Advertisement

ಪೊಲೀಸ್‌ ವಲಯದಲ್ಲಿ ಸಂಚಲನ ತಂದ ದಾಳಿ!

06:18 PM Feb 20, 2021 | Team Udayavani |

ಮಸ್ಕಿ: ಮಸ್ಕಿಯ ವೆಂಕಟಾಪೂರ ಸೀಮಾದಲ್ಲಿ ನಡೆಯುತ್ತಿದ್ದ ಹೈಟೆಕ್‌ ಇಸ್ಪೀಟ್‌ ಅಡ್ಡೆಯ ಮೇಲೆ ಐಜಿಪಿ ಜಾಗೃತ ತಂಡ ದಾಳಿ ನಡೆಸಿದ ಪ್ರಕರಣ ಜಿಲ್ಲಾ ಪೊಲೀಸ್‌ ವಲಯದಲ್ಲೇ ಸಂಚಲನ ಉಂಟು ಮಾಡಿದೆ!. ಈ ಪ್ರಕರಣ ಹೊರಬಿದ್ದ ಬೆನ್ನಲ್ಲೇ ಮಸ್ಕಿಯಲ್ಲಿ ನಡೆಯುತ್ತಿದ್ದ ಇಸ್ಪೀಟ್‌ ಹಾಗೂ ಅಕ್ರಮ ಮರಳು ಸಾಗಣೆ ಸೇರಿ ಇತರೆ ಕಾನೂನು ಬಾಹಿರ ಚಟುವಟಿಕೆ ಕುರಿತು ಡಿಐಜಿವರೆಗೂ ಖಾಸಗಿ ದೂರು ಸಲ್ಲಿಕೆಯಾಗಿತ್ತು.

Advertisement

ಈ ಬಗ್ಗೆ ಪರಿಶೀಲನೆ ನಡೆಸುವಂತೆ ಖುದ್ದು ಇಲ್ಲಿನ ಠಾಣೆ ಅಧಿಕಾರಿಗಳಿಗೆ ಹದಿನೈದು ದಿನಗಳ ಹಿಂದೆಯಷ್ಟೇ ಮೇಲ ಧಿಕಾರಿಗಳಿಂದ ಸೂಚನೆ ಬಂದಿತ್ತು ಎನ್ನುವ ಅಂಶ ಈಗ ಪೊಲೀಸ್‌ ವಲಯದಲ್ಲಿ ಹರಿದಾಡುತ್ತಿದೆ. ಈ ಸೂಚನೆ ಬಳಿಕವೂ ಖಾಸಗಿ ದೂರು ಕಪೋಲಕಲ್ಪಿತ. ಇಂತಹ ಯಾವ ಘಟನೆಗಳೂ ಮಸ್ಕಿಯಲ್ಲಿ ನಡೆಯುತ್ತಿಲ್ಲ ಎನ್ನುವ ಸ್ಥಳೀಯ ಪೊಲೀಸ್‌ ಅಧಿ ಕಾರಿಗಳ ಪ್ರತಿಕ್ರಿಯೆ ಈಗ ಮತ್ತೊಂದು ಅವಾಂತರಕ್ಕೆ ದಾರಿಯಾಗಿದೆ ಎನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ.

ಮುಳುವಾದ ಹೇಳಿಕೆ?: “ನಾಗರಿಕ ಹೋರಾಟ ಸಮಿತಿ ಹಾಗೂ ಇತರೆ ಹೋರಾಟ ಸಮಿತಿ ಮಸ್ಕಿ’ ಎನ್ನುವ ಸಂಘಟನೆಯೊಂದು ಮಸ್ಕಿಯ ಹಲವೆಡೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಅಂಶವನ್ನು ಉಲ್ಲೇಖೀಸಿ ಹಲವು ದಿನಗಳ ಹಿಂದೆ ಬೆಂಗಳೂರಿನ ಡೈರೆಕ್ಟರ್‌ ಜನರಲ್‌ ಇನ್ಸ್ ಪೆಕ್ಟರ್‌ ಆಫ್‌ ಪೊಲೀಸ್‌ ಕಚೇರಿ(ಡಿಜಿ/ಡಿಐಜಿ) ಗೆ ದೂರು ಸಲ್ಲಿಸಿತ್ತು ಎನ್ನಲಾಗಿದೆ. ಇದರ ಆಧಾರದ ಮೇಲೆ ಬಳ್ಳಾರಿ ಐಜಿಪಿ ವಲಯ ಹಾಗೂ ರಾಯಚೂರು ಎಸ್ಪಿ ಕಚೇರಿಯಿಂದ ಇಲ್ಲಿನ ಠಾಣೆಗೆ ಮಾಹಿತಿ ಕೇಳಿದ್ದಾರೆ. ಈ ದೂರಿನಲ್ಲಿ ಉಲ್ಲೇಖೀತ ಹೆಸರುಗಳನ್ವಯ ಹಲವರನ್ನು ಠಾಣೆಗೆ ಕರೆಸಿದ್ದ ಪೊಲೀಸ್‌ ಅ ಧಿಕಾರಿಗಳು ವಿಚಾರಣೆ ಶಾಸ್ತ್ರ ಮುಗಿಸಿದ್ದರು.

ದೂರು ಬಳಿಕವೂ ಎಚ್ಚೆತ್ತುಕೊಳ್ಳದ ಸ್ಥಳೀಯ ಅಧಿಕಾರಿಗಳು ಇಲ್ಲಿ ಅಂತಹ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿಲ್ಲ. ದೂರಿನಲ್ಲಿ ಇರುವುದೆಲ್ಲ ಕಪೋಲಕಲ್ಪಿತ ಅಂಶ ಎಂದು ಪ್ರತಿಕ್ರಿಯೆ ನೀಡಿದ್ದರು. ಇಂತಹ ಪ್ರತಿಕ್ರಿಯೆಯೇ ಈಗ ಇಲ್ಲಿನ ಪೊಲೀಸ್‌ ಅಧಿಕಾರಿಗಳಿಗೆ ಮುಳುವಾಗಿದೆ ಎನ್ನುವ ಚರ್ಚೆಗಳು ಇಲಾಖೆ ವಲಯದಲ್ಲಿ ನಡೆಯುತ್ತಿವೆ.

ಎಲ್ಲ ವ್ಯವಸ್ಥಿತ: ಇಲ್ಲಿನ ಠಾಣಾಧಿಕಾರಿಗಳ ಪ್ರತ್ಯುತ್ತರ ಬಳಿಕವೇ ಐಜಿಪಿಯವರ ಮಾರ್ಗದರ್ಶನದ ಜಾಗೃತ ದಳ ದಾಳಿ ನಡೆಸಿ ಇಸ್ಪೀಟ್‌ ಜೂಜಾಟ ಪತ್ತೆ ಹಚ್ಚಿದೆ.
ಈ ಮೂಲಕ ಇಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದವು ಎನ್ನುವುದನ್ನು ಪುಷ್ಠಿàಕರಿಸಿದೆ. ಐಜಿಪಿ ಜಾಗೃತದಳದ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ವೆಂಕಟಾಪೂರ ಸೀಮಾದಲ್ಲಿನ ಖಾಸಗಿ ತೋಟವೊಂದರಲ್ಲಿ ನಡೆಯುತ್ತಿದ್ದ ಇಸ್ಪೀಟ್‌ ಜೂಜಾಟದ ಅಡ್ಡೆಗೆ ದಾಳಿ ಮಾಡಿದ್ದರು. ಆದರೆ ಡಿವೈಎಸ್ಪಿ ದರ್ಜೆಯ ಅ ಧಿಕಾರಿ ದಾಳಿ ನೇತೃತ್ವ ವಹಿಸಬೇಕಿದ್ದರಿಂದ ನೆರೆಯ ವಿಭಾಗದ ಸಿಂಧನೂರು ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಅವರನ್ನು ಕರೆಯಿಸಿಕೊಳ್ಳಲಾಗಿದ್ದು, ಈ ವೇಳೆ ಸಿಕ್ಕ ಐವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಳಿ ವೇಳೆ ಲಭ್ಯವಿದ್ದ ಎಲ್ಲವನ್ನೂ ವಿಡಿಯೋ-ಫೋಟೊಗಳ ಮೂಲಕ ದಾಖಲೆ ಸಂಗ್ರಹಿಸಿಕೊಳ್ಳಲಾಗಿದ್ದು, ಇದು ಗಂಭೀರ ಸ್ವರೂಪದ ಪ್ರಕರಣ ಎಂದು ಪರಿಗಣಿಸಲಾಗಿದೆ ಎನ್ನುತ್ತವೆ ಪೊಲೀಸ್‌ ಮೂಲಗಳು.

Advertisement

ತನಿಖೆ ಹೊಣೆ ಡಿವೈಎಸ್ಪಿಗೆ
ಮಸ್ಕಿಯಲ್ಲಿ ಈ ಪ್ರಮಾಣದ ಹೈಟೆಕ್‌ ಇಸ್ಪೀಟ್‌ ಅಡ್ಡೆ ನಡೆಯುತ್ತಿರುವುದು ಯಾರ ಲೋಪದೋಷ ಕಾರಣ? ಇಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆ ಹಾಗೂ ಗುರುವಾರ ನಡೆದ ಇಸ್ಪೀಟ್‌ ದಾಳಿ ಕುರಿತು ವರದಿ ನೀಡುವಂತೆ ಐಜಿಪಿ ಕಚೇರಿಯಿಂದ ಲಿಂಗಸುಗೂರು ಡಿವೈಎಸ್ಪಿಯವರಿಗೆ ವರದಿ ಕೇಳಲಾಗಿದೆ.
ಈಗ ಈ ತನಿಖೆಯ ಹೊಣೆ ಲಿಂಗಸುಗೂರು ಡಿವೈಎಸ್ಪಿ ಹೆಗಲಿಗೇರಿದ್ದು, ಇಲಾಖೆ ವಿಚಾರಣೆ ಬಳಿಕ ಅವರು ಸಲ್ಲಿಸುವ ವರದಿ ಆಧಾರದ ಮೇಲೆ ಇಲ್ಲಿನ ಕಾನೂನುಬಾಹಿರ ಚಟುವಟಿಕೆಗೆ ಯಾರು ಹೊಣೆ? ಎನ್ನುವ ಅಂಶ ಹೊರ ಬೀಳಲಿದೆ ಎನ್ನುತ್ತವೆ ಪೊಲೀಸ್‌ ಇಲಾಖೆ ಉನ್ನತ ಮೂಲಗಳು.

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next