Advertisement

ಹೆಣ್ಣು ಮಕ್ಕಳ ಸುರಕ್ಷತೆಗೆ ವಿದ್ಯಾರ್ಥಿಗಳಿಂದ ಬೃಹತ್‌ ಜಾಗೃತಿ ಜಾಥಾ

11:10 AM Nov 13, 2021 | Team Udayavani |

ಕಲಬುರಗಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ಪೋಕ್ಸೋ ಕಾಯ್ದೆ ಮತ್ತು ಪ್ರೌಢಾವಸ್ಥೆ ಹೆಣ್ಣು ಮಕ್ಕಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಶುಕ್ರವಾರ ನಗರ ಪೊಲೀಸ್‌ ಆಯುಕ್ತಾಲಯದಿಂದ ನಗರದಲ್ಲಿ ಬೃಹತ್‌ ಜಾಥಾ ನಡೆಯಿತು.

Advertisement

ಪೊಲೀಸ್‌ ಆಯುಕ್ತರ ಕಚೇರಿ ಮುಂಭಾಗದಲ್ಲಿ ಉಪ ಪೊಲೀಸ್‌ ಆಯುಕ್ತ ಅಡ್ಡೂರು ಶ್ರೀನಿವಾಸಲು ಹಸಿರುವ ನಿಶಾನೆ ತೋರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಅಲ್ಲಿಂದ ಜಗತ್‌ ವೃತ್ತದ ಮಾರ್ಗವಾಗಿ ಸಿದ್ಧಿಪಾಷಾ ದರ್ಗಾ, ಕೆಬಿಎನ್‌ ಆಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದ ವರೆಗೂ ಜಾಥಾ ಸಾಗಿತು. ಜಾಥಾದಲ್ಲಿ ಶಾಲೆ-ಕಾಲೇಜುಗಳ ವಿದ್ಯಾರ್ಥಿನಿಯರು ಭಾಗಿಯಾಗಿ ಜಾಗೃತಿ ಸಂದೇಶಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರು. ಜಾಥಾದುದ್ದಕ್ಕೂ ವಿದ್ಯಾರ್ಥಿನಿಯರು ಜಾಗೃತಿ ಫಲಕ ಪ್ರದರ್ಶಿಸಿ, ಹಲವು ಘೋಷಣೆ ಕೂಗಿದರು. ಮಾರ್ಗ ಮಧ್ಯದಲ್ಲಿ ಜಾಗೃತಿಯ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು, ಜಾಥಾಕ್ಕೆ ಚಾಲನೆ ನೀಡಿದ ಬಳಿಕ ಡಿಸಿಪಿ ಎ. ಶ್ರೀನಿವಾಸುಲು ಮಾತನಾಡಿ, ವಿದ್ಯಾರ್ಥಿನಿಯರು, ಯುವತಿಯರು, ಉದ್ಯೋದಲ್ಲಿರುವ ಮಹಿಳೆಯರು ತಮ್ಮ ವೈಯಕ್ತಿಕ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಪ್ರಯಾಣಿಸುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತರು ನೀಡಿದ ತಿಂಡಿ, ಯಾವುದೇ ವಸ್ತು ಪಡೆದುಕೊಳ್ಳಬಾರದು. ಸಾಮಾಜಿಕ ಜಾಲತಾಣಗಳನ್ನು ಜಾಗೃತಿಯಿಂದ ಮಿತವಾಗಿ ಬಳಸಬೇಕು. ಶಾಲೆ-ಕಾಲೇಜುಗಳಲ್ಲಿ ಯಾರಾದರೂ ಅಸಭ್ಯವಾಗಿ ವರ್ತಿಸಿದರೆ ಶಿಕ್ಷಕರ ಗಮನಕ್ಕೆ ತರಬೇಕು. ಅನಾಮೇಧೆಯ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಪಿಎಸ್‌ಐ ಯಶೋಧಾ ಕಟಕೆ ಮಾತನಾಡಿ, ಪೋಷಕರು ಹೆಣ್ಣುಮಕ್ಕಳ ಮೇಲೆ ನಿಗಾ ಇರಿಸಬೇಕು. ಮಕ್ಕಳೊಂದಿಗೆ ಸ್ನೇಹಿತರಂತೆ ಇರುವ ಮೂಲಕ ಅವರ ನೋವು-ನಲಿವುಗಳಿಗೆ ಸ್ಪಂದಿಸಬೇಕು. ಹೆಣ್ಣು ಮಕ್ಕಳು ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿದರೆ ಪೊಲೀಸರು ನಿಮ್ಮ ರಕ್ಷಣೆಗೆ ಆಗಮಿಸುತ್ತಾರೆ ಎಂದರು.

Advertisement

ಜಾಥಾದಲ್ಲಿ ಮೊಬೈಲ್‌ ಗಳಲ್ಲಿ ಅಪರಿಚಿತರೊಂದಿಗೆ ಯಾವುದೇ ಸಂದೇಶ ಶೇರ್‌ ಮಾಡಿಕೊಳ್ಳಬಾರದು. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಜಾಗೃತಿಗೊಳಿಸುವುದು ಅಗತ್ಯವಾಗಿದೆ. ಹೆಣ್ಣು ಮಕ್ಕಳು ಸದಾ ಜಾಗರೂಕರಾಗಿ ಇರಬೇಕು ಮತ್ತು ರಕ್ಷಣಾ ಕಲೆಗಳನ್ನು ಕಲಿತುಕೊಳ್ಳಬೇಕೆಂದು ಅರಿವು ಮೂಡಿಸಲಾಯಿತು. ಉತ್ತರ ಉಪ ವಿಭಾಗದ ಎಸಿಪಿ ದೀಪನ್‌, ಸಬ್‌ ಅರ್ಬನ್‌ ಉಪ ವಿಭಾಗದ ಎಸಿಪಿ ಜೆ.ಎಚ್‌. ಇನಾಮದಾರ, ಇನ್‌ಸ್ಪೆಕ್ಟರ್‌ಗಳಾದ ಪಂಡಿತ್‌ ಸಗರ, ಸಿದ್ಧರಾಮೇಶ ಗಡದ್‌, ಶಾಂತಿನಾಥ, ಭಾಸು ಚವ್ಹಾಣ, ರಾಘವೇಂದ್ರ, ದಿಲೀಪ್‌ ಸಾಗರ, ಸಂತೋಷ ತಟ್ಟೆಪಳ್ಳಿ, ಪಿಎಸ್‌ಐಗಳಾದ ಭಾರತಿಬಾಯಿ ಧನ್ನಿ, ಸಾವಿತ್ರಮ್ಮ, ಶ್ರೀಶೈಲಮ್ಮ, ಕಾಶಿಬಾಯಿ ಹಾಗೂ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next