Advertisement

ಅಸ್ಸಾಂನಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ರಕ್ಷಣಾ ತಂಡ; ಪ್ರವಾಹಕ್ಕೆ ಮತ್ತೆ 4 ಬಲಿ

07:11 PM May 22, 2022 | Team Udayavani |

ಗುವಾಹಟಿ/ನವದೆಹಲಿ: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮಳೆ ಹಾಗೂ ಪ್ರವಾಹದ ಅಬ್ಬರ ಮುಂದುವರಿದಿದ್ದು, ಮತ್ತಷ್ಟು ಪ್ರದೇಶಗಳಿಗೆ ನೀರು ನುಗ್ಗತೊಡಗಿದೆ.

Advertisement

ಭಾನುವಾರ ಮತ್ತೆ ನಾಲ್ವರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 18ಕ್ಕೇರಿದೆ. ನೆರೆಯ ತೀವ್ರತೆ ಹೆಚ್ಚುತ್ತಿರುವಂತೆಯೇ ಕಾರ್ಯಾಚರಣೆಗಿಳಿದಿರುವ ಭಾರತೀಯ ವಾಯುಪಡೆಯು ಹಗಲುರಾತ್ರಿಯೆನ್ನದೇ ರಕ್ಷಣಾ ಕಾರ್ಯ ನಡೆಸುತ್ತಿದೆ.

ಪ್ರವಾಹದಿಂದಾಗಿ ಸಂಪರ್ಕ ಕಡಿತಗೊಂಡಿರುವ ಪ್ರತಿಯೊಂದು ಗ್ರಾಮಕ್ಕೂ ತೆರಳಿ, ಜನರನ್ನು ಏರ್‌ಲಿಫ್ಟ್ ಮಾಡುವ ಕೆಲಸವನ್ನು ವಾಯುಪಡೆ ಹೆಲಿಕಾಪ್ಟರ್‌ಗಳು ಮಾಡುತ್ತಿವೆ. ಜತೆಗೆ, ಆಹಾರದ ಪ್ಯಾಕೆಟ್‌ಗಳು, ಪರಿಹಾರ ಸಾಮಗ್ರಿಗಳನ್ನು ತಲುಪಿಸುತ್ತಿವೆ.

ಯಾರಿಂದ ಕಾರ್ಯಾಚರಣೆ?:
ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕಾಗಿ ವಾಯುಪಡೆಯು ಎಎನ್‌-32 ಸಾರಿಗೆ ವಿಮಾನ, 2 ಎಂಐ-17 ಹೆಲಿಕಾಪ್ಟರ್‌ಗಳು, ಒಂದು ಚಿನೂಕ್‌ ಕಾಪ್ಟರ್‌, ಒಂದು ಎಎಲ್‌ಎಚ್‌ ಧ್ರುವ ಕಾಪ್ಟರ್‌ಗಳನ್ನು ನಿಯೋಜಿಸಿದೆ. ಶನಿವಾರ ಡಿಟೋಕೆcರಾ ರೈಲು ನಿಲ್ದಾಣದಲ್ಲಿ ಸಿಲುಕಿದ್ದ 119 ಮಂದಿಯನ್ನು ಎಂಐ-17 ಕಾಪ್ಟರ್‌ಗಳು ರಕ್ಷಣೆ ಮಾಡಿವೆ. ವಾಯುಪಡೆ ಮಾತ್ರವಲ್ಲದೇ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ತರಬೇತಿ ಪಡೆದ ಸ್ವಯಂಸೇವಕರು ಕೂಡ ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಭೂಕುಸಿತ, ಹಳಿಗಳಿಗೆ ಹಾನಿ ಸಂಭವಿಸಿದ ಕಾರಣ ಕಳೆದೊಂದು ವಾರದಿಂದ ರೈಲು ಸೇವೆ ವ್ಯತ್ಯಯವಾಗಿದೆ. ಭಾನುವಾರವೂ 11 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.

Advertisement

ಹಲವು ರಾಜ್ಯಗಳಲ್ಲಿ ಮಳೆ
ಪೂರ್ವ ಹಾಗೂ ವಾಯವ್ಯ ಭಾರತದಲ್ಲಿ ಮುಂದಿನ 4 ದಿನಗಳ ಕಾಲ ಭಾರೀ ಮಳೆಯಾಗಲಿದೆ. ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲೂ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಗುರುವಾರದವರೆಗೆ ಮಳೆಯಾಗಲಿದ್ದು, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ 2 ದಿನಗಳ ಕಾಲ ಗುಡುಗು ಸಹಿತ ವರ್ಷಧಾರೆ ಆಗಲಿದೆ ಎಂದೂ ಮುನ್ನೆಚ್ಚರಿಕೆ ನೀಡಿದೆ. ರಾಜಸ್ಥಾನದಲ್ಲಿ ಸೋಮವಾರಕ್ಕೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ತಂಪಾಯ್ತು ದೆಹಲಿ; ತಾಪಮಾನ 23.1 ಡಿ.ಸೆ.
ಕಳೆದ 2 ತಿಂಗಳಿಂದ ಅತಿಯಾದ ಬಿಸಿಲಿನಿಂದ ಬೆಂದಿದ್ದ ದೆಹಲಿ ಭಾನುವಾರ ತಂಪಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನಿಷ್ಠ ತಾಪಮಾನ 23.1 ಡಿ.ಸೆ. ದಾಖಲಾಗಿದೆ. ಭಾನುವಾರ ಅಲ್ಪ ಪ್ರಮಾಣದಲ್ಲಿ ಮಳೆಯೂ ಆಗಿದೆ. ಹೀಗಾಗಿ, ವಾತಾವರಣ ತಂಪಾಗಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಸಿಡಿಲು ಬಡಿದು 3 ಸಾವು
ಉತ್ತರಪ್ರದೇಶದ ಕನೇಟಾ ಗ್ರಾಮದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದ ಪರಿಣಾಮ ಮೂವರು ಸಾವಿಗೀಡಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಕಾರ್ಮಿಕರು ಮರ ಕಡಿಯುತ್ತಿದ್ದ ಸಮಯದಲ್ಲೇ ಮರಕ್ಕೆ ಸಿಡಿಲು ಬಡಿದು ಈ ದುರ್ಘ‌ಟನೆ ಸಂಭವಿಸಿದೆ.

ಅಸ್ಸಾಂ ಅತಂತ್ರ
ಸಂಕಷ್ಟದಲ್ಲಿ ಸಿಲುಕಿರುವವರು- 8 ಲಕ್ಷ
ಮೃತರ ಸಂಖ್ಯೆ – 18
ಜಲಾವೃತಗೊಂಡ ಗ್ರಾಮಗಳು- 3,246
ಪರಿಹಾರ ಶಿಬಿರಗಳಲ್ಲಿ ಇರುವವರು- 74,907

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next