ಮಸ್ಕಿ: ಕಳೆದ 13 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ವಂತ ಕಟ್ಟಡ ಮಂಜೂರಿ ಮಾಡಲು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು ಹೇಳಿದರು.
ಪಟ್ಟಣದ ಬಾಳೆಕಾಯಿಯವರ ಮಿಲ್ನ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ (ಹಿಂದುಳಿದ ವರ್ಗ) ವಸತಿ ಶಾಲೆಗೆ ಮಂಗಳವಾರ ಭೆೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಅವರು ಮಾತನಾಡಿದರು.
ಕಳೆದ 13 ವರ್ಷದಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸರ್ಕಾರ ಇದುವರೆಗೆ ಸ್ವಂತ ಕಟ್ಟಡ ಏಕೆ ಮಂಜೂರಿ ಮಾಡಿಲ್ಲ ಎಂಬುದು ತಿಳಿದಿಲ್ಲ. ಈ ಕೂಡಲೇ ಅಧಿಕಾರಿಗಳ ಜತೆ ಮಾತನಾಡಿ ಮಾಹಿತಿ ಪಡೆದು ನಂತರ ಸಚಿವರ ಗಮನಕ್ಕೆ ತಂದು ಸ್ವಂತ ಕಟ್ಟಡ ಮಂಜೂರಿಗೆ ಪ್ರಯತ್ನಿಸಲಾಗುವುದು ಎಂದರು.
ಅಧಿಕಾರಿಗಳಿಗೆ ತಾಕೀತು: ದೂರವಾಣಿ ಮೂಲಕ ವಸತಿ ಶಿಕ್ಷಣ ಸಂಘದ ನಿರ್ದೇಶಕರೊಂದಿಗೆ ಮಾತನಾಡಿ, ಹೈಕ ಭಾಗದಲ್ಲಿ ಬಿಸಿಲಿನಿಂದ ಜನರು ರೋಗಕ್ಕೆ ತುತ್ತಾಗುವ ಸಂಭವವಿದೆ. ಇಂತಹ ಸಮಯದಲ್ಲಿ ವಸತಿ ಶಾಲೆಯನ್ನು ಟಿನ್ ಶೆಡ್ ನಡೆಸುತ್ತಿರುವುದಕ್ಕೆ ಅವರನ್ನು ತರಾಟೆಗೆ ತೆಗೆದುಕೊಂಡು, ಮೊದಲು ಸ್ವಂತ ಕಟ್ಟಡ ಮಂಜೂರಿಗೆ ಕ್ರಮ ವಹಿಸುವಂತೆ ತಾಕೀತು ಮಾಡಿದರು.
ವಸತಿ ಶಿಕ್ಷಣ ಸಂಸ್ಥೆ ಸರ್ಕಾರದ ಅಂಗ ಸಂಸ್ಥೆಯಾಗಿದೆ. ಇದನ್ನು ಶಿಕ್ಷಣ ಇಲಾಖೆ ಜೊತೆಗೆ ವಿಲೀನ ಮಾಡಲು ಕಳೆದ ತಿಂಗಳು ವಸತಿ ಶಿಕ್ಷಣ ಸಿಬ್ಬಂದಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸ್ಥಳಕ್ಕೆ ಖುದ್ದು ನಾನೇ ಹೋಗಿ ಬೇಡಿಕೆ ಆಲಿಸಿದ್ದೇನೆ. ನಿಮ್ಮ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಸಚಿವರ ಗಮನಕ್ಕೆ ತಂದಿದ್ದೇನೆ. ಅಧಿಕಾರಿಗಳ ಜತೆಯೂ ಚರ್ಚಿಸಿ ಒಂದು ತಿಂಗಳಲ್ಲಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಶಿಕ್ಷಕರಿಗೆ ಭರವಸೆ ನೀಡಿದರು. ಪ್ರಾಂಶುಪಾಲ ಯಂಕೋಬ ದೇವಾಪುರ, ಶಿಕ್ಷಕರಾದ ಸುಭಾಷಚಂದ್ರ, ಇಬ್ರಾಹಿಂಬಾಷಾ, ಶರಣಪ್ಪ, ಪ್ರಭಾರಿ ವಸತಿ ನಿಲಯ ಪಾಲಕಿ ಶರೀಫಾಬೇಗಂ ಇದ್ದರು.
ಸನ್ಮಾನ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೆೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು ಅವರಿಗೆ ಶಾಲೆ ವತಿಯಿಂದ ಸನ್ಮಾನಿಸಲಾಯಿತು.