Advertisement

25ರಂದು ಸಾಮೂಹಿಕ ಸರಳ ವಿವಾಹ; ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ

05:58 PM May 06, 2022 | Team Udayavani |

ಮೈಸೂರು: ಜಿಲ್ಲಾಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಆಯೋಜಿಸಿರುವ ಸಪ್ತಪದಿ ಉಚಿತ ಸಾಮೂಹಿಕ ಸರಳ ವಿವಾಹವನ್ನು ಮೇ 25 ರಂದು ನಂಜನಗೂಡಿನ ಕಂಠೇಶ್ವರ ದೇವಸ್ಥಾನದಲ್ಲಿ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್‌ ಮಂಜುನಾಥಸ್ವಾಮಿ ಹೇಳಿದರು.

Advertisement

ಅಪರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಪ್ತಪದಿ ಉಚಿತ ಸರಳ ವಿವಾಹ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಾಮೂಹಿಕ ವಿವಾಹವು ಮೇ 25ರ ಬುಧವಾರ ಬೆಳಗ್ಗೆ 10.55 ರಿಂದ 11.40ರವರೆಗೆ ಕಟಕ ಶುಭ ಲಗ್ನದಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಊಟೋಪಚಾರದ ವ್ಯವಸ್ಥೆ: ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದದನ್ನು ತಪ್ಪಿಸಲು ಕರ್ನಾಟಕ ಸರ್ಕಾರ ಸಪ್ತಪದಿ ಸಾಮೂಹಿಕ ವಿವಾಹ ಯೋಜನೆ ಜಾರಿ ಮಾಡಿದೆ. ಯೋಜನೆ ವಿಶೇಷತೆ ಎಂದರೆ, ವಧು- ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವ ಜತೆಗೆ ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನೂ ದೇವಾಲಯ ಆಡಳಿತ ಮಂಡಳಿಗಳೇ ಮಾಡಲಿವೆ. ವಿವಾಹದಲ್ಲಿ ಪಾಲ್ಗೊಳ್ಳುವ ವಧು-  ವರರು 2022ರ ಮೇ 13ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

55 ಸಾವಿರ ರೂ. ಪ್ರೋತ್ಸಾಹ ಧನ: ಸಪ್ತಪದಿ ಯೋಜನೆಯಡಿ ವಿವಾಹವಾಗುವ ವಧು-ವರರಿಗೆ ರಾಜ್ಯ ಸರ್ಕಾರ ಒಟ್ಟು 55 ಸಾವಿರ ರೂ. ಪ್ರೋತ್ಸಾಹ ಧನ ನೀಡಲಿದೆ. ವಧು-ವರರು ಪಂಚೆ, ಶರ್ಟ್‌, ಶಲ್ಯ, ಹೂವಿನ ಹಾರ, ಧಾರೆ ಸೀರೆ ಹಾಗೂ ರವಿಕೆ ಕೊಳ್ಳಲು ಅನುದಾನ ನೀಡಲಿದೆ. ಹೂವಿನ ಹಾರ, ಪಂಚೆ, ಶರ್ಟ್‌, ಶಲ್ಯ ಖರೀದಿಗೆ ವರನಿಗೆ ಪ್ರೋತ್ಸಾಹ ಧನವಾಗಿ 5 ಸಾವಿರ ರೂ. ಹಾಗೂ ಹೂವಿನ ಹಾರ, ಧಾರೆ ಸೀರೆ, ರವಿಕೆಗಾಗಿ ವಧುವಿಗೆ 10 ಸಾವಿರ ರೂ. ನೀಡಲಿದೆ. ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಒಟ್ಟು ಅಂದಾಜು 8 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ನೀಡಲಾಗುತ್ತದೆ ಎಂದರು.

ಷರತ್ತುಗಳು: ವಧು-ವರರ ಎರಡು ಕಡೆಯ ತಂದೆ-ತಾಯಿಯರು ವಿವಾಹಕ್ಕೆ ಒಪ್ಪಿ ವಿವಾಹ ದಿನದಂದು ತಂದೆ-ತಾಯಿ ಉಪಸ್ಥಿತಿ ಹಾಗೂ ಎರಡು ಕಡೆಯಿಂದ ಸಾಕ್ಷಿದಾರರು ಇದ್ದಲ್ಲಿ ಮಾತ್ರ ವಿವಾಹವನ್ನು ನಡೆಸಲಾಗುವುದು. ವಧು-ವರರ ತಂದೆ-ತಾಯಿಯರು ನಿಧನರಾಗಿದ್ದು ಅವರ ವಾರಸುದಾರರ ಸಂಪೂರ್ಣ ಒಪ್ಪಿಗೆ ಇದ್ದು ವಿವಾಹ ದಿನದಂದು ಅವರು ಕಡ್ಡಾಯವಾಗಿ ಹಾಜರಿರಬೇಕು. ಸಾರ್ವಜನಿಕರಿಂದ ಯಾವುದೇ ದೂರು ಬಂದಲ್ಲಿ ಅಂತಹ ವಿವಾಹವಾಗುವ ವಧು-ವರರ ಬಗ್ಗೆ ಪುನರ್‌ ಪರಿಶೀಲಿಸುವುದು ಎಂದರು.

Advertisement

ನಂಜನಗೂಡು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ, ಮುಜರಾಯಿ ಇಲಾಖೆಯ ತಹಶೀಲ್ದಾರ್‌ ಕೃಷ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಎಚ್‌.ಎಸ್‌ ಬಿಂದಿಯಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್‌, ಸಮಾಜ ಕಲ್ಯಾಣ ಇಲಾಖೆಯ ರಾಜ್‌ ನಾಯಕ್‌, ಅರಮನೆ ಮುಜರಾಯಿ ಸಂಸ್ಥೆಯ ವ್ಯವಸ್ಥಾಪಕರಾದ ಎನ್‌. ಎಸ್‌ ಶೀಲಾ ಇದ್ದರು.

ಸರ್ಕಾರದ ನಿಯಮದಂತೆ ಗಂಡಿಗೆ ಕನಿಷ್ಠ 21 ವರ್ಷ ಹಾಗೂ ಹೆಣ್ಣಿಗೆ 18 ವರ್ಷ ತುಂಬಿರಬೇಕು. ವಯಸ್ಸಿನ ಬಗ್ಗೆ ಸರ್ಕಾರದ ಅಧಿಕೃತ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ. ಸಾಮೂಹಿಕ ವಿವಾಹಕ್ಕೆ ಸಲ್ಲಿಸುವ ದಾಖಲೆಗಳು ಸುಳ್ಳು ದಾಖಲೆಗಳೆಂದು ದೃಢವಾದಲ್ಲಿ ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.
ಡಾ. ಬಿ.ಎಸ್‌ ಮಂಜುನಾಥಸ್ವಾಮಿ,
ಅಪರ ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next