ಜೇವರ್ಗಿ: ತಾಲೂಕಿನ ಆಲೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಥಮ ಭಾಷೆ ಪರೀಕ್ಷೆಗೆ ನಕಲು ಮಾಡಲು ಸಹಕರಿಸುತ್ತಿದ್ದವರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಆಲೂರ ಪರೀಕ್ಷಾ ಕೇಂದ್ರಕ್ಕೆ ಆಲೂರ ಸೇರಿದಂತೆ ಗೂಗಿಹಾಳ, ಕರಕಿಹಳ್ಳಿ, ಹಂಗರಗಾ(ಬಿ), ಯಲಗೋಡ, ಬೀಳವಾರ, ಬಳಬಟ್ಟಿ ಸೇರಿದಂತೆ ಅನೇಕ ಗ್ರಾಮದ ಪ್ರೌಢಶಾಲೆಗಳ ಮಕ್ಕಳು ಪರೀಕ್ಷೆ ಬರೆಯುತ್ತಿದ್ದು, ಗುರುವಾರ ನಡೆದ ಪರೀಕ್ಷೆಗೆ ಒಟ್ಟು 336 ವಿದ್ಯಾರ್ಥಿಗಳಲ್ಲಿ 326 ವಿದ್ಯಾರ್ಥಿಗಳು ಹಾಜರಾಗಿದ್ದರು.
ಬೆಳಗ್ಗೆ ಪರೀಕ್ಷೆ ಪ್ರಾರಂಭವಾಗುತ್ತಿದ್ದಂತೆ ಹಲವು ಗ್ರಾಮಗಳಿಂದ ಆಗಮಿಸಿದ ವಿದ್ಯಾರ್ಥಿಗಳ ಪಾಲಕರು ಹಾಗೂ ಸ್ನೇಹಿತರ ವರ್ಗ ಪರೀಕ್ಷಾ ಕೇಂದ್ರದ ಹತ್ತಿರದ ಕಾಖಂಡಕಿ ರಸ್ತೆ ಮೇಲೆ ಕುಳಿತುಕೊಂಡು ಚೀಟಿ ಕೊಡಲು ತೆರಳುತ್ತಿದ್ದ ದೃಶ್ಯ ಕಂಡು ಬಂತು. ಪೊಲೀಸರು ನಕಲು ಮಾಡಲು ಸಹಕರಿಸುತ್ತಿದ್ದವರನ್ನು ತಡೆಯಲು ಹರಸಾಹಸಪಟ್ಟರು.
ಆಗಾಗ ಗುಂಪು ಸೇರುತ್ತಿದ್ದ ಮತ್ತು ಚೀಟಿ ಹಾಕಲು ಪ್ರಯತ್ನಿಸುತ್ತಿದ್ದವರನ್ನು ಪೊಲೀಸರು ಲಾಟಿಯಿಂದ ಚದುರಿಸುತ್ತಿರುವದು ಕಂಡು ಬಂತು. ತಾಲೂಕಿನಲ್ಲಿ ಒಟ್ಟು 12 ಪರೀಕ್ಷಾ ಕೇಂದ್ರಗಳಿದ್ದು ಪಟ್ಟಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಉರ್ದು ಪ್ರೌಢಶಾಲೆ, ನೂರಂದೇಶ್ವರ ಪ್ರೌಢ ಶಾಲೆ, ಜೆಟಿವಿಪಿ ಪ್ರೌಢಶಾಲೆ ಹಾಗೂ
ತಾಲೂಕಿನ ಸೊನ್ನ ಗ್ರಾಮದ ಶಿವಾನಂದ ಶಿವಯೋಗಿ ಪ್ರೌಢಶಾಲೆ, ನೆಲೋಗಿಯ ಸರಕಾರಿ ಪ್ರೌಢಶಾಲೆ, ಮಂದೇವಾಲ, ಆಂದೋಲಾ, ಇಜೇರಿ, ಆಲೂರ, ಯಡ್ರಾಮಿ, ಮಳ್ಳಿ ಪರೀಕ್ಷೆ ಕೇಂದ್ರಗಳಲ್ಲಿ ಮಕ್ಕಳು ಪರೀಕ್ಷೆ ಬರೆದರು. ಒಟ್ಟು ತಾಲೂಕಿನ 2043 ವಿದ್ಯಾರ್ಥಿಗಳು, 1582 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 3625 ಮಕ್ಕಳು ಪರೀಕ್ಷೆ ಬರೆದರು.