ಈಗಾಗಲೇ ಕಿರುತೆರೆಯಲ್ಲಿ ಯಶಸ್ವಿ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿರುವ ಜೀ ಕನ್ನಡ ವಾಹಿನಿ, ಇದೀಗ ಹೊಸದೊಂದು ಧಾರಾವಾಹಿ ಪ್ರಸಾರ ಮಾಡಲು ಸಜ್ಜಾಗಿದೆ. ಈ ಬಾರಿ ಹಾರರ್ ಕಥೆಯೊಂದಿಗೆ ಕಿರುತೆರೆ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನಕ್ಕೆ ಕೈ ಹಾಕಿದೆ.
ಈಗಾಗಲೇ “ನಾಗಿಣಿ’, “ಗಂಗಾ’, “ಬ್ರಹ್ಮಗಂಟು’, “ಜೋಡಿ ಹಕ್ಕಿ’, “ಪತ್ತೆದಾರಿ ಪ್ರತಿಭಾ’, “ಸುಬ್ಬಲಕ್ಷಿ ಸಂಸಾರ’ ಹೀಗೆ ಒಂದಷ್ಟು ಹೊಸತನದ ಧಾರಾವಾಹಿಗಳನ್ನು ಕೊಟ್ಟಿರುವ ಜೀ ಕನ್ನಡ ವಾಹಿನಿ, ಈಗ ಅವುಗಳ ಸಾಲಿಗೆ “ನಿಗೂಢ ರಾತ್ರಿ’ ಎಂಬ ಹಾರರ್ ಧಾರಾವಾಹಿ ಕೊಡುತ್ತಿದೆ. ಜುಲೈ 17ರಿಂದ ಶುರುವಾಗುವ ಈ ಧಾರಾವಾಹಿ, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ.
ಇದೇ ಮೊದಲ ಸಲ ಹಾರರ್ ಧಾರಾವಾಹಿ ನಿರ್ದೇಶನ ಮಾಡುತ್ತಿರುವುದು ಮಾಸ್ಟರ್ ಆನಂದ್. ಈಗಾಗಲೇ ಜೀ ವಾಹಿನಿಯಲ್ಲಿ ಮೂಡಿಬಂದ “ಡ್ರಾಮಾ ಜ್ಯೂನಿಯರ್’ ಮತ್ತು “ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಷೋ ಮೂಲಕ ಗಮನಸೆಳೆದಿರುವ ಆನಂದ್, ತಮ್ಮ “ನಿಗೂಢ ರಾತ್ರಿ’ಯ ಪ್ರೋಮೋವೊಂದನ್ನು ಬಿಡುಗಡೆ ಮಾಡುವ ಮೂಲಕ ಹೊಸ ನಿರೀಕ್ಷೆ ಹೆಚ್ಚಿಸಿದ್ದಾರೆ.
ಮಲೆನಾಡ ಸುಂದರ ಹಳ್ಳಿಯ ಆಗರ್ಭ ಶ್ರೀಮಂತ ಸೂರ್ಯನಾರಾಯಣ ಮನೆಯಲ್ಲಿ ನಡೆಯುವ ಹಲವು ವಿಚಿತ್ರ ಘಟನೆಗಳನ್ನು “ನಿಗೂಢರಾತ್ರಿ’ ಹೇಳಲಿದೆ. ಸೂರ್ಯನಾರಾಯಣ ಮತ್ತು ಆತನ ಆರು ಜನ ಮಕ್ಕಳು ವಾಸವಾಗಿರುವ ಆ ಮನೆಯಲ್ಲಿ ಸರಣಿಯಂತೆ ಒಂದರ ಮೇಲೊಂದು ಕೆಲ ಘಟನೆಗಳು ನಡೆಯುತ್ತವೆ. ಆ ಮನೆಯಲ್ಲಿ ಸೂರ್ಯನಾರಾಯಣ ಸಾವಿಗೀಡಾಗುತ್ತಾರೆ.
ಆ ಮನೆ ಸುತ್ತುತ್ತಿದ್ದ ಪ್ರೇತಾತ್ಮ ಸೂರ್ಯ ನಾರಾಯಣನನ್ನು ಬಲಿ ತೆಗೆದುಕೊಂಡಿದೆ ಎಂದು ನಂಬುವ ಮನೆಯವರು, ಆ ಎಲ್ಲಾ ಸಮಸ್ಯೆಗಳಿಂದ ಹೇಗೆ ಪಾರಾಗುತ್ತಾರೆ ಎಂಬುದು ಕಥೆ. ಅಂದಹಾಗೆ, ಈ “ನಿಗೂಢ ರಾತ್ರಿ’ ಧಾರಾವಾಹಿಯನ್ನು ಜೋನಿ ಫಿಲ್ಮ್ಸ್ಸಂಸ್ಥೆಯು ನಿರ್ಮಿಸುತ್ತಿದೆ. ಕಿರುತೆರೆ ಮತ್ತು ರಂಗಭೂಮಿ ಕಲಾವಿದರು, ತಂತ್ರಜ್ಞರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.