Advertisement

ರೈತರ ಮೇಲಿನ ದೌರ್ಜನ್ಯ ವಿರುದ್ಧ ಜನಾಂದೋಲನ ಅಗತ್ಯ

04:25 PM May 08, 2017 | Team Udayavani |

ಧಾರವಾಡ: ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಜನಾಂದೋಲನ ನಡೆಯುವುದು ಅವಶ್ಯಕ ಎಂದು ಸಾಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ ಹೇಳಿದರು. ಮೇ ಸಾಹಿತ್ಯ ಮೇಳದಲ್ಲಿ “ಸಮಕಾಲೀನ ಚಳವಳಿಗಳು: ಮುಂದಿನ ದಾರಿ’ ಗೋಷ್ಠಿಯಲ್ಲಿ ಮಾತನಾಡಿದರು.

Advertisement

ರೈತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕಾರ್ಪೋರೇಟ್‌ ಕಂಪನಿಗಳಿಗಾಗಿ ರೈತರಿಂದ ಭೂಮಿಯನ್ನು ಒತ್ತಾಯ ಪೂರ್ವಕವಾಗಿ ಸ್ವಾಧಿಧೀನಪಡಿಸಿಕೊಳ್ಳಲಾಗುತ್ತಿದೆ. ಇದನ್ನು ವಿರೋಧಿಸಿ ನಿರಂತರ ಹೋರಾಟ ನಡೆಯಬೇಕು. ರೈತರಿಗೆ ಕೃಷಿಗೆ ಪೂರಕ ಸೌಲಭ್ಯ ಕಲ್ಪಿಸಬೇಕು.

ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಖಾಸಗೀಕರಣವಾಗುತ್ತಿರುವುದನ್ನು ತಡೆಯುವುದು ಅವಶ್ಯಕ ಎಂದರು. ರೈತ ಮುಖಂಡ ಚಾಮರಸ ಮಾಲಿಪಾಟೀಲ ಮಾತನಾಡಿ, ಪ್ರಗತಿಪರ ಚಿಂತಕರು, ಹೋರಾಟಗಾರರು ಒಂದಾಗದಿರುವುದು ದುರ್ದೈವದ ಸಂಗತಿ. ಚಳವಳಿಗಳು ಬಣಗಳಾಗಿದ್ದು, ಮಹಾಮೈತ್ರಿ ಮೂಲಕ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು.

ರೈತ ಚಳವಳಿ ಕೇವಲ ರೈತರಿಗೆ ಮಾತ್ರ ಸೀಮಿತವಲ್ಲ. ಅನ್ನ ಉಣ್ಣುವ ಎಲ್ಲರೂ ಚಳವಳಿಯಲ್ಲಿ ಭಾಗವಹಿಸಬೇಕು ಎಂದರು. ಕೇಂದ್ರ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ. ಕಾರ್ಪೋರೇಟ್‌ ಸಂಸ್ಥೆಗಳ 5,94,000 ಕೋಟಿ ರೂ. ಸಾಲ ಹಾಗೂ ತೆರಿಗೆಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರ ರೈತರ 1,15,000 ಕೋಟಿ ರೂ. ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ.

ಬರಗಾಲ, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ ಎಂದರು. ನರಸಿಂಹಮೂರ್ತಿ ಮಾತನಾಡಿ, ಗಂಭೀರ ಕಾರಣವಿಲ್ಲದೇ ಜನಪರ ಸಂಘಟನೆಗಳು ವಿಘಟನೆಗೊಂಡಿವೆ. ಕೆಲವು ಸಂಘಟನೆಗಳು ದಿಕ್ಕು ತಪ್ಪಿವೆ. ರಾಜಕಾರಣ ಚಳವಳಿಯನ್ನು ಬೆಸೆಯಬೇಕಾಗಿತ್ತು. ಆದರೆ ಚಳವಳಿಯನ್ನು ಒಡೆಯುವ ಅಸ್ತ್ರವಾಗಿದೆ.

Advertisement

ಪರ್ಯಾಯ ರಾಜಕಾರಣ ಅವಶ್ಯಕವಾಗಿದೆ. ತಳಮಟ್ಟದ ಜನರ ನೋವಿಗೆ ಸ್ಪಂದನೆ ಸಿಗಬೇಕು ಎಂದರು. ಗೌರಿ ಮಾತನಾಡಿ, ಎಲ್ಲ ಧರ್ಮಗಳಲ್ಲಿಯೂ ಮಹಿಳೆಯರಿಗೆ ಕಟ್ಟುಪಾಡು ಹಾಕಿ ಅವರ ಸ್ವಾತಂತ್ರ ಹತ್ತಿಕ್ಕಲಾಗುತ್ತಿದೆ. ಮಹಿಳೆಯರು ಇದೇ ಸಮಾಜದಲ್ಲಿಯೇ ಬದುಕಬೇಕಾಗಿದ್ದು, ಇಲ್ಲಿಯೇ ಅವರಿಗೆ ಸಮಾನತೆ ಸಿಗಬೇಕು.

ಸಮಾಜ ಸಮಸ್ಯೆಗಳನ್ನು ಮಹಿಳೆಯರ ದೃಷ್ಟಿಕೋನದಿಂದ ನೋಡುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಗುರುಶಾಂತ ಎಸ್‌.ವೈ. ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸಂವಿಧಾನವನ್ನು ತಿದ್ದಲು ಆಸಕ್ತಿ ಹೊಂದಿಲ್ಲ. ಸಂವಿಧಾನವನ್ನು ನಿಷ್ಕ್ರಿಯಗೊಳಿಸಲು ಷಡ್ಯಂತ್ರ ನಡೆಸಿದ್ದಾರೆ. 

ಮತನಿರಪೇಕ್ಷಿತ ಪ್ರತಿರೋಧದಿಂದ ರಾಜ್ಯದಲ್ಲಿ ಆರ್‌ಎಸ್‌ಎಸ್‌ಗೆ ದೊಡ್ಡ ಸವಾಲು ಎದುರಾಗಿದೆ. ಕಾರಾಗೃಹ ಸೇರಬೇಕಾಗಿದ್ದ ಮೋದಿ ದೇಶದ ಪ್ರಧಾನಿಯಾಗಿದ್ದಾರೆ. ಅದಾನಿ, ಅಂಬಾನಿ ಕೋಟಿಗಟ್ಟಲೇ ಹಣ ಸುರಿದು ಪ್ರಚಾರ ಮಾಡಿದ್ದರಿಂದ ಮೋದಿ ಪ್ರಧಾನಿಯಾದರು ಎಂದು ತಿಳಿಸಿದರು. ಸನತಕುಮಾರ ಬೆಳಗಲಿ, ಡಾ| ಲಕ್ಷ್ಮಿನಾರಾಯಣ ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next