ಯಾರಾದರೂ ಕೋಪಿಷ್ಟರಾಗಿದ್ದರೆ, ಎಲ್ಲದಕ್ಕೂ ಗುರ್ ಎನ್ನುತ್ತಿದ್ದರೆ ಅಂಥವರಿಗೆ “ಟೆಂಪರ್’ ಜಾಸ್ತಿ ಅನ್ನೋ ಮಾತನ್ನ ಕೇಳಿರುತ್ತೀರಿ. ಈಗ ಇಲ್ಲೊಬ್ಬ ಅಂಥದ್ದೇ ಯಂಗ್ ಆ್ಯಂಡ್ ಎನರ್ಜಿಟಿಕ್ ಹುಡುಗನ ಕಥೆ “ಟೆಂಪರ್’ ಅನ್ನೋ ಹೆಸರಿನಲ್ಲೇ ಚಿತ್ರವಾಗಿ ತೆರೆಗೆ ಬರುತ್ತಿದೆ. ಹೌದು, ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ಟೆಂಪರ್’ ಚಿತ್ರ ಇತ್ತೀಚೆಗೆ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣಕ್ಕೆ ಸಿದ್ಧವಾಗಿದೆ.
ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ಗೀತ ಸಾಹಿತಿಯಾಗಿ ಕೆಲಸ ಮಾಡಿದ ಅನುಭವವಿರುವ ಮಂಜುಕವಿ “ಟೆಂಪರ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ನಿರ್ದೇಶಕನಾಗುತ್ತಿದ್ದಾರೆ. ಮೈಸೂರು ಮೂಲದ ನವ ಪ್ರತಿಭೆ ಆರ್ಯನ್ ಸೂರ್ಯ ನಾಯಕನಾಗಿ ಕಾಶಿಮ ನಾಯಕಿಯಾಗಿ “ಟೆಂಪರ್’ ಚಿತ್ರದಲ್ಲಿ ಜೋಡಿಯಾಗುತ್ತಿದ್ದಾರೆ. ಉಳಿದಂತೆ ತಬಲನಾಣಿ, ಲಕ್ಷ್ಮೀ ಸಿದ್ಧಯ್ಯ, ಬಲರಾಜವಾಡಿ, ಸುಧಾ ಬೆಳವಾಡಿ, ಧನು ಯಲಗಚ್, ಬೆನಕ ಪವನ್, ಟೆನ್ನಿಸ್ ಕೃಷ್ಣ, ಬಾಬು ಹಿರಣ್ಣಯ್ಯ ಮೊದಲಾದವರು ಚಿತ್ರದ ಇತರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಮಂಜುಕವಿ, “ಅನ್ಯಾಯವನ್ನು ಕಂಡಾಗ ಅದರ ವಿರುದ್ದ ಸಿಡಿದೇಳುವ ಗುಣವನ್ನು ನಾಯಕ ಚಿಕ್ಕಂದಿನಿಂದಲೂ ಬೆಳೆಸಿಕೊಂಡಿರುತ್ತಾನೆ. ಮುಂದೆ ಅವನ ಎದುರೇ ಅನ್ಯಾಯಗಳಾದಾಗ ಅದರ ವಿರುದ್ದ ಹೇಗೆ ಸೆಟೆದು ನಿಲ್ಲುತ್ತಾನೆ ಅನ್ನೋದೆ ಚಿತ್ರದ ಕಥೆಯ ಒಂದು ಎಳೆ. ಚಿತ್ರದ ನಾಯಕನ ಕ್ಯಾರೆಕ್ಟರ್‌ಗೆ ಪಕ್ಕಾ ಹೋಲಿಕೆಯಾಗುತ್ತದೆ ಅನ್ನೋ ಕಾರಣಕ್ಕೆ “ಟೆಂಪರ್’ ಅಂಥ ಟೈಟಲ್ ಇಟ್ಟಿದ್ದೇವೆ. ಇಲ್ಲಿ ಫ್ಯಾಮಿಲಿ, ಫ್ರೆಂಡ್ಸ್, ಲವ್, ಎಮೋಶನ್ಸ್ ಎಲ್ಲವೂ ಇದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ನವ ನಾಯಕ ಆರ್ಯನ್ ಸೂರ್ಯ “ಟೆಂಪರ್’ ಚಿತ್ರದಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ, ಆದ್ರೆ ಯಾರೇ ತಪ್ಪು ಮಾಡಿದ್ರೂ ಅದನ್ನು ಪ್ರಶ್ನಿಸುವ ರೆಬಲ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. “ಊರಿನಲ್ಲಿ ಯಾರಿಗೂ ಹೆದರದ ಹುಡುಗನೊಬ್ಬನಿಗೆ, ಅವನು ದೊಡ್ಡವನಾಗುತ್ತಿದ್ದಂತೆ ಏನೇನು ಅಡೆತಡೆಗಳು ಎದುರಾಗುತ್ತವೆ. ಅದನ್ನೆಲ್ಲ ಆ ಹುಡುಗ ಹೇಗೆ ಎದುರಿಸಿ ನಿಲ್ಲುತ್ತಾನೆ ಅನ್ನೋದು ನನ್ನ ಪಾತ್ರ. ಚಿತ್ರದಲ್ಲಿ ನಾಲ್ಕು ಭರ್ಜರಿ ಆ್ಯಕ್ಷನ್ ದೃಶ್ಯಗಳಿವೆ. ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಹುಡುಗನಾಗಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು.
ನಾಯಕಿಯಾಗಿ ಕಾಶಿಮ ಖಳನಾಯಕನ ಮಗಳಾಗಿ ಕಾಲೇಜ್ ಸ್ಟುಡೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಉಳಿದಂತೆ ಬಲರಾಜವಾಡಿ ಖಳನಾಯಕನಾಗಿ, ತಬಲನಾಣಿ ನಾಯಕನ ತಂದೆಯಾಗಿ, ಬೆನಕ ಪವನ್ ನಾಯಕನ ಸ್ನೇಹಿತನಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
“ಟೆಂಪರ್’ ಚಿತ್ರಕ್ಕೆ ಆರ್.ಕೆ ಶಿವಕುಮಾರ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಆರ್. ಹರಿಬಾಬು ಸಂಗೀತ ಸಂಯೋಜಿಸುತ್ತಿದ್ದಾರೆ. “ಎಂ.ಪಿ ಸಿನಿ ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ಡಾ. ಹೆಚ್.ಎಂ ರಾಮಚಂದ್ರ ಮತ್ತು ವಿ. ವಿನೋದ್ ಕುಮಾರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೈಸೂರು, ಮಂಡ್ಯ, ಮಡಿಕೇರಿ ಮತ್ತಿತರ ಸ್ಥಳಗಳಲ್ಲಿ ಸುಮಾರು 45 ದಿನಗಳ ಕಾಲ “ಟೆಂಪರ್’ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಚಿತ್ರತಂಡದ ಪ್ಲಾನ್ ಪ್ರಕಾರ ಎಲ್ಲವೂ ನಡೆದರೆ ಮುಂದಿನ ವರ್ಷದ ಮಧ್ಯಭಾಗಕ್ಕೆ “ಟೆಂಪರ್’ ತೆರೆಗೆ ಬರುವ ಸಾಧ್ಯತೆ ಇದೆ.