Advertisement

ಮಸ್ಕಿ ಉಪಚುನಾವಣೆ: ಮತಬೇಟೆಗೆ ಅಂತಿಮ ಕಸರತ್ತು

06:03 PM Apr 16, 2021 | Team Udayavani |

ರಾಯಚೂರು: ರಾಜ್ಯದ ಗಮನ ಸೆಳೆದ ಮಸ್ಕಿ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಉಭಯ ಪಕ್ಷಗಳ ಮುಖಂಡರೆಲ್ಲ ಕ್ಷೇತ್ರ ತೊರೆದರೆ; ಬೂತ್‌ ಮಟ್ಟದಲ್ಲಿ ಕಾರ್ಯಕರ್ತರು ಮನೆ-ಮನೆ ಪ್ರಚಾರ ಆರಂಭಿಸಿದ್ದಾರೆ.

Advertisement

ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಏರ್ಪಟ್ಟ ನೇರ ಹಣಾಹಣಿಯಿಂದ ಕ್ಷೇತ್ರದಲ್ಲಿ ಕಳೆದ 15 ದಿನಗಳಿಂದ ಎಲ್ಲಿಲ್ಲದ ಪ್ರಚಾರ ಭರಾಟೆಯಿತ್ತು. ಉಭಯ ಪಕ್ಷಗಳ ನಾಯಕರು ಮತದಾರರಿಗೆ ಬೇಸರ ಮೂಡಿಸುವ ರೀತಿಯಲ್ಲಿ ಪ್ರಚಾರ ನಡೆಸಿದ್ದು, ಈ ಬಾರಿಯ ವಿಶೇಷ.

ರಾಜ್ಯದಲ್ಲಿ ಮೂರು ಕಡೆ ಮಾತ್ರ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಇಲ್ಲಿಯೇ ನೆಟ್ಟಿತ್ತು. ಎ.15ರ ಸಂಜೆ 7ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ನಾಯಕರು, ಕ್ಷೇತ್ರದ ಮತದಾರರಲ್ಲದವರು ಹೊರನಡೆದಿದ್ದಾರೆ.

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ರಿಗೆ ಕೊರೊನಾ ಪಾಸಿಟಿವ್‌ ಇರುವ ಕಾರಣಕ್ಕೆ ಕಳೆದ ನಾಲ್ಕೈದು ದಿನಗಳಿಂದ ಅವರು ಪ್ರಚಾರದಿಂದ ದೂರ ಉಳಿದಿದ್ದಾರೆ. ಅವರ ಕುಟುಂಬ ಸದಸ್ಯರು ಕೂಡ ಹೋಮ್‌ ಐಸೊಲೇಶನ್‌ಗೆ ಒಳಪಟ್ಟಿದ್ದರಿಂದ ಕುಟುಂಬದ ಯಾರೂ ಪ್ರಚಾರ ಕಣದಲ್ಲಿ ಕಾಣಿಸುತ್ತಿಲ್ಲ. ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರೇ ಎಲ್ಲೆಡೆ ಪ್ರಚಾರ ನಡೆಸಿದ್ದಾರೆ. ಇನ್ನೂ ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರುವಿಹಾಳ ಪರವೂ ಕಾರ್ಯಕರ್ತರು ಜೋರು
ಪ್ರಚಾರ ನಡೆಸಿದ್ದಾರೆ.

ಒಂದೆಡೆ ಬಿರುಬೇಸಿಗೆಯ ಧಗೆ, ಮತ್ತೂಂದೆಡೆ ಕೊರೊನಾ ಎರಡನೇ ಅಲೆಯ ಆತಂಕದ  ನಡುವೆಯೂ ಪ್ರಚಾರ ಕಾರ್ಯ ಮಾತ್ರ ಕಳೆಗುಂದಲಿಲ್ಲ. ಏ.17ರಂದು ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಉಭಯ ಪಕ್ಷಗಳು ಮನೆ-ಮನೆ ಪ್ರಚಾರ ನಡೆಸುವ ಮೂಲಕ ಅಂತಿಮ ಕಸರತ್ತಿಗೆ ಇಳಿದಿವೆ. ಬಹಿರಂಗ ಸಭೆಗಳು, ಸಮಾವೇಶಗಳು, ರೋಡ್‌ ಶೋಗಳನ್ನು ನಡೆಸಿದ ಪಕ್ಷಗಳು ಈಗ ಮತದಾರರ ಮನೆಗಳಿಗೆ ಎಡತಾಕುವ ಮೂಲಕ ಮತಯಾಚನೆ ನಡೆಸುತ್ತಿದ್ದಾರೆ. ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಮತದಾರರ ಮನವೊಲಿಕೆ ಯತ್ನ ನಡೆಸಿದ್ದಾರೆ. ಪ್ರಚಾರದ ಕೊನೆ ದಿನವಾದ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದರು. ಅವರೊಟ್ಟಿಗೆ ಜಿಲ್ಲಾ ಮಟ್ಟದ ನಾಯಕರು ಕೂಡ ಜತೆಗಿದ್ದರು.

Advertisement

ಕ್ಷೇತ್ರ ಭಣ ಭಣ
ಉಭಯ ಪಕ್ಷಗಳ ನಾಯಕರು ಪ್ರಚಾರದ ಅಬ್ಬರದಿಂದ ಕ್ಷೇತ್ರದಲ್ಲಿ ನಿತ್ಯ ಹಬ್ಬದ ವಾತಾವರಣ ಏರ್ಪಡುತ್ತಿತ್ತು. ಒಂದಲ್ಲ ಒಂದು ಕಡೆ ಸಭೆ ಸಮಾವೇಶಗಳು ನಡೆಯುತ್ತಿದ್ದ ಕಾರಣ ಮತದಾರರ ಓಡಾಟ, ವಾಹನಗಳ ತಿರುಗಾಟದಿಂದ ಗಜಿಬಿಜಿ ವಾತಾವರಣ ಏರ್ಪಡುತ್ತಿತ್ತು. ಅದರಲ್ಲೂ ಬಿಜೆಪಿ ತಪ್ಪಿದರೆ ಕಾಂಗ್ರೆಸ್‌ ತಪ್ಪಿದರೆ ಬಿಜೆಪಿ ನಾಯಕರು ಬರುವುದು ಪ್ರಚಾರ ನಡೆಸುವುದು ಸರ್ವೆ ಸಾಮಾನ್ಯವಾಗಿತ್ತು. ನಿತ್ಯ ಹೆಲಿಕಾಪ್ಟರ್‌ ಹಾರಾಟದ ಸದ್ದು, ಸಚಿವರು, ಜನನಾಯಕರ ದುಬಾರಿ ವಾಹನಗಳ ತಿರುಗಾಟಕ್ಕೆ ಎಲ್ಲೆ ಇಲ್ಲದಂತಾಗಿತ್ತು. ಈಗ ಮಸ್ಕಿ ಪಟ್ಟಣ ಸೇರಿದಂತೆ ಕ್ಷೇತ್ರಾದ್ಯಂತ ಮೌನ ಆವರಿಸಿದೆ. ಏ.15ರ ಸಂಜೆ ಏಳು ಗಂಟೆಯಿಂದ 144 ಸೆಕ್ಷನ್‌ ಜಾರಿಗೊಳಿಸಿದ್ದು, ಐವರಿಗಿಂತ ಹೆಚ್ಚು ಜನ ಸೇರುವಂತಿಲ್ಲ. ಇದರಿಂದ ಪಕ್ಷದ ಕಾರ್ಯಕರ್ತರಷ್ಟೇ ಓಡಾಟ ಮಾಡಬೇಕಿದೆ.

ಜಿಲ್ಲಾ ಕೇಂದ್ರದಲ್ಲಿ ಮತ ಎಣಿಕೆ
ಎ.17ರಂದು ಮಸ್ಕಿ ಕ್ಷೇತ್ರದಲ್ಲಿ ಚುನಾವಣೆ ನಡೆದರೂ ಮತ ಎಣಿಕೆ ಕಾರ್ಯ ಮಾತ್ರ ಎಂದಿನಂತೆಜಿಲ್ಲಾ ಕೇಂದ್ರದಲ್ಲಿ ಮಾಡಲಾಗುತ್ತಿದೆ. ನಗರದ ಎಸ್‌ ಆರ್‌ಪಿಯು ಕಾಲೇಜಿನಲ್ಲಿ ವ್ಯವಸ್ಥೆ ಮಾಡ ಲಾಗಿದೆ. ಮೇ 2ರಂದು ಮತ ಎಣಿಕೆ ಕಾರ್ಯ ಜರುಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next