ಆರಂಭಿಸಿರುವ ಕರೋಕೆ ಕ್ಲಬ್‌ಗ ಆನಂದ್ ಸದಸ್ಯರಾಗಿರುವುದರಿಂದ ಪ್ರತಿ ತಿಂಗಳ ಎರಡನೇ ಶನಿವಾರ ಅಲ್ಲಿಗೆ ಹೋಗುತ್ತೇನೆ, ಅಷ್ಟೇ. ಅಚಿಂತ್ಯನನ್ನು ನೋಡಿ 2ನೇ ಮಗು ಮಾಡಿಕೊಳ್ಳಲು ನಿರ್ಧರಿಸಿದೆವು…: ಡ್ರಾಮ ಜ್ಯೂನಿಯರ್ ಸೀಸನ್-1 ನಡೆಯುವ ವೇಳೆ ಸ್ಪರ್ಧಿ ಅಚಿಂತ್ಯ, ಆನಂದ್‌ರನ್ನು ತುಂಬಾ ಹಚ್ಚಿಕೊಂಡಿದ್ದ. ಆತ ನಮ್ಮ ಮನೆಗೂ ಬಂದಿದ್ದ. ನನ್ನ ಮಗನ ವಯಸ್ಸಿನವನೇ ಆತ. ನನ್ನ ಮಗ ಕೂಡ ಅವರಪ್ಪನ್ನ ಅಷ್ಟು ಮುದ್ದು ಮಾಡಲ್ಲ, ಅಚಿಂತ್ಯ ಆನಂದ್‌ರನ್ನು ಅಷ್ಟು ಮುದ್ದಿಸುತ್ತಿದ್ದ. ನಮ್ಮ ಮಗನ ಜೊತೆ ಬೇಗ ಹೊಂದಿಕೊಂಡು ಆಟವಾಡಲು ಆರಂಭಿಸಿದ. ಆತ ನಮ್ಮ ಮನೆಯಲ್ಲಿ ಮತ್ತೂಬ್ಬ ಮಗನಂತೆ ಆಟವಾಡಿಕೊಂಡು, ಓಡಾಡಿಕೊಂಡಿರುವುದನ್ನು ನೋಡಿ ನನಗೆ ಮತ್ತೂಂದು ಮಗು ಮಾಡಿಕೊಳ್ಳಬೇಕು ಅಂತ ಬಯಕೆಯಾಯಿತು. ನಾವು ಮತ್ತೂಂದು ಮಗು ಮಾಡಿಕೊಳ್ಳುವ ತೀರ್ಮಾನ ತೆಗೆದುಕೊಳ್ಳಲು ಅಚಿಂತ್ಯನೇ ಸ್ಫೂರ್ತಿ ಎಂದರೆ ತಪ್ಪಿಲ್ಲ. * ಚೇತನ ಜೆ.ಕೆ.