ಗಾಝಿಯಾಬಾದ್: ಎಲ್‍ಇಡಿ ಟಿವಿ ಸ್ಫೋಟಗೊಂಡು ಹದಿನಾರು ವರ್ಷದ ಬಾಲಕನೊಬ್ಬ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್‍ನಲ್ಲಿ ನಡೆದಿದೆ.
ಓಮೇಂದ್ರ ಸಾವನ್ನಪ್ಪಿದ ದುರ್ದೈವಿ. ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಏಕಾಏಕಿ ಸ್ಫೋಟಗೊಂಡಿದ್ದು ಬಾಲಕ ಗಂಭೀರ ಗಾಯಗೊಂಡು ಸಾವನ್ನಪ್ಪಿದರೆ ಬಾಲಕನ ತಾಯಿ, ಅತ್ತಿಗೆ ಹಾಗೂ ಬಾಲಕನ ಸ್ನೇಹಿತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಸ್ಫೋಟ ಎಷ್ಟು ತೀವ್ರವಾಗಿತ್ತು ಎಂದರೆ ಮನೆಯ ಕಾಂಕ್ರೀಟ್ ಸ್ಲ್ಯಾಬ್ ಹಾಗೂ ಗೋಡೆಯ ಒಂದು ಭಾಗ ಸ್ಫೋಟದ ರಭಸಕ್ಕೆ ಕುಸಿದು ಹೋಗಿದೆ.
ನೆರೆಮನೆಯಲ್ಲಿ ದೊಡ್ಡ ಸದ್ದು ಕೇಳಿ ಸಿಲಿಂಡರ್ ಸ್ಫೋಟ ಗೊಂಡಿರಬೇಕು ಎಂದು ಓಡಿ ಬಂದು ನೋಡುವಷ್ಟರಲ್ಲಿ ಮನೆಯ ಗೋಡೆಗೆ ಅಳವಡಿಸಿದ್ದ ಎಲ್ ಇಡಿ ಟಿವಿ ಸ್ಪೋಟಗೊಂಡಿರುವುದು ಗೊತ್ತಾಗಿದೆ ಎಂದು ನೆರೆಮನೆಯವರು ಹೇಳಿದ್ದಾರೆ.
ಎಲ್‌ಇಡಿ ಟಿವಿ ಸ್ಫೋಟಗೊಂಡಾಗ ಓಮೇಂದ್ರ ಅವರ ತಾಯಿ, ಸೊಸೆ ಮತ್ತು ಅವರ ಸ್ನೇಹಿತ ಕರಣ್ ಕೋಣೆಯಲ್ಲಿದ್ದರು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಓಮೇಂದ್ರ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಸ್ಪೋಟ ತುಂಬಾ ಶಕ್ತಿಯುತವಾಗಿತ್ತು, ಸ್ಪೋಟಗೊಂಡ ವೇಳೆ ಇಡೀ ಮನೆಯೇ ನಡುಗಿತ್ತು, ಅಲ್ಲದೆ ಮನೆಯ ಗೋಡೆಯ ಒಂದು ಭಾಗವು ಕುಸಿದಿದೆ ಎಂದು ಮನೆಮಂದಿ ಹೇಳಿದ್ದಾರೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ : ನಾಲ್ವರು ಭಯೋತ್ಪಾದಕರ ಹತ್ಯೆ