Advertisement

ಬಡವರ ಕಲ್ಯಾಣ ಧರ್ಮದ ರಕ್ಷಣೆ ಅಹರ್ನಿಶಿ: ಸಚಿವ ಆರ್‌. ಅಶೋಕ್‌

01:19 AM Apr 28, 2022 | Team Udayavani |

ಬೆಳ್ತಂಗಡಿ: ಹಿಂದೂ ಪರಂಪರೆಯಲ್ಲಿ ದಾಂಪತ್ಯದ ಮಹತ್ವವನ್ನು ಹಿರಿಯರು ಏಳೇಳು ಜನುಮದ ಅನುಬಂಧ ಎಂದು ಸಾರಿದ್ದಾರೆ. ಇದರರ್ಥ ಬದುಕಿನಲ್ಲಿ ಸಿರಿತನ-ಬಡತನ ಶಾಶ್ವತವಲ್ಲ. ಅರ್ಥಪೂರ್ಣ ಬದುಕಿನ ರಹಸ್ಯವೇ ಪ್ರೀತಿ ಮತ್ತು ವಿಶ್ವಾಸವಾಗಿದೆ. ಈ ನೆಲೆಯಲ್ಲಿ ಭಾರತೀಯ ಸಂಸ್ಕೃತಿಯು ಧರ್ಮ ರಕ್ಷಣೆ ಮತ್ತು ಬಡವರ ಕಲ್ಯಾಣಕ್ಕೆ ಮಹತ್ವ ನೀಡುತ್ತಾ ಬಂದಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

Advertisement

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನೆರವೇರಿದ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜನಪರ ಯೋಜನೆಗಾಗಿ ನೂರಾರು ಕಾರ್ಯಗಳಾಗುತ್ತಿವೆ. ಧರ್ಮಸ್ಥಳವೆಂದರೆ ನಿಜವಾದ ಧರ್ಮವಿರುವಂತ ಶಕ್ತಿ ಸ್ವರೂಪಿ ಈಶ್ವರನ ನೆಲೆವೀಡಾಗಿದೆ ಎಂದರು.

ಚಲನಚಿತ್ರ ನಟ ಗಣೇಶ್‌ ಮಾತನಾಡಿ, ಸತ್ಯವೆಂದರೆ ಮಂಜುನಾಥ, ಪ್ರಮಾಣ ಎಂದರೆ ಧರ್ಮಸ್ಥಳವಾಗಿದೆ. ಸಂಸಾರ ಸಾಗರಕ್ಕೆ ಧುಮುಕಿದ ನವದಂಪತಿಗಳಿಗೆ ಶ್ರೀ ಸ್ವಾಮಿಯು ದೋಣಿಯ ನಾವಿಕನಂತೆ ಬಂದು ಅನುಗ್ರಹಿಸಲಿ ಎಂದ ಅವರು ವರನಟ ರಾಜ್‌ಕುಮಾರ್‌ ಹಾಡಿದ “ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ’ ಹಾಡನ್ನು ಹಾಡಿ ನೂತನ ದಂಪತಿಗಳಿಗೆ ಶುಭಕೋರಿದರು.

ಸರಳ ಜೀವನಕ್ಕೆ ನಾಂದಿ
ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಶೀರ್ವದಿಸಿ, ಹಿಂದೆ ವಿವಾಹದ ದುಂದುವೆಚ್ಚದಿಂದ ಸಾಲ ಮಾಡಿ ಜೀತಕ್ಕೆ ತುತ್ತಾಗುತ್ತಿದ್ದರು. ಅಂದು ಸರಕಾರ ಜೀತಮುಕ್ತರನ್ನಾಗಿ ಮಾಡಿತ್ತು. ಹಾಗಾಗಿ ಸಾಮೂಹಿಕ ವಿವಾಹ ಸರಳ ಜೀವನಕ್ಕೆ ನಾಂದಿಯಾಗಬೇಕು. ಮದುವೆಯ ಹೆಸರಿನಲ್ಲಿ ದುಂದು ವೆಚ್ಚ ಸಲ್ಲ. ಅದಕ್ಕಾಗಿ ಸಾಮೂಹಿಕ ವಿವಾಹ ಯೋಜನೆಯನ್ನು ಧರ್ಮಸ್ಥಳದಲ್ಲಿ ಆರಂಭಿಸಲಾಯಿತು ಎಂದರು. 50ನೇ ವರ್ಷದ ಈ ಕಾರ್ಯ ಕ್ರಮದಲ್ಲಿ 24 ತಾಲೂಕಿನ 53 ಜಾತಿಯವರು ಇದ್ದು, 60 ಜೊತೆ ಅಂತರ್ಜಾತೀಯ ವಿವಾಹವಾಗಿದ್ದಾರೆ ಎಂದು ಉಲ್ಲೇಖೀಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಬೆಂಗಳೂರಿನ ಶಾಸಕರು ಹಾಗೂ ಒಕ್ಕಲಿಗ ಗೌಡರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ, ಶಾಸಕ ಹರೀಶ್‌ ಪೂಂಜ, ಡಾ| ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಡಿ. ಹಷೇìಂದ್ರ ಕುಮಾರ್‌ ಮತ್ತು ಸುಪ್ರಿಯಾ ಹಷೇìಂದ್ರ ಕುಮಾರ್‌ ಉಪಸ್ಥಿತರಿದ್ದರು.

ಡಿ. ಹರ್ಷೇಂದ್ ಕುಮಾರ್‌ ಸ್ವಾಗತಿಸಿ ದರು. ಗಣೇಶ್‌ ಕಾಮತ್‌ ವಂದಿಸಿದರು. ಬಾರಕೂರಿನ ದಾಮೋದರ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರು.

ಮನೆಬಾಗಿಲಿಗೆ ಸರಕಾರದ ಸೇವೆ
ರಾಜ್ಯ ಸರಕಾರ ಜನಪರ ಯೋಜನೆಯಡಿ ಗ್ರಾಮವಾಸ್ತವ್ಯ ನಡೆಸಿ ಮನೆಬಾಗಿಲಿಗೆ ಸೇವೆ ಒದಗಿಸುತ್ತಿದೆ. ಮುಂದಿನ 15 ದಿನಗಳಲ್ಲಿ ವೃದ್ಧಾಪ್ಯ ವೇತನವನ್ನು ದೂರವಾಣಿ ಮೂಲಕ ಆಧಾರ್‌ ಮಾಹಿತಿ ನೀಡಿದರೆ 72 ತಾಸಿನಲ್ಲಿ ಮನೆಬಾಗಿಲಿಗೆ ತಲುಪಿಸುವ ಕಾರ್ಯವಾಗಲಿದೆ. ಪಡಿತರ ಸೇರಿದಂತೆ ಎಲ್ಲ ಸೇವೆ ಮನೆಬಾಗಿಲಿಗೆ ನೀಡುವ ಕಾರ್ಯಕ್ಕೆ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ಸಚಿವ ಅಶೋಕ್‌ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next