ಹೀರೋ ಆಗಬೇಕೆಂದು ಬಂದವರು ವಿಲನ್ ಆಗುತ್ತಾರೆ, ಸಂಗೀತ ನಿರ್ದೇಶಕನಾಗಬೇಕೆಂದು ಕನಸು ಕಂಡವರು ಹೀರೋ ಆಗುತ್ತಾರೆ. ಈಗ ವಿಚಾರ ಯಾಕೆ ಅಂತೀರಾ, ಅದಕ್ಕೆ ಕಾರಣ “ಹಫ್ತಾ’ ಚಿತ್ರ. “ಹಫ್ತಾ’ ಎಂಬ ಚಿತ್ರವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈ ಚಿತ್ರದಲ್ಲಿ ನಾಯಕರಾಗಿರುವವರು ವರ್ಧನ್ ತೀರ್ಥಹಳ್ಳಿ. ಚಿತ್ರರಂಗಕ್ಕೆ ವಿಲನ್ ಆಗಬೇಕೆಂಬ ಕನಸು ಹೊತ್ತು ಬಂದ ವರ್ಧನ್, ಇಲ್ಲಿವರೆಗೆ ಸುಮಾರು 45ಕ್ಕೂ ಹೆಚ್ಚು ಚಿತ್ರಗಳಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ “ಹಫ್ತಾ’ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಈ ಚಿತ್ರದಲ್ಲಿ ವರ್ಧನ್ ಎರಡು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀರೋ ಅಂದಕೂಡಲೇ ಸದ್ಗುಣ ಸಂಪನ್ನವಿರುವ ಹೀರೋ ಎಂದುಕೊಳ್ಳುವಂತಿಲ್ಲ. ಚಿತ್ರದ ಹೆಸರಿಗೆ ತಕ್ಕಂತೆ ವರ್ಧನ್ ನೆಗೆಟಿವ್ ಶೇಡ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ಒಂದರಲ್ಲಿ ಮಂಗಳಮುಖೀಯಾದರೆ, ಇನ್ನೊಂದು ಶೇಡ್‌ನಲ್ಲಿ ಪಕ್ಕಾ ಅಂಡರ್‌ವರ್ಲ್ಡ್ ಹಿನ್ನೆಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ರಾಘವ್ ನಾಗ್ ಕೂಡಾ ನಾಯಕರಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರಕಾಶ್ ಹೆಬ್ಟಾಳ ನಿರ್ದೇಶಿಸಿದ್ದು, ಇದು ಅವರ ಕನಸಿನ ಕೂಸಂತೆ. ಮಾಸ್ ಪ್ರಿಯರಿಗೆ ಇಷ್ಟವಾಗುವ ಅಂಶ ಈ ಚಿತ್ರದಲ್ಲಿದೆ ಎನ್ನುವುದು ಅವರ ಮಾತು. ಚಿತ್ರದಲ್ಲಿ ಬಿಂಬಶ್ರೀ ನೀನಾಸಂ ಹಾಗೂ ಸೌಮ್ಯ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರವನ್ನು ಮೈತ್ರಿ ಮಂಜುನಾಥ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಇಬ್ಬರು ಸಂಗೀತ ನಿರ್ದೇಶಕರು. ಗೌತಮ್ ಶ್ರೀವತ್ಸ ಹಾಗೂ ವಿಜಯ್. ಚಿತ್ರದ ಒಂದು ಹಾಡು ಹಾಗೂ ಹಿನ್ನೆಲೆ ಸಂಗೀತವನ್ನು ಗೌತಮ್ ಮಾಡಿದರೆ, ಮಿಕ್ಕ ಎರಡು ಹಾಡುಗಳಿಗೆ ವಿಜಯ್ ಸಂಗೀತವಿದೆ. ಉಳಿದಂತೆ ಚಿತ್ರದಲ್ಲಿ ಬಲರಾಜು ವಾಡಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಲಹರಿ ವೇಲು ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಚಿತ್ರದ ಟೈಟಲ್ ತುಂಬಾ ಕ್ಯಾಚಿಯಾಗಿದ್ದು, ಮಾಸ್ ಪ್ರಿಯರಿಗೆ ಇಷ್ಟವಾಗುತ್ತದೆ ಎಂದರು.