ಹೊಸದಿಲ್ಲಿ: ದೇಶವು ಕಳೆದ ಒಂಬತ್ತು ವರ್ಷಗಳಲ್ಲಿ ಉದ್ಯೋಗಾವಕಾಶಗಳಲ್ಲಿ ಭಾರಿ ಹೆಚ್ಚಳವನ್ನು ಕಂಡಿದೆ ಮತ್ತು 2014 ರಿಂದ ಸುಮಾರು 1.25 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಅವರು ಗುರುವಾರ ಹೇಳಿಕೆ ನೀಡಿದ್ದಾರೆ.
ಕಳೆದ ಒಂಬತ್ತು ವರ್ಷಗಳ ಕಾರ್ಮಿಕ ಸಚಿವಾಲಯದ ಸಾಧನೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಯಾದವ್, ಸಚಿವಾಲಯವು ಮಾಡಿದ ಹಲವಾರು ಸಂಸ್ಥೆ-ಆಧಾರಿತ ಕಾರ್ಮಿಕ ಸಮೀಕ್ಷೆಗಳನ್ನು ಉಲ್ಲೇಖಿಸಿದ ಯಾದವ್, 2014 ರಿಂದ 2022 ರ ಅವಧಿಯಲ್ಲಿ ಉದ್ಯೋಗದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ ಎಂದರು.
“ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾವು ಸೇವೆ, ಉತ್ತಮ ಆಡಳಿತ, ಕಲ್ಯಾಣ ಎಂಬ ಮೂರು ವಿಷಯಗಳ ಮೇಲೆ ಕೇಂದ್ರೀಕರಿಸಿದ್ದೇವೆ. ನಾವು ಸೇವೆ ಮತ್ತು ‘ಸಬ್ಕಾ ಸಾಥಾ ಸಬ್ಕಾ ವಿಕಾಸ್’ ಬಗ್ಗೆ ಮಾತನಾಡುವಾಗ ದೇಶದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಕುರಿತಾಗಿ ಕಾಳಜಿ ವಹಿಸಿದ್ದೇವೆ ಎಂದು ನೀವು ನೆನಪಿಸಿಕೊಳ್ಳಬಹುದು ”ಎಂದು ಹೇಳಿದರು.
“ನೀವು ಇಪಿಎಫ್‌ಒ ಡೇಟಾವನ್ನು ನೋಡಿದರೆ, ಪಿಂಚಣಿದಾರರ ಸಂಖ್ಯೆ (ನೌಕರರ ಪಿಂಚಣಿ ಯೋಜನೆ 1995 ರ ಅಡಿಯಲ್ಲಿ) 2014-15 ರಲ್ಲಿ 51 ಲಕ್ಷದಿಂದ 2021-22 ರಲ್ಲಿ 72 ಲಕ್ಷಕ್ಕೆ ಏರಿದೆ. ನೀವು ನೋಡಿದರೆ ಸುಮಾರು 22 ಲಕ್ಷ ಜನರು ನಿವೃತ್ತರಾಗಿದ್ದರೂ ಇಪಿಎಫ್‌ಒ ನಡೆಸುತ್ತಿರುವ ಸಾಮಾಜಿಕ ಭದ್ರತಾ ಯೋಜನೆಯಡಿ ನೋಂದಣಿ ಹೆಚ್ಚಾಗಿದೆ” ಎಂದು ವಿವರಿಸಿದರು.
2014-15ರಲ್ಲಿ ಒಟ್ಟು ನೋಂದಾಯಿತ ಚಂದಾದಾರರ ಸಂಖ್ಯೆ 15.84 ಕೋಟಿಯಾಗಿದ್ದು, 2021-22ರಲ್ಲಿ 27.73 ಕೋಟಿಗೆ ಏರಿಕೆಯಾಗಿದೆ ಎಂದು ಇಪಿಎಫ್‌ಒ ಅಂಕಿಅಂಶಗಳು ತೋರಿಸಿವೆ. ಈ ವಾರದ ಆರಂಭದಲ್ಲಿ ಬಿಡುಗಡೆಯಾದ EPFO ಯ ಇತ್ತೀಚಿನ ವೇತನದಾರರ ಡೇಟಾವನ್ನು ಅವರು ಉಲ್ಲೇಖಿಸಿದ್ದಾರೆ, ಇದು ಈ ವರ್ಷದ ಏಪ್ರಿಲ್‌ನಲ್ಲಿ 17.20 ಲಕ್ಷ ನಿವ್ವಳ ಹೊಸ ಸದಸ್ಯರ ಸೇರ್ಪಡೆಯಾಗಿದೆ ಎಂದು ತೋರಿಸಿದೆ.
ಅಂಕಿ ಅಂಶಗಳ ಪ್ರಕಾರ, EPFO ನೊಂದಿಗೆ ಹೊಸ ಸದಸ್ಯರ ದಾಖಲಾತಿ 2022-23 ರಲ್ಲಿ 1.38 ಕೋಟಿ, 2021-22 ರಲ್ಲಿ 1.22 ಕೋಟಿ ಮತ್ತು 2020-21 ರಲ್ಲಿ 77.08 ಲಕ್ಷ. 2019-20 ರಲ್ಲಿ (ಕೋವಿಡ್ ಪೂರ್ವ) ಸುಮಾರು 78.58 ಲಕ್ಷ ಮತ್ತು 2018-19 ರಲ್ಲಿ 61.12 ಲಕ್ಷ ಸದಸ್ಯರನ್ನು ಸೇರಿಸಲಾಗಿದೆ.