ಜೈಪುರ: ನೋಟು ಅಪಮೌಲ್ಯ ಜಾರಿಗೊಂಡು ನವೆಂಬರ್ 8ಕ್ಕೆ ಒಂದು ವರ್ಷ ಪೂರೈಸಲಿರುವ ಹಿನ್ನೆಲೆ ಯಲ್ಲಿ, ಅದರ ವರ್ಷಾಚರಣೆಯನ್ನು ವಿಶಿಷ್ಟವಾಗಿ ನಡೆಸಲು ರಾಜಸ್ಥಾನ ಸರಕಾರ ಸಿದ್ಧತೆ ನಡೆಸಿದೆ. ಅದರಂತೆ, ಅಂದು ಬರೋಬ್ಬರಿ 50 ಸಾವಿರ ಮಂದಿ ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಹಾಡಲಿದ್ದಾರೆ.
ಕಾರ್ಯಕ್ರಮ ಸಂಘಟನೆಯನ್ನು ಯುವ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿನ ಸಂಸ್ಥೆಯಾದ ರಾಜಸ್ಥಾನ ಯುವ ಮಂಡಳಿ ನಿರ್ವಹಿಸಲಿದೆ. ಅಲ್ಲದೆ ಆರ್‌ಎಸ್‌ಎಸ್ ಬೆಂಬಲಿತ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಪ್ರತಿಷ್ಠಾನ ಕೂಡ ಇದಕ್ಕೆ ಕೈಜೋಡಿಸಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರೇ ಮುಖ್ಯ ಅತಿಥಿಯಾಗಿರಲಿದ್ದಾರೆ.
ಬಾಲಿವುಡ್‌ನ ಜನಪ್ರಿಯ ಸಂಗೀತಗಾರ ಆನಂದ್‌ಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಿನಿಮಾಗಳಲ್ಲಿನ ದೇಶಭಕ್ತಿಗೀತೆಗಳನ್ನು ಹಾಡಲಿದ್ದಾರೆ. ಸಿಎಂ ರಾಜೇ ನೇತೃತ್ವದಲ್ಲಿ ಯೋಗಾಭ್ಯಾಸವೂ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ 400 ಖಾಸಗಿ ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಶಾಲಾ ಮಕ್ಕಳನ್ನು ಇಲ್ಲಿಗೆ ಕರೆತರಲಾಗುತ್ತದೆ. ಅಲ್ಲದೆ ಎನ್‌ಜಿಒ ಮತ್ತು ಸಾಮಾಜಿಕ, ಧಾರ್ಮಿಕ ಸಂಘಟನೆಗಳನ್ನೂ ಈ ಕಾರ್ಯ ಕ್ರಮದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ.
ವಿಪಕ್ಷಗಳಿಂದ ಟೀಕಾಪ್ರಹಾರ: ರಾಜಸ್ಥಾನ ಸರಕಾರದ ಈ ನಿರ್ಧಾರವನ್ನು ವಿಪಕ್ಷಗಳು ಟೀಕಿಸಿದ್ದು, ವಾಸ್ತವವನ್ನು ಮುಚ್ಚಿಡಲು ನೋಟು ಅಪಮೌಲ್ಯ ನಿರ್ಧಾರಕ್ಕೆ ರಾಷ್ಟ್ರೀಯತೆಯ ಬಣ್ಣ ಹಚ್ಚಲಾಗುತ್ತಿದೆ ಎಂದಿದೆ. ಅಲ್ಲದೆ ಈಗಾಗಲೇ ನವೆಂಬರ್ 8ರಂದು ಕರಾಳ ದಿನ ಆಚರಣೆ ಮಾಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ. ನೋಟು ಅಪಮೌಲ್ಯದ ವೈಫಲ್ಯವನ್ನು ಮುಚ್ಚಿಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿ ಧರ್ಮಾಧಾರಿತ ರಾಜಕೀಯ ಮಾಡುತ್ತಿದ್ದು, ಪ್ರಶ್ನೆಗಳಿಗೆ ಉತ್ತರಿಸದೇ ಸನ್ನಿವೇಶಕ್ಕೆ ರಾಷ್ಟ್ರೀಯತೆಯ ಬಣ್ಣ ಹಚ್ಚುತ್ತಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಆರೋಪಿಸಿದ್ದಾರೆ.
ಕೆಲವೇ ದಿನಗಳ ಹಿಂದಷ್ಟೇ ಜೈಪುರ ಪುರಸಭೆಯ ಎಲ್ಲ ಉದ್ಯೋಗಿಗಳೂ ಕಚೇರಿಗೆ ಆಗಮಿಸುವಾಗ ಮತ್ತು ತೆರಳುವಾಗ ರಾಷ್ಟ್ರಗೀತೆ ಹಾಡಬೇಕು ಎಂದು ಜೈಪುರ ಮೇಯರ್ ಅಶೋಕ್ ಲಹೋಟಿ ಆದೇಶಿಸಿದ್ದರು.