Advertisement

ಆರೋಗ್ಯವಂತರಿಗೆ ಮಾಸ್ಕ್ ಅನಗತ್ಯ: ಡಿಸಿ

12:50 AM Mar 17, 2020 | mahesh |

ಮಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಮಾಸ್ಕ್ ಹೆಚ್ಚಾಗಿ ಧರಿಸುತ್ತಿರುವುದು ಕಂಡುಬರುತ್ತಿದೆ. ಆದರೆ ಆರೋಗ್ಯವಂತರಿಗೆ ಮಾಸ್ಕ್ ಅಗತ್ಯವಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ಕೈಗಾರಿಕೋದ್ಯಮಿಗಳ, ಉದ್ಯಮ ಸಂಸ್ಥೆಗಳ ಸಭೆ ನಡೆಸಿ ಅವರು ಸೋಮವಾರ ಮಾತನಾಡಿದರು. ಅನಾರೋಗ್ಯ ಪೀಡಿತರು ಮತ್ತು ರೋಗ ಲಕ್ಷಣ ಇರುವವರು ಮಾತ್ರ ಮಾಸ್ಕ್ ಧರಿಸಬೇಕಾಗಿದೆ. ಆದಾಗ್ಯೂ ಜಿಲ್ಲೆಯಲ್ಲಿ ಮಾಸ್ಕ್ ಸಂಗ್ರಹ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಔಷಧ ನಿಯಂತ್ರಣ ಇಲಾಖೆ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲಿದೆ. ಮಾಸ್ಕ್ ದರದ ಮೇಲೆ ನಿಗಾ ಇಡಲು ಸೂಚಿಸಲಾಗಿದೆ ಎಂದರು.

ಜಿಲ್ಲೆಯ ಎಲ್ಲ ಕೈಗಾರಿಕಾ ಘಟಕಗಳು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಕಾಯಿಲೆ ಸಾಂಕ್ರಾಮಿಕವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ದೇಶ-ವಿದೇಶಗಳಲ್ಲಿ ಪ್ರವಾಸ ಕೈಗೊಂಡಿರುವವರ ಮೇಲೆ ವೈದ್ಯಕೀಯ ನಿಗಾ ಇಟ್ಟು ಅವರನ್ನು 28 ದಿನಗಳ ನಿಗಾ ಅವಧಿಯಲ್ಲಿಡಬೇಕು. ಅಲ್ಲದೇ ಅವರ ಕುಟುಂಬ ಸದಸ್ಯರು, ಅದರಲ್ಲೂ 60 ವರ್ಷ ಮೇಲಿನವರ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಕೈಗಾರಿಕೋದ್ಯಮಿಗಳು ದೇಶ ವಿದೇಶಗಳಿಗೆ ತಮ್ಮ ಪ್ರವಾಸವನ್ನು ಆದಷ್ಟು ನಿಯಂತ್ರಿಸಬೇಕು. ವ್ಯವಹಾರ ಸಂಬಂಧಿತ ವಿದೇಶೀ ಸಭೆಗಳನ್ನು ಮುಂದೂಡಬೇಕು ಎಂದರು.

ಇಎಸ್‌ಐ ಆಸ್ಪತ್ರೆ ಕೊರೊನಾ ನಿಯಂತ್ರಣಕ್ಕೆ
ಜಿಲ್ಲೆಯಲ್ಲಿ ಕೊರೊನಾ ವ್ಯಾಪಿಸದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ ಹಾಗೂ ನವ ಮಂಗಳೂರು ಬಂದರಿಗೆ ಆಗಮಿಸುವ ವಿದೇಶಿ ಯಾತ್ರಿಕರ ಮೇಲೆ ವೈದ್ಯಕೀಯ ನಿಗಾ ಇರಿಸಲಾಗಿದೆ. ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೊಲೇಶನ್‌ ವಾರ್ಡ್‌ ಸಿದ್ಧಪಡಿಸಲಾಗಿದೆ. ಮಂಗಳೂರಿನ ಇಎಸ್‌ಐ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೊನಾ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗುವುದು. ಇದೇರೀತಿ ಎನ್‌ಎಂಪಿಟಿ ಆಸ್ಪತ್ರೆಯಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಿಂಧೂ ತಿಳಿಸಿದರು.

Advertisement

ಎಲ್ಲ ಕೈಗಾರಿಕಾ ಘಟಕಗಳು ತಮ್ಮ ಉದ್ಯೋಗಿಗಳ ಆರೋಗ್ಯದ ಮೇಲೆ ಗಮನ ಹರಿಸಬೇಕು. ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕಾಗಿ ಅವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ಎಂದರು.
ಅಪರ ಜಿಲ್ಲಾಧಿಕಾರಿ ಎಂ. ಜೆ. ರೂಪಾ, ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್‌, ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲದಾಸ್‌ ನಾಯಕ್‌ ಉಪಸ್ಥಿತರಿದ್ದರು.

ಸ್ಥಗಿತಗೊಳ್ಳದ ಬಯೋಮೆಟ್ರಿಕ್‌
ರಾಜ್ಯಾದ್ಯಂತ ಕೊರೊನಾ ಭೀತಿ ಇರುವುದರಿಂದ ಸರಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್‌ ಅನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಬೇಕು ಎಂದು ಸರಕಾರ ಸೂಚಿಸಿದ್ದರೂ ಪಡಿತರ ಪಡೆದುಕೊಳ್ಳುವಾಗ ಬಯೋಮೆಟ್ರಿಕ್‌ ಪಡೆದುಕೊಳ್ಳಲಾಗುತ್ತಿದೆ.

ಪಡಿತರ ಪಡೆದುಕೊಳ್ಳುವಾಗ ಮತ್ತು ಇ-ಕೆವೈಸಿ ಪ್ರಕ್ರಿಯೆಗಾಗಿ ಬಯೋ ಮೆಟ್ರಿಕ್‌ ಪ್ರಕ್ರಿಯೆ ರಾಜ್ಯಾದ್ಯಂತ ನಡೆಯುತ್ತಿದ್ದು, ದ.ಕ. ಜಿಲ್ಲೆಯಲ್ಲಿಯೂ ಇದು ನಿಂತಿಲ್ಲ. ಆದರೆ ಬಯೋಮೆಟ್ರಿಕ್‌ ಪಡೆಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಬೆಂಗಳೂರಿನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳ ಸಭೆ ಸೋಮವಾರ ನಡೆದಿದ್ದು, ಈ ಬಗ್ಗೆ ಮಂಗಳವಾರ ಸ್ಪಷ್ಟ ಮಾಹಿತಿ ದೊರಕಲಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

ಬೀದಿಬದಿ ಆಹಾರದ ಅಂಗಡಿಗಳ ತೆರವು
ಮಂಗಳೂರು: ರಸ್ತೆ ಬದಿ ತಿನಿಸು ಮಾರಾಟ ತೆರವು ಕಾರ್ಯಾಚರಣೆಯನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದುವರಿಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಭೀತಿ ಇರುವುದರಿಂದ ರಸ್ತೆ ಬದಿಯ ತಿಂಡಿ ತಿನಿಸುಗಳನ್ನು ತಿನ್ನಬಾರದು ಎಂಬುದಾಗಿ ಸರಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ವ್ಯಾಪಾರಿಗಳು ಮುಂದಿನ ತಾತ್ಕಾಲಿಕ ಸಮಯದವರೆಗೆ ರಸ್ತೆ ಬದಿಯ ತಿಂಡಿ-ತಿನಿಸು ವ್ಯಾಪಾರದಲ್ಲಿ ತೊಡಗಬಾರದು ಎಂದು ಪಾಲಿಕೆ ಆಯುಕ್ತರು ಶುಕ್ರವಾರ ಸೂಚಿಸಿದ್ದರು. ಅದರಂತೆ ಕಳೆದ ಎರಡು ದಿನಗಳಿಂದ ಈ ಕಾರ್ಯಾಚರಣೆ ನಡೆಯುತ್ತಿದ್ದು, ಸೋಮವಾರವೂ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next