Advertisement

ಟ್ಯಾಂಕರ್‌ ನೀರು ಪೂರೈಸಿ

05:03 PM Jun 28, 2019 | Naveen |

ಮಸ್ಕಿ: ಪಟ್ಟಣದ 23 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಕೂಡಲೇ ಪ್ರತಿಯೊಂದು ವಾರ್ಡ್‌ಗೆ ಪುರಸಭೆಯಿಂದ ಟ್ಯಾಂಕರ್‌ ನೀರು ಪೂರೈಕೆಗೆ ಕ್ರಮ ವಹಿಸಬೇಕೆಂದು ಶಾಸಕ, ಉಗ್ರಾಣ ನಿಗಮ ಅಧ್ಯಕ್ಷ ಪ್ರತಾಪಗೌಡ ಪಾಟೀಲ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.

Advertisement

ಪಟ್ಟಣದ ಸಿಂಧನೂರು ರಸ್ತೆಯಲ್ಲಿರುವ ಎಪಿಎಂಸಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಪುರಸಭೆ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿವಿಧ ವಸತಿ ಯೋಜನೆಯಡಿ ಮಂಜೂರಾದ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ಕಸ ವಿಲೇವಾರಿ ಮಾಡಲು ಸೂಕ್ತ ಸ್ಥಳ ಗುರುತಿಸಿ ಭೂಮಿ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.

ಪುರಸಭೆ ಮುಖ್ಯಾಧಿಕಾರಿ ರಡ್ಡಿ ರಾಯನಗೌಡ ಮಾತನಾಡಿ, ಈ ಹಿಂದೆ 5 ಎಕರೆ ಭೂಮಿಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪರಿಸರ ಮಾಲಿನ್ಯ ಇಲಾಖೆಯಿಂದ ಸುಮಾರು 30 ಎಕರೆ ಪ್ರದೇಶದ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚಿಸಿ, 5 ಎಕರೆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. 30 ಎಕರೆ ಭೂಮಿ ಖರೀದಿಸುವ ಕ್ರಮಕ್ಕೆ ಮುಂದಾಗುವುದಾಗಿ ಹೇಳಿದರು.

ನೀರಿನ ಸಮಸ್ಯೆಯಾಗಬಾರದು: ಶಾಶ್ವತ ಕುಡಿಯುವ ನೀರಿನ ಯೋಜನೆ ಕೆರೆಯಲ್ಲಿ ನೀರು ಸಂಪೂರ್ಣ ತಳಮಟ್ಟ ತಲುಪಿದೆ. ಅಂತರ್ಜಲ ಇರುವ ಕಡೆಗಳಲ್ಲಿ ಶಾಲಾ ಬೋರ್‌ವೆಲ್ಗಳನ್ನು ಕೊರೆಯಿಸಲು ಮುಂದಾಗಬೇಕು. ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ಖಾಸಗಿ ವ್ಯಕ್ತಿಗಳ ಬೋರ್‌ವೆಲ್ಗಳಿಂದ ನೀರು ಪಡೆದು ಟ್ಯಾಂಕರ್‌ ಮೂಲಕ ಪೂರೈಸಬೇಕೆಂದು ಹೇಳಿದರು.

Advertisement

ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ವಾಜಪೇಯಿ ವಸತಿ ಯೋಜನೆಯಡಿ 8 ಎಕರೆ ಭೂಮಿ ಖರೀದಿಸಿದ್ದು, ಅದರಲ್ಲಿ 300 ನಿವೇಶನ ರಚನೆಗೊಂಡಿವೆ. ಆಶ್ರಯ ಸಮಿತಿಯಿಂದ 282 ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 108 ಫಲಾನುಭವಿಗಳಿಗೆ ಈಗಾಗಲೇ ಹಕ್ಕುಪತ್ರ ವಿತರಿಸಲಾಗಿದೆ. ಬಾಕಿ ಇರುವ 174 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕಿದೆ ಎಂದು ವಿವರಿಸಿದರು.

ಪುರಸಭೆ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಖರೀದಿಸಿದ 5 ಎಕರೆ ಜಮೀನಿಗೆ ವಿನ್ಯಾಸಕ್ಕಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ಕಳುಹಿಸಲಾಗಿದೆ. 2015-16ನೇ ಸಾಲಿನಲ್ಲಿ ವಾಜಪೇಯಿ ಮತ್ತು ಇತರೆ ವಸತಿ ಯೋಜನೆಗಳಲ್ಲಿ ಮಂಜೂರಾದ ಮನೆಗಳನ್ನು ನಿರ್ಮಿಸಿಕೊಳ್ಳುವಂತೆ ಫಲಾನುಭವಿಗಳಿಗೆ ನೋಟಿಸ್‌ ನೀಡಲಾಗುವುದು. 2018-19ನೇ ಸಾಲಿನಲ್ಲಿ ವಾಜಪೇಯಿ ವಸತಿ ಯೋಜನೆಯಡಿ ಪುರಸಭೆಗೆ 20 ವಸತಿಗಳು ಮಂಜೂರಾಗಿದ್ದು, ಅರ್ಹ ಫಲಾನುಭವಿಗಳು 10-07-2019ರೊಳಗೆ ಅರ್ಜಿ ಸಲ್ಲಿಸಬೇಕೆಂದರು.

ಪುರಸಭೆ ಸದಸ್ಯ ಎಂ.ಅಮರೇಶ ಮಾತನಾಡಿ, ಪುರಸಭೆಯಲ್ಲಿ ಖಾತಾ ನಕಲು ವಿತರಿಸಲು ವಿಳಂಬ ಮಾಡುತ್ತಿದ್ದಾರೆ. ಸದಸ್ಯರಿಗೆ ಖಾತಾ ನಕಲು ನೀಡಲು ತಿಂಗಳಾನುಗಟ್ಟಲೇ ಅಲೆದಾಡಿಸಿದರೆ ಸಾಮಾನ್ಯ ಜನರ ಗತಿ ಏನು ಎಂಬಂತಾಗಿದೆ. ಪುರಸಭೆ ಅಧಿಕಾರಿಗಳು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಸದಸ್ಯರಾದ ರವಿಗೌಡ ಪಾಟೀಲ, ಮೌನೇಶ ಮುರಾರಿ, ಸುರೇಶ ಹರಸೂರು, ನೀಲಕಂಠಪ್ಪ ಭಜಂತ್ರಿ, ಕಿರಣ, ಅಮರೇಶ ನಂದಿಹಾಳ, ಆನಂದ ಪುಷ್ಪಾವತಿ ಸೊಪ್ಪಿಮಠ, ಮ್ಯಾನೇಜರ್‌ ಸತ್ಯನಾರಾಯಣ, ರಾಘವೇಂದ್ರ, ಶಿವಕುಮಾರ ಮಾನವಿಬಾವಿ, ಜಗದೀಶ, ಆಂಜನೇಯ ಸೇರಿ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next